ಮಂಗಳೂರು: ಮಂಗಳೂರಿನಲ್ಲಿ ನವೆಂಬರ್ ೧೯ರಂದು ಸಂಜೆ ೪.೧೯ಕ್ಕೆ ಕುಕ್ಕರ್ ಬಾಂಬ್ ಸಿಡಿಯುವ ಕೆಲವು ದಿನಗಳ ಮುನ್ನ ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿ ದೊಡ್ಡದೊಂದು ಸ್ಫೋಟದ ಸದ್ದು ಕೇಳಿಸಿತ್ತು. ಆಗೆಲ್ಲ ಅದು ಯಾವುದೋ ಗರ್ನಲ್ ಹೊಡೆದ ಸದ್ದು ಎಂದು ಜನರು ನಂಬಿದ್ದರು. ಆದರೆ, ಈಗ ಇದೊಂದು ಟ್ರಯಲ್ ಬ್ಲಾಸ್ಟ್ ಆಗಿರಬಹುದಾ ಎಂಬ ಸಂಶಯ ತಲೆ ಎತ್ತಿದೆ.
ಮಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ನಡೆಸುವ ಮುನ್ನ ಉಗ್ರ ಶಾರಿಕ್ ಕರಾವಳಿಯ ಹಲವು ಕಡೆಗಳಲ್ಲಿ ಸಂಚರಿಸಿದ್ದ. ಉಡುಪಿ ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಓಡಾಡಿದ್ದು ಕೂಡಾ ಬೆಳಕಿಗೆ ಬಂದಿದೆ. ಹೀಗಾಗಿ ಆತ ಎಲ್ಲೆಲ್ಲಿ ಬ್ಲಾಸ್ಟ್‌ಗೆ ಪ್ಲಾನ್ ಮಾಡಿದ್ದ ಎನ್ನುವ ಬಗ್ಗೆ ಇನ್ನಷ್ಟು ಹೆಸರುಗಳು ಕೇಳಿಬಂದಿವೆ.
ಈ ನಡುವೆ, ಉಗ್ರರು, ಕಾನೂನು ಬಾಹಿರ ಅಕ್ರಮ ವ್ಯವಹಾರ ನಡೆಸುವವರು ಸಂಪರ್ಕಕ್ಕಾಗಿ ಬಳಸುವ ಸ್ಯಾಟಲೈಟ್ ಫೋನ್‌ನ ಕೆಲವು ಲಿಂಕ್‌ಗಳು ಚಾರ್ಮಾಡಿಯಲ್ಲಿ ಪತ್ತೆಯಾಗಿದ್ದವು. ಅದರ ಬೆನ್ನು ಹತ್ತಿ ಹೋದ ಪೊಲೀಸರಿಗೆ ಚಾರ್ಮಾಡಿಯ ತಪ್ಪಲಿನಲ್ಲಿ ಕೇಳಿಬಂದ ಸದ್ದಿನ ವಿಚಾರ ಗೊತ್ತಾಗಿದೆ.
ಸುಮಾರು ಹತ್ತು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯದಂಚಿನಲ್ಲಿ ದೊಡ್ಡ ಸ್ಫೋಟದ ಸದ್ದು ಕೇಳಿಬಂದಿತ್ತು. ರಾತ್ರಿ 11 ಗಂಟೆ ಸುಮಾರಿಗೆ ಭಾರೀ ಪ್ರಮಾಣದ ಸದ್ದು ಕೇಳಿ ಸ್ಥಳೀಯರಿಗೆ ಶಾಕ್ ಆಗಿತ್ತು. ಸ್ಯಾಟಲೈಟ್ ಕರೆ ಹಿಂದೆ ಬಿದ್ದ ಪೊಲೀಸರಿಗೆ ಚೆಲುವಮ್ಮ ಎಂಬುವವರಿಂದ ಮಾಹಿತಿ ದೊರಕಿದೆ.
ದೊಡ್ಡ ಸದ್ದು ಕೇಳಿಬಂದಿತ್ತು. ನಾವೆಲ್ಲ ಭಯಗೊಂಡಿದ್ದೆವು. ಕೆಲವೊಮ್ಮೆ ಆನೆ ಬಂದಾಗ ಅವುಗಳನ್ನು ಓಡಿಸಲು ಯಾರೋ ಗರ್ನಾಲ್ ಎಸೆದಿರಬಹುದು ಅಂತ ಎಲ್ಲರು ಅಂದುಕೊಂಡಿದ್ದೆವು. ಆದರೆ ಸದ್ದು ಮಾತ್ರ ಗರ್ನಾಲನ್ನು ಮೀರಿಸಿತ್ತು ಎಂದು ಅವರು ಹೇಳಿದ್ದಾರೆ. ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಆಸುಪಾಸಿನಲ್ಲಿ ಹುಡುಕಿದರಾದರೂ ಯಾವುದೆ ಸ್ಫೋಟದ ಕುರುಹುಗಳು ಕಣ್ಣಿಗೆ ಬಿದ್ದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಡುಪಿಗೂ ಬಂದಿದ್ನಾ ಉಗ್ರ ಶಾರಿಕ್; ಕೃಷ್ಣ ಮಠ ಟಾರ್ಗೆಟ್ ಆಗಿತ್ತಾ?