ಬೆಳಗಾವಿ: ಬೈಲಹೊಂಗಲ ತಾಲೂಕಿನ ನೇಗಿನಹಾಳ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ (50) ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠದ ಆವರಣದಲ್ಲಿರುವ ಅವರ ಮಲಗುವ ಕೋಣೆಯಲ್ಲಿಯೇ ಶ್ರೀಗಳು ನೇಣು ಹಾಕಿಕೊಂಡಿದ್ದಾರೆ. ಎಂದಿನಂತೆ, ಸೋಮವಾರ ಬೆಳಿಗ್ಗೆ ಅವರ ಸೇವಕ ಶ್ರೀಗಳನ್ನು ನಿದ್ದೆಯಿಂದ ಎಬ್ಬಿಸಲು ಹೋದರು. ಮಲಗುವ ಕೋಣೆ ಒಳಗಡೆಯಿಂದ ಚಿಲಕ ಹಾಕಲಾಗಿತ್ತು. ಎಷ್ಟು ಬಾರಿ ಕರೆದರೂ ಸ್ವಾಮೀಜಿ ಓಗೊಡಲಿಲ್ಲ. ಬಳಿಕ ಕಿಟಕಿಯನ್ನು ತಳ್ಳಿ ಇಣುಕಿದಾಗ ಅವರು ನೇಣು ಹಾಕಿಕೊಂಡಿದ್ದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ 12ರವರೆಗೂ ಶ್ರೀಗಳು ಭಕ್ತರ ಜತೆಗೆ ಮಾತನಾಡಿದ್ದರು. ಎಂದಿನಂತೆ ಸಹಜವಾಗಿಯೇ ಇದ್ದರು. ನಂತರ ಮಲಗಲು ಅವರ ಕೋಣೆಗೆ ಹೋಗಿದ್ದರು. 2007ರಲ್ಲಿ ಅವರು ಗುರು ಮಡಿವಾಳೇಶ್ವರ ಪೀಠವನ್ನು ಅಲಂಕರಿಸಿದ್ದರು. ಅವರ ಸೇವಕರು ಹಾಗೂ ಕೆಲವು ಶಿಷ್ಯರು ಕೂಡ ಮಠದಲ್ಲೇ ಇರುತ್ತಾರೆ. ಸಾಮಾಜಿಕ ಕಾರ್ಯ ನಿರತರಾದ ಶ್ರೀಗಳ ಬಗ್ಗೆ ಈ ಭಾಗದಲ್ಲಿ ಉತ್ತಮ ಹೆಸರಿದೆ.
ಮಠದತ್ತ ಭಕ್ತ ಸಂದೋಹ
ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡದ್ದು ತಿಳಿಯುತ್ತಲೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಮಠದತ್ತ ಧಾವಿಸಿ ಬಂದಿದ್ದಾರೆ. ಸ್ವಾಮೀಜಿ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಸಮಸ್ಯೆ ಏನಿತ್ತು ಎಂಬುದು ನಮಗೂ ಅಂದಾಜಿಸಲು ಆಗುತ್ತಿಲ್ಲ. ಪ್ರತಿ ದಿನ ಮಠದಲ್ಲಿ ಶ್ರಾವಣದ ಭಜನೆ ಮಾಡಿದ್ದೆವು. ಶ್ರೀಗಳ ಮಕ್ಕಳಂತೆ ಅವರನ್ನು ಗೌರವದಿಂದ ಕಾಣುತ್ತಿದ್ದೆವು ಎಂದು ಭಕ್ತರು ಹೇಳಿದ್ದರು.
ಮಹಿಳೆಯರ ಸಂಭಾಷಣೆಗೆ ನೊಂದಿದ್ದರಾ ಸ್ವಾಮೀಜಿ?
ಇತ್ತೀಚೆಗೆ ಇಬ್ಬರು ಹೆಣ್ಮಕ್ಕಳು ಪರಸ್ಪರ ಮಾತನಾಡುತ್ತಾ ಕೆಲವು ಲಿಂಗಾಯತ ಮಠಗಳ ಮಠಾಧಿಪತಿಗಳ ಕಾಮಕಾಂಡದ ಬಗ್ಗೆ ಉಲ್ಲೇಖಿಸಿದ್ದರು. ಅದರಲ್ಲಿ ಮಡಿವಾಳೇಶ್ವರ ಮಠದ ಶ್ರೀಗಳ ಹೆಸರು ಕೂಡಾ ಪ್ರಸ್ತಾಪವಾಗಿತ್ತು. ಇದರಿಂದ ಶ್ರೀಗಳು ನೊಂದಿದ್ದರು ಎಂದು ಹೇಳಲಾಗಿದೆ. ಮತ್ತು ಭಕ್ತರು ಡಿವೈಎಸ್ಪಿಗೆ ಪತ್ರವನ್ನೂ ಬರೆದಿದ್ದರು.
ಡಿವೈಎಸ್ಪಿಗೆ ಬರೆದ ಪತ್ರದಲ್ಲಿ ಏನಿತ್ತು?
ಮಠಾಧೀಶರ ಬಗ್ಗೆ ಮಹಿಳೆಯರು ಇಬ್ಬರು ಮಾತನಾಡಿದ ಆಡಿಯೋ ವೈರಲ್ ಬೆನ್ನಲ್ಲೇ ಮಠದ ವತಿಯಿಂದ ಬೈಲಹೊಂಗಲ ಡಿವೈಎಸ್ಪಿಗೆ ನೇಗಿನಹಾಳ ಗ್ರಾಮದ ಬಸವಕೇಂದ್ರ ಘಟಕ ಅಧ್ಯಕ್ಷ, ಸದಸ್ಯರು ಲಿಖಿತ ದೂರು ನೀಡಿದ್ದರು. ಸೆಪ್ಟೆಂಬರ್ 3 ರಂದು ದೂರು ನೀಡಿರುವ ಪತ್ರ ಈಗ ವೈರಲ್ ಆಗಿದೆ. ಸಂಘದ ಅಧ್ಯಕ್ಷ ಸೋಮಪ್ಪ ಬಾಗೇವಾಡಿ ನೇತೃತ್ವದಲ್ಲಿ ದೂರು ನೀಡಿ ಆಡಿಯೊ ಬಗ್ಗೆ ಸಮಗ್ರ ತನಿಖೆ ಮಾಡಲು ಆಗ್ರಹ ಮಾಡಲಾಗಿತ್ತು.
ʻʻಇಬ್ಬರು ಮಹಿಳೆಯರು ಮಠಾಧೀಶರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ. ಮನಗುಂಡಿ ಗ್ರಾಮದ ಸತ್ಯಕ್ಕ ಮತ್ತು ಗಂಗಾವತಿಯ ರುದ್ರಮ್ಮ ಎಂಬ ಮಹಿಳೆಯರು ಮಾತನಾಡಿದ ಆಡಿಯೊ ಇದು. ಇವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕುʼʼ ಎಂದು ಒತ್ತಾಯಿಸಲಾಗಿತ್ತು.