Site icon Vistara News

Best Places to Visit in Coorg : ಕೊಡಗಿನಲ್ಲಿ ಮೈಮರೆಸುವ ಈ ತಾಣಗಳನ್ನು ನೀವು ನೋಡಲೇಬೇಕು…

madikere trip

ಕೊಡಗು- ಕರ್ನಾಟಕದ ಅತ್ಯಂತ ಸುಂದರ ಜಿಲ್ಲೆಗಳಲ್ಲಿ ಒಂದು. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು, ಅಲ್ಲಲ್ಲಿ ಹರಿವ ಜಲಪಾತಗಳು, ಮಂಜಿನಿಂದ ಆವರಿಸಿಕೊಂಡ ಪರ್ವತಗಳು, ಚಹಾ ಮತ್ತ ಕಾಫಿ ತೋಟಗಳು ಎಲ್ಲವೂ ಸೇರಿಕೊಂಡು ಕೊಡಗನ್ನು ನಿಸರ್ಗ ತಾಯಿಯ ಮಡಿಲಿನಂತೆ ಮಾಡಿವೆ. ಈ ಜಿಲ್ಲೆ ನಿಸರ್ಗ ಪ್ರೇಮಿಗಳಿಗೆ ಸ್ವರ್ಗವೇ ಸರಿ. ಅತ್ಯದ್ಭುತ ಪ್ರವಾಸಿ ತಾಣಗಳನ್ನು ಹೊಂದಿರುವ ಕೊಡಗಿನ ಮಡಿಕೇರಿಯ ಕೆಲವು ಪ್ರವಾಸಿ ತಾಣಗಳ (Madikeri Trip) ಬಗ್ಗೆ ಇಲ್ಲಿದೆ ಉಪಯುಕ್ತ ವಿವರ.

ಅಬ್ಬೆ ಜಲಪಾತ


ಅಬ್ಬೆ ಜಲಪಾತವನ್ನು ಅಬ್ಬಿ ಜಲಪಾತ ಎಂದೂ ಕರೆಯಲಾಗುತ್ತದೆ. ಇದು ಮಡಿಕೇರಿ ಪಟ್ಟಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಇದನ್ನು ಕೆಲವು ವರ್ಷಗಳ ಹಿಂದೆ ಜೆಸ್ಸಿ ಫಾಲ್ಸ್‌ ಎಂದೂ ಕರೆಯುತ್ತಿದ್ದರು. ಕಾಫಿ ತೋಟಗಳ ನಡುವೆ ಮೂಡಿರುವ ಈ ಜಲಪಾತ ಅತ್ಯಂತ ಸುಂದರವಾದ ಜಲಪಾತವೆಂದೂ ಕರೆಸಿಕೊಂಡಿದೆ. ಮಳೆಗಾಲದ ಸಮಯದಲ್ಲಿ ಇಲ್ಲಿ ಹೆಚ್ಚಿನ ನೀರಿನ ಹರಿವು ಇರುತ್ತದೆ. ಬೇಸಿಗೆಯ ಸಮಯದಲ್ಲೂ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಇಲ್ಲಿ ತೂಗು ಸೇತುವೆಯೂ ಇದೆ. ಮಳೆಗಾಲದಲ್ಲಿ ಮಳೆ ಕಡಿಮೆ ಇರುವ ಸಮಯ ಮತ್ತು ಚಳಿಗಾಲದ ಸಮಯವು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಚಿಕ್ಲಿಹೊಳೆ ಜಲಾಶಯ


ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿಕ್ಲಿಹೊಳೆ ಜಲಾಶಯವೂ ಒಂದಾಗಿದೆ. ಇದು ಮಡಿಕೇರಿ ಮತ್ತು ಕುಶಾಲನಗರ ಪಟ್ಟಣದ ನಡುವೆ ಇರುವ ನಂಜರಾಯಪಟ್ಟಣಕ್ಕೆ ಸಮೀಪದಲ್ಲಿ ಇದೆ. ಎರಡೂ ನಗರಗಳಿಂದ ಈ ಜಲಾಶಯಕ್ಕೆ 15 ಕಿ.ಮೀ ಅಂತರವಿದೆ. ಇಲ್ಲಿ ದಟ್ಟವಾದ ಅರಣ್ಯದ ಸೌಂದರ್ಯವನ್ನೂ ನೀವು ಸವಿಯಬಹುದು. ಇಲ್ಲಿಂದ ಸೂರ್ಯಾಸ್ತಮಾನದ ವಿಹಂಗಮ ನೋಟವನ್ನೂ ಕಾಣಬಹುದಾಗಿದೆ. ಈ ಜಲಾಶಯದಲ್ಲಿ ಯಾವುದೇ ಅಂಗಡಿಗಳಿಲ್ಲವಾದ್ದರಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವಾಗ ನಿಮಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು ಒಳಿತು. ಇಲ್ಲಿಗೆ ಭೇಟಿ ನೀಡಲು ಜೂನ್‌ನಿಂದ ಮಾರ್ಚ್‌ ತಿಂಗಳವರೆಗೆ ಸೂಕ್ತ ಸಮಯವಾಗಿದೆ.

ದುಬಾರೆ ಆನೆ ಶಿಬಿರ


ದುಬಾರೆ ಆನೆ ಶಿಬಿರ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿಯ ದಡದಲ್ಲಿಯೇ ಇರುವ ಆನೆ ಶಿಬಿರವಾಗಿದೆ. ಇದು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಮತ್ತು ಜಂಗಲ್‌ ಲಾಡ್ಜ್‌ಗಳು, ರೆಸಾರ್ಟ್‌ಗಳ ಸಹಯೋಗದಲ್ಲಿ ಕೈಗೊಂಡಿರುವ ಯೋಜನೆಗಳಲ್ಲಿ ಒಂದಾಗಿದೆ. ಇಲ್ಲಿ ಈ ಹಿಂದೆ ಮೈಸೂರು ದಸರಾಕ್ಕೆ ಆನೆಗಳಿಗೆ ತರಬೇತಿ ನೀಡಲಾಗುತ್ತಿತ್ತು. ಆದರೆ ಈಗ ಆನೆಗಳನ್ನು ಜಂಗಲ್‌ ರೈಡ್‌ ಮಾಡಲು ಹಾಗೂ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಆನೆಗಳ ಮೇಲೆ ಸವಾರಿ ಮಾಡುವುದಷ್ಟೇ ಅಲ್ಲದೆ ಅವುಗಳಿಗೆ ಆಹಾರ ನೀಡಬಹುದು. ಹಾಗೆಯೇ ಅವುಗಳ ಜತೆ ಹಲವು ರೀತಿಯ ಮನರಂಜನೆಯ ಚಟುವಟಿಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಹಾರಂಗಿ ಅಣೆಕಟ್ಟು


ಕುಶಾಲನಗರದ ಸಮೀಪದ ಹುದ್ಗೂರು ಗ್ರಾಮದಲ್ಲಿ ನೀವು ಹಾರಂಗಿ ಅಣೆಕಟ್ಟನ್ನು ಕಾಣಬಹುದು. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಮೊದಲನೇ ಅಣೆಕಟ್ಟು ಇದಾಗಿದೆ. ಇದು 47 ಮೀಟರ್‌ ಎತ್ತರ ಮತ್ತು 846 ಮೀಟರ್‌ ಉದ್ದವಿದೆ. ಮಡಿಕೇರಿಯಿಂದ ಸುಮಾರು 36 ಕಿ.ಮೀ ದೂರದಲ್ಲಿರುವ ಈ ಅಣೆಕಟ್ಟಿಗೆ ನೀವು ನಿಮ್ಮ ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳಬಹುದು. ನೀವು ಇಲ್ಲಿ ಏಕಾಂತದ ಸಮಯವನ್ನೂ ಕಳೆಯಬಹುದು. ಇಲ್ಲಿ ವಸತಿಗೆಂದು ಗೆಸ್ಟ್‌ ಹೌಸ್‌ಗಳನ್ನೂ ನಿರ್ಮಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಗೆಸ್ಟ್‌ ಹೌಸ್‌ನಲ್ಲಿ ಬುಕ್ಕಿಂಗ್‌ ಮಾಡಿಕೊಳ್ಳಬಹುದು.

ಹೊನ್ನಮ್ಮನ ಕೆರೆ


ಕೊಡಗಿನಲ್ಲಿ ಪ್ರಸಿದ್ಧವಾಗಿರುವ ಕೆರೆಯೆಂದರೆ ಅದು ಹೊನ್ನಮ್ಮನ ಕೆರೆ. ಪೂರ್ತಿ ಕೊಡಗು ಪ್ರದೇಶದಲ್ಲಿ ಇದೇ ದೊಡ್ಡ ಕೆರೆಯಾಗಿದೆ. ಸೋಮವಾರಪೇಟೆ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಸುಲಿಮಲ್ತೆ ಗ್ರಾಮದ ಸಮೀಪದ ದಡ್ಡಮಲ್ತೆಯಲ್ಲಿ ಈ ಕೆರೆಯಿದೆ. ಹೊನ್ನಮ್ಮ ದೇವಿಗೆ ಸಮರ್ಪಿತವಾದ ದೇವಾಲಯವೂ ಕೆರೆಯ ಸಮೀಪದಲ್ಲೇ ಇದೆ. ‌ಹೊನ್ನಮ್ಮ ದೇವಿ ಜನರ ಯೋಗಕ್ಷೇಮಕ್ಕಾಗಿ ತನ್ನ ಜೀವನವನ್ನು ತ್ಯಾಗ ಮಾಡಿದವಳು ಎಂದು ನಂಬಲಾಗುತ್ತದೆ. ಹಾಗಾಗಿ ಇಲ್ಲಿಗೆ ಪ್ರಕೃತಿ ಪ್ರಿಯರು ಮಾತ್ರವಲ್ಲದೆ ಧಾರ್ಮಿಕ ಪ್ರವಾಸಿಗರೂ ಬರುತ್ತಾರೆ. ಇಲ್ಲಿ ಬೋಟಿಂಗ್‌ ಮಾಡಬಹುದು ಹಾಗೂ ಮೀನುಗಾರಿಕೆಯನ್ನೂ ಮಾಡಬಹುದಾಗಿದೆ.

ಓಂಕಾರೇಶ್ವರ ದೇಗುಲ


ಮಡಿಕೇರಿಯ ಪ್ರಸಿದ್ಧ ಶಿವ ದೇವಾಲಯವೆಂದರೆ ಅದು ಓಂಕಾರೇಶ್ವರ ದೇವಾಲಯ. ಈ ದೇವಸ್ಥಾನವನ್ನು ಲಿಂಗ ರಾಜೇಂದ್ರನು 1820ರಲ್ಲಿ ನಿರ್ಮಿಸಿದ ಎನ್ನಲಾಗುತ್ತದೆ. ಮಡಿಕೇರಿ ನಗರದಿಂದ ಕೇವಲ ಒಂದು ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ದೇವಾಲಯವು ಇಸ್ಲಾಮಿಕ್‌ ಮತ್ತು ಗೋಥಿಕ್‌ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ ಕೊಳವಿದೆ. ಸುತ್ತಲೂ ನಾಲ್ಕು ಮಿನಾರ್‌ಗಳು ಮತ್ತು ದೇವಾಲಯದ ಮಧ್ಯದಲ್ಲಿ ಗುಮ್ಮಟವಿದೆ.

ಕೋಟೆಬೆಟ್ಟ


ಕೊಡಗಿನಲ್ಲಿ ಟ್ರೆಕ್ಕಿಂಗ್‌ಗೆ ಪ್ರಸಿದ್ಧವಾಗಿರುವ ತಾಣಗಳಲ್ಲಿ ಒಂದು ಕೋಟೆ ಬೆಟ್ಟ. ಕೊಡಗು ಪ್ರದೇಶದಲ್ಲಿ ತಡಿಯಂಡಮೋಲ್‌ ಮತ್ತು ಬ್ರಹ್ಮಗಿರಿಯ ನಂತರ ಮೂರನೇ ಅತಿ ಎತ್ತರದ ಬೆಟ್ಟ ಇದಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1620 ಮೀಟರ್‌ ಎತ್ತರದಲ್ಲಿದೆ. ಈ ಬೆಟ್ಟವು ಸೋಮವಾರಪೇಟೆ ಮತ್ತು ಮಡಿಕೇರಿಯ ನಡುವೆ ಇರುವ ಮಾದಾಪುರದಲ್ಲಿದೆ. ಬೆಟ್ಟದ ತುದಿಯಲ್ಲಿ ಶಿವನ ದೇವಾಲಯವೊಂದಿದೆ. ಹಟ್ಟಿಹೊಳೆ ಪ್ರದೇಶದಿಂದ ಸುಮಾರು 10 ಕಿ.ಮೀ ಟ್ರೆಕ್ಕಿಂಗ್‌ ಮಾಡಿದರೆ ಈ ಬೆಟ್ಟದ ತುದಿ ತಲುಪಬಹುದು. ಟ್ರೆಕ್ಕಿಂಗ್‌ ಮಾಡುವಾಗ ಹಚ್ಚ ಹಸಿರಿನ ನಿಸರ್ಗವನ್ನು ನೋಡುತ್ತಾ ಸಾಗುವುದರಿಂದ ನಿಮಗೆ ಹೆಚ್ಚಿನ ಆಯಾಸವೂ ಎನಿಸುವುದಿಲ್ಲ. ಇಲ್ಲಿ ಟ್ರೆಕ್ಕಿಂಗ್‌ ಮಾಡುವುದಕ್ಕೆ ಅನುಮತಿಯ ಅವಶ್ಯಕತೆಯಿಲ್ಲ.

ಮಡಿಕೇರಿ ಕೋಟೆ


ಮಡಿಕೇರಿ ಕೋಟೆಯನ್ನು 17ನೇ ಶತಮಾನದ ಕೊನೆಯಲ್ಲಿ ಮುದ್ದುರಾಜರು ನಿರ್ಮಿಸಿದರು. ನಂತರ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಕೋಟೆಯನ್ನು ನವೀಕರಣ ಮಾಡಲಾಯಿತು. ಈ ಕೋಟೆ ಶ್ರೀಮಂತ ಇತಿಹಾಸವನ್ನು ಹೊಂದಿದೆ. ರಾಜರ ಆಳ್ವಿಕೆ ಜತೆ ಬ್ರಿಟಿಷರ ಆಳ್ವಿಕೆಯನ್ನೂ ಕಂಡಿರುವ ಈ ಕಟ್ಟಡವನ್ನು ಇದೀಗ ಜಿಲ್ಲಾಧಿಕಾರಿ ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಕೋಟೆಯೊಳಗೆ ವೀರಭದ್ರ ದೇವರಿಗೆ ಸಮರ್ಪಿತವಾದ ದೇವಾಲಯವಿತ್ತು. 1855ರಲ್ಲಿ ಬ್ರಿಟಿಷರು ಆ ದೇವಾಲಯವನ್ನು ತೆಗೆದು ಹಾಕಿದರು. ಆ ಜಾಗದಲ್ಲಿ ಚರ್ಚ್‌ ಅನ್ನು ನಿರ್ಮಿಸಿದರು. ಚರ್ಚ್‌ ಗೋಥಿಕ್‌ ಶೈಲಿಯ ವಾಸ್ತುಶಿಲ್ಪ ಹೊಂದಿದೆ. ಈ ಚರ್ಚ್‌ ಸದ್ಯ ರಾಜ್ಯ ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿದೆ. ಕೋಟೆಯಲ್ಲಿ ಮಹಾತ್ಮಾ ಗಾಂಧಿ ಸಾರ್ವಜನಿಕ ಗ್ರಂಥಾಲಯ, ಕೋಟೆ ಮಹಾಗಣಪತಿ ದೇವಾಲಯ, ಜಿಲ್ಲಾ ಕಾರಾಗೃಹ ಸೇರಿ ಅನೇಕ ಕಟ್ಟಡಗಳು ಇವೆ.

ಮಲ್ಲಳ್ಳಿ ಜಲಪಾತ


ಪುಷ್ಪಗಿರಿ ಬೆಟ್ಟಗಳ ಶ್ರೇಣಿಯಲ್ಲಿ ನಿಮಗೆ ಮಲ್ಲಳ್ಳಿ ಜಲಪಾತ ಕಾಣಲು ಸಿಗುತ್ತದೆ. ಸೋಮವಾರಪೇಟೆಯ ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಪಾತವಿದೆ. ಇಲ್ಲಿ ಸುಮಾರು 200 ಅಡಿ ಎತ್ತರದಿಂದ ಕುಮಾರಧಾರಾ ನದಿ ಧುಮ್ಮಿಕ್ಕುತ್ತದೆ. ಇದು ಟ್ರೆಕ್ಕಿಂಗ್‌ ತಾಣ ಕೂಡ ಹೌದು. ಈ ಜಲಪಾತವು ಸೋಮವಾರಪೇಟೆಯಿಂದ 25 ಕಿಲೋಮೀಟರ್ ದೂರದಲ್ಲಿದೆ ಮತ್ತು ಕುಶಾಲನಗರದಿಂದ 42 ಕಿಮೀ ದೂರದಲ್ಲಿದೆ. ಮಳೆಗಾಲದಲ್ಲಿ ಜಲಪಾತದಲ್ಲಿ ಹೆಚ್ಚು ನೀರು ಇರುವುದರಿಂದ ಅದು ಹೆಚ್ಚು ಸುಂದರವಾಗಿ ಕಾಣುತ್ತದೆ.

ಮಾಂದಲಪಟ್ಟಿ


ಅಬ್ಬೆ ಜಲಪಾತಕ್ಕೆ ಹೋಗುವ ದಾರಿಯಲ್ಲೇ ಈ ಟ್ರೆಕ್ಕಿಂಗ್‌ ಸ್ಥಳ ನಿಮಗೆ ಸಿಗುತ್ತದೆ. ಮಡಿಕೇರಿಯಿಂದ ಸುಮಾರು 25 ಕಿ.ಮೀ ದೂರದಲ್ಲಿ ಮಾಂದಲಪಟ್ಟಿಯಿದೆ. ಇಲ್ಲಿ ಹೆಚ್ಚಿನ ಪ್ರವಾಸಿಗರೇನು ಇರುವುದಿಲ್ಲವಾದ್ದರಿಂದ ನೀವು ಅರಾಮವಾಗಿ ಟ್ರೆಕ್ಕಿಂಗ್‌ ಮಾಡಬಹುದು. ಇಲ್ಲಿ ಟ್ರೆಕ್ಕಿಂಗ್‌ ಮಾಡುವುದಕ್ಕೂ ಮೊದಲು ಅಧಿಕಾರಿಗಳಿಂದ ಪ್ರವೇಶ ಟಿಕೆಟ್‌ ತೆಗೆದುಕೊಳ್ಳಬೇಕು. ಇಲ್ಲಿಗೆ ಯಾವುದೇ ಬಸ್ಸುಗಳ ಸಂಪರ್ಕ ಇಲ್ಲವಾದ್ದರಿಂದ ನೀವು ಬಾಡಿಗೆ ವಾಹನಗಳನ್ನು ಮಾಡಿಸಿಕೊಂಡು ಮಾಂದಲಪಟ್ಟಿಗೆ ಹೋಗಬಹುದು.

ನಾಲ್ಕನಾಡ್‌ ಅರಮನೆ


ನಾಲ್ಕನಾಡ್‌ ಅರಮನೆಯು ಯುವಕಪಾಡಿ ಹೆಸರಿನ ಹಳ್ಳಿಯ ಸಮೀಪದಲ್ಲಿದೆ. ಇದು ಮಡಿಕೇರಿಯಿಂದ 45 ಕಿ.ಮೀ ದೂರದಲ್ಲಿದೆ. ಇದನ್ನು 1792ರಲ್ಲಿ ಹಾಲೇರಿ ದೊರೆ ದೊಡ್ಡ ವೀರರಾಜೇಂದ್ರ ನಿರ್ಮಿಸಿದರು. ನಂತರ 1796ರಲ್ಲಿ, ದೊಡ್ಡ ವೀರರಾಜೇಂದ್ರ ಇಲ್ಲಿ ಮಹಾದೇವ ಅಮ್ಮಾಜಿಯನ್ನು ವಿವಾಹವಾದರು. ಟಿಪ್ಪು ಸುಲ್ತಾನನ ಸೈನ್ಯದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಅರಮನೆ ನಿರ್ಮಿಸಲಾಗಿತ್ತು. ಈ ಅರಮನೆಯಿಂದ ಮಡಿಕೇರಿಯವರೆಗೆ ಸುರಂಗ ಮಾರ್ಗವನ್ನೂ ಮಾಡಿಕೊಳ್ಳಲಾಗಿತ್ತು. ಕೊಡಗು ಜಿಲ್ಲೆಯ ಮೇಲೆ ಬ್ರಿಟಿಷರ ಆಕ್ರಮಣದ ಸಮಯದಲ್ಲಿ ಹಾಲೇರಿ ಕುಟುಂಬದ ಕೊನೆಯ ಚಕ್ರವರ್ತಿ ಚಿಕ್ಕವೀರ ರಾಜೇಂದ್ರ ಕೂಡ ಈ ಅರಮನೆಯಲ್ಲಿ ಆಶ್ರಯ ಪಡೆದಿದ್ದರು. ಅರಮನೆಯ ಚಾವಣಿಗಳು ಮತ್ತು ಗೋಡೆಗಳು ಅನೇಕ ಪ್ರಾಚೀನ ವರ್ಣಚಿತ್ರಗಳು ಮತ್ತು ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ಅರಮನೆಯೊಳಗೆ ಕಲ್ಯಾಣ ಮಂಟಪವನ್ನು ಕಾಣಬಹುದಾಗಿದೆ. ಇಲ್ಲಿ ಭವ್ಯವಾದ ದರ್ಬಾರ್ ಕೂಡ ಇದೆ. ಹಾಗೆಯೇ ನೆಲಮಾಳಿಗೆಯಲ್ಲಿ ರಾಜ ಅಡಗುವುದಕ್ಕೆಂದು ಮಾಡಿಕೊಂಡಿದ್ದ ಎರಡು ಕಪ್ಪು ಕೋಣೆಗಳಿವೆ.

ನೆಹರು ಮಂಟಪ


ಪ್ರಕೃತಿ ಪ್ರಿಯರಿಗೆ ಏಕಾಂತವಾಗಿ ಕಾಲ ಕಳೆಯಬೇಕೆಂದರೆ ಅವರು ನೆಹರು ಮಂಟಪಕ್ಕೆ ಭೇಟಿ ನೀಡಬೇಕು. ಮಡಿಕೇರಿ ಆಕಾಶವಾಣಿ ಕೇಂದ್ರ ಹಿಂಭಾಗದಲ್ಲಿರುವ ಬೆಟ್ಟದ ತುದಿಯಲ್ಲಿ ಈ ಸ್ಥಳವಿದೆ. ಇಲ್ಲಿಗೆ ತಲುಪಲು ಪ್ರವಾಸಿಗರು 25-30 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಇಲ್ಲಿಂದ ಸುತ್ತಲೂ ತುಂಬಿಕೊಂಡಿರುವ ಹಸಿರನ್ನು ನೀವು ಕಣ್ತುಂಬಿಸಿಕೊಳ್ಳಬಹುದು.

ಪಾಡಿ ಇಗ್ಗುತಪ್ಪ ದೇಗುಲ


ಈ ದೇವಸ್ಥಾನವು ಕಕ್ಕಬೆ ಪಟ್ಟಣದಲ್ಲಿದೆ. 1810ರಲ್ಲಿ ಲಿಂಗರಾಜೇಂದ್ರರಿಂದ ನಿರ್ಮಿಸಲ್ಪಟ್ಟ. ಇದು ಅತ್ಯಂತ ಪುರಾತನವಾದ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಕೊಡವರಲ್ಲಿ ಅತ್ಯಂತ ಮಹತ್ವದ್ದಾಗಿದೆ. ದೇಗುಲವು ಮಡಿಕೇರಿ ನಗರದಿಂದ ವಿರಾಜಪೇಟೆಯ ಕಡೆಗೆ 45 ಕಿ.ಮೀ ದೂರದಲ್ಲಿದೆ. ಸುಬ್ರಹ್ಮಣ್ಯ ದೇವರ ಇನ್ನೊಂದು ಹೆಸರಾದ ಇಗ್ಗುತಪ್ಪ ದೇವರಿಗೆ ಈ ದೇವಾಲಯ ಸಮರ್ಪಿತವಾಗಿದೆ. ಈ ದೇಗುಲವು ಕೊಡವರ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ವರ್ಷ ಮಾರ್ಚ್‌ ತಿಂಗಳಲ್ಲಿ ಈ ದೇಗುಲದ ಉತ್ಸವವನ್ನು ನಡೆಸಲಾಗುತ್ತದೆ.

ರಾಜಾ ಸೀಟ್‌


ಮಡಿಕೇರಿ ಪಟ್ಟಣದಲ್ಲಿರುವ ರಾಜಾ ಸೀಟ್‌ ಆಗಿನ ಕಾಲದ ಕೂರ್ಗ್‌ ರಾಜರ ನೆಚ್ಚಿನ ಸ್ಥಳವಾಗಿತ್ತು. ಇಲ್ಲಿಂದ ನೋಡಿದರೆ ನಿಮಗೆ ಸುತ್ತಲಿನ ಕಣಿವೆ ಪ್ರದೇಶವು ನಿಮಗೆ ಅತ್ಯದ್ಭುತವಾಗಿ ಕಾಣಿಸುತ್ತದೆ. ಬಿಸಿಲಿನ ಸಮಯದಲ್ಲಿ ಹೋಗದೆ ಬೆಳಗಿನ ಸಮಯದಲ್ಲಿ ಹಾಗೂ ಸಂಜೆಯ ಸಮಯದಲ್ಲಿ ಇಲ್ಲಿಗೆ ಹೋದರೆ ನಿಮಗೆ ತಂಪಾದ ನಿಸರ್ಗ ಕಾಣಸಿಗುತ್ತದೆ. ಉದ್ಯಾನವನದ ಎಡಭಾಗದಲ್ಲಿ, ಮಹಾತ್ಮ ಗಾಂಧಿಯವರ ಅವಶೇಷಗಳನ್ನು ಇರಿಸಲಾಗಿರುವ ಗಾಂಧಿ ಮಂಟಪವಿದೆ. ಉದ್ಯಾನವಾಗಿರುವ ಇಲ್ಲಿ ಮಕ್ಕಳ ಮನೋರಂಜನೆಗೆಂದು ಆಟದ ಸಾಮಾಗ್ರಿಗಳನ್ನೂ ಇರಿಸಲಾಗಿದೆ. ಇಲ್ಲಿ ಆಟಿಕೆ ರೈಲೂ ಇದ್ದು, ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಉದ್ಯಾನ ಪ್ರವೇಶಿಸಲು ಒಬ್ಬರಿಗೆ 5 ರೂ. ಶುಲ್ಕ ವಿಧಿಸಲಾಗುತ್ತದೆ.

ಸುಂಟಿಕೊಪ್ಪ


ಮಡಿಕೇರಿಯಿಂದ 15 ಕಿ.ಮೀ ದೂರದಲ್ಲಿ ನಿಮಗೆ ಸುಂಟಿಕೊಪ್ಪ ಸಿಗುತ್ತದೆ. ಇಲ್ಲಿ ಕಾಫಿ ತೋಟ ಹೆಚ್ಚಾಗಿದ್ದು, ಕಣ್ಣು ತಿರುಗಿಸಿದಲ್ಲೆಲ್ಲ ಹಸಿರೇ ಕಾಣಸಿಗುತ್ತದೆ. ಪ್ರಕೃತಿ ಪ್ರಿಯರಿಗೆ ಇದು ಹೇಳಿ ಮಾಡಿಸಿರುವ ಸ್ಥಳ ಎನ್ನಬಹುದು. ಇಲ್ಲಿ ನೀವು ಅನೇಕ ರೀತಿಯ ವಲಸೆ ಪಕ್ಷಿಗಳು ಮತ್ತು ನಿವಾಸಿ ಪಕ್ಷಿಗಳನ್ನೂ ಕಾಣಬಹುದು. ಹಾಗಾಗಿ ಪಕ್ಷಿ ಪ್ರಿಯರಿಗೂ ಈ ಸ್ಥಳ ಇಷ್ಟವಾಗುತ್ತದೆ. ಇಲ್ಲಿ ಅಯ್ಯಪ್ಪ ದೇವಾಲಯವೂ ಇದ್ದು, ಧಾರ್ಮಿಕ ಪ್ರವಾಸಿಗರಿಗೂ ಇದು ಸೂಕ್ತ ಸ್ಥಳವಾಗಿದೆ. ಇಲ್ಲಿ ಅನೇಕ ಕಾಟೇಜ್‌ಗಳು, ಹೋಮ್‌ ಸ್ಟೇಗಳು, ಹೋಟೆಲ್‌ಗಳು ಇರುವುದರಿಂದ ವಾಸ ಹೂಡುವುದಕ್ಕೂ ಸಮಸ್ಯೆಯಿರುವುದಿಲ್ಲ.

ತಡಿಯಂಡಮೋಲ್ ಟ್ರೆಕ್ಕಿಂಗ್‌


ಟ್ರೆಕ್ಕಿಂಗ್‌ ಪ್ರಿಯರಿಗೆ ಕೊಡಗಿನಾದ್ಯಂತ ಹಲವಾರು ಸ್ಥಳಗಳಿವೆ. ಅವುಗಳಲ್ಲಿ ಒಂದು ತಡಿಯಂಡಮೋಲ್‌ ಟ್ರೆಕ್ಕಿಂಗ್‌ ಸ್ಥಳ. ಈ ಸ್ಥಳ ಸಮುದ್ರ ಮಟ್ಟದಿಂದ 1746 ಮೀಟರ್‌ ಎತ್ತರದಲ್ಲಿದೆ. ಇದು ಕಕ್ಕಬೆ ಪಟ್ಟಣದಿಂದ 8 ಕಿ.ಮೀ ಹಾಗೂ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ. ಚಳಿಗಾಲದ ಆರಂಭದ ಅವಧಿಯಲ್ಲಿ ಇಲ್ಲಿ ಟ್ರೆಕ್ಕಿಂಗ್‌ ಮಾಡುವುದು ಸೂಕ್ತ. ಇಲ್ಲಿಗೆ ಜೀಪ್‌ನಂತಹ ವಾಹನದಲ್ಲಿ ಮೂರನೇ ಒಂದು ಭಾಗವನ್ನು ಕ್ರಮಿಸಬಹುದು. ಇನ್ನು ಬೆಟ್ಟದ ತುದಿ ತಲುಪುವುದಕ್ಕೆ ಕಡಿದಾದ ದಾದಿಯಲ್ಲಿ ಚಾರಣ ಮಾಡಬೇಕಾಗುತ್ತದೆ. ಚಾರಣದ ಮಧ್ಯೆ ನಾಲ್ಕನಾಡ್‌ ಅರಮನೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು. ತಡಿಯಂಡಮೋಲ್‌ನಿಂದ ಪಾಡಿ ಇಗ್ಗುತಪ್ಪ ದೇವಸ್ಥಾನಕ್ಕೂ ಭೇಟಿ ನೀಡಬಹುದು. ಕೊಡವರ ಪ್ರಮುಖ ದೇವಾಲಯಗಳಲ್ಲಿ ಒಂದಾದ ಇದು ಕೆಲವೇ ಕಿಲೋಮೀಟರ್ ದೂರದಲ್ಲಿದೆ.

ತಲಕಾವೇರಿ


ಬ್ರಹ್ಮಗಿರಿ ಬೆಟ್ಟದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ತಲಕಾವೇರಿ. ಇದು ಭಾಗಮಂಡಲದಿಂದ 8 ಕಿ.ಮೀ ಹಾಗೂ ಮಡಿಕೇರಿಯಿಂದ 48 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 1276 ಮೀಟರ್‌ ಎತ್ತರದಲ್ಲಿರುವ ಈ ತಲಕಾವೇರಿಯಲ್ಲಿ ತೀರ್ಥ ಕುಂಡಿಕೆ ಅಥವಾ ಬ್ರಹ್ಮ ಕುಂಡಿಕೆ ಎಂದು ಕರೆಯಲ್ಪಡುವ ನೀರಿನ ಬುಗ್ಗೆ ಇದೆ. ಇದು ಕಾವೇರಿ ನದಿಯ ಮೂಲ ಎಂದು ಹೇಳಲಾಗುತ್ತದೆ. ಈ ಬ್ರಹ್ಮ ಕುಂಡಿಕೆ ಸಮೀಪದಲ್ಲಿಯೇ ದೇಗುಲವಿದೆ. ಅದರಲ್ಲಿ ನೀರಿನ ಪುಷ್ಕರಣಿಯಿದ್ದು, ಅಲ್ಲಿ ಭಕ್ತಾದಿಗಳು ಸ್ನಾನ ಮಾಡಬಹುದು. ಇಲ್ಲಿ ಒಂದು ಶಿವನ ದೇವಾಲಯವಿದ್ದರೆ ಇನ್ನೊಂದು ಗಣೇಶ ದೇಗುಲವಿದೆ. ತಲಕಾವೇರಿಯಿಂದ ಬ್ರಹ್ಮಗಿರಿ ಶಿಖರಕ್ಕೆ ಹೋಗಬಹುದು. ಪುರಾಣಗಳ ಪ್ರಕಾರ ಈ ಗಿರಿಯಲ್ಲಿ ಸಪ್ರ ಮಹರ್ಷಿಗಳು ವಿಶೇಷ ಯಜ್ಞವನ್ನು ಮಾಡಿದರು ಎಂದು ನಂಬಲಾಗುತ್ತದೆ.

ಯೆಮ್ಮೆಮಾಡುವಿನ ದರ್ಗಾ ಶರೀಫ್‌


ಕೊಡಗಿನ ಮುಸ್ಲಿಂ ಧರ್ಮೀಯರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದು ಯೆಮ್ಮೆಮಾಡುವಿನ ದರ್ಗಾ ಶರೀಫ್‌. ಇದು ನಾಪೋಕ್ಲು ಪಟ್ಟಣದ ಬಳಿಯಿದೆ. ಹಜರತ್ ಸೂಫಿ ಶಹೀದ್ ಮತ್ತು ಸಯ್ಯದ್ ಹಸನ್ ಸಕಾಫ್ ಹಲ್ರಮಿರ್ ಅವರ ನೆನಪಿಗಾಗಿ ಈ ಸಮಾಧಿಯನ್ನು ನಿರ್ಮಿಸಲಾಗಿದೆ. ಈ ಇಬ್ಬರೂ ಸೂಫಿ ಸಂತರು ಸುಮಾರು 366 ವರ್ಷಗಳ ಹಿಂದೆ ಪರ್ಷಿಯಾದಿಂದ ಆಗಮಿಸಿದ್ದರು. ಅವರು ಜನರಿಗೆ ಧಾರ್ಮಿಕ ಪ್ರವಚನಗಳನ್ನು ನೀಡಿದರು ಮತ್ತು ಬಡವರ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇಲ್ಲಿ ವಾರ್ಷಿಕ ಹಬ್ಬವನ್ನು 8 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಆಚರಣೆಗೆ ಉರುಸ್‌ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ಎರಡರಿಂದ ಮೂರು ಲಕ್ಷ ಜನರು ಆಗಮಿಸುತ್ತಾರೆ.. ಮಹಿಳಾ ಯಾತ್ರಿಗಳಿಗೆ ದರ್ಗಾದೊಳಗೆ ಪ್ರವೇಶವಿಲ್ಲ. ಅವರಿಗೆಂದೇ ಪ್ರತ್ಯೇಕ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.

ಕರಡಾ ಗ್ರಾಮ


ಕಕ್ಕಬೆ ಪಟ್ಟಣದ ಸಮೀದಲ್ಲಿ ಕರಡಾ ಹೆಸರಿನ ಗ್ರಾಮವಿದೆ. ಇದು ವಿರಾಜಪೇಟೆಯಿಂದ 18 ಕಿ.ಮೀ ಮತ್ತು ಮಡಿಕೇರಿಯಿಂದ ಸರಿಸುಮಾರು 30 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಕೂರ್ಗ್‌ನ ಕೆಲವು ಶ್ರೀಮಂತ ಪೂರ್ವಜರ ಮನೆಗಳನ್ನು ಹೊಂದಿದೆ. ಕೆಲವು ಪೂರ್ವಜರ ಮನೆಗಳು 200-300 ವರ್ಷಗಳಷ್ಟು ಹಳೆಯದಾಗಿದ್ದು, ಪ್ರವಾಸಿಗರಿಗೆ ಇತಿಹಾಸ ಮತ್ತು ಪುರಾತನ ಜೀವನದ ಸ್ಪರ್ಶವನ್ನು ನೀಡುತ್ತವೆ. ಈ ಮನೆಗಳ ಸುತ್ತಲೂ ಕಾಫಿ ತೋಟ ಆವರಿಸಿಕೊಂಡಿರುವುದರಿಂದ ನಿಮಗೆ ಮನಸ್ಸಿಗೆ ಮುದ ಸಿಕ್ಕಂತಾಗುತ್ತದೆ. ಹಲವು ಮನೆಗಳು ಪ್ರವಾಸಿಗರಿಗೆ ಗೆಸ್ಟ್‌ ಹೌಸ್‌ ರೀತಿಯಲ್ಲಿ ವ್ಯವಸ್ಥೆಯನ್ನೂ ಕಲ್ಪಿಸಿಕೊಡುತ್ತಿವೆ. ಹಾಗಾಗಿ ನೀವು ಅಲ್ಲಿ ವಾಸವಿದ್ದು, ಕೊಡಗಿನ ಸೌಂದರ್ಯದ ಜತೆ ಊಟವನ್ನು ಸವಿದು ಬರಬಹುದು.

ಗದ್ದಿಗೆ


ರಾಜ ವೀರರಾಜೇಂದ್ರ, ಲಿಂಗ ರಾಜೇಂದ್ರ ಮತ್ತು ಅವರ ಆಸ್ಥಾನದ ಪುರೋಹಿತರನ್ನು ಸಮಾಧಿ ಮಾಡಿದ ಸ್ಥಳವಿದು. ಇದೇ ಪ್ರದೇಶದಲ್ಲಿ ಅವರ ಕೆಚ್ಚೆದೆಯ ಮತ್ತು ನಿಷ್ಠಾವಂತ ಸೈನಿಕರಿಗೆ ಸೇರಿದ ಎರಡು ಸಣ್ಣ ಸಮಾಧಿಗಳಿವೆ. ಮೂರು ಮುಖ್ಯ ಸಮಾಧಿಗಳು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಸಮಾಧಿಯ ನಾಲ್ಕೂ ತುದಿಗಳಲ್ಲಿ ಗೋಪುರ ಹಾಗೂ ಮಧ್ಯದಲ್ಲಿ ಗುಮ್ಮಟವನ್ನು ನಿರ್ಮಿಸಲಾಗಿದೆ. ಇದು ನೋಡುವುದಕ್ಕೆ ಮುಸ್ಲಿಂ ದರ್ಗಾದಂತೆ ಕಾಣುತ್ತದೆ. ಇದನ್ನು 18ನೇ ಶತಮಾನದಲ್ಲಿ ನಿರ್ಮಿಸಲಾದ ದಾಖಲೆಯಿದೆ.

Exit mobile version