Site icon Vistara News

Mahadayi Jal Andolan | ಕಾಂಗ್ರೆಸ್‌ ಸರ್ಕಾರ ಬಂದ್ರೆ 2 ವರ್ಷದಲ್ಲಿ ಮಹದಾಯಿ ತಿರುವು ಯೋಜನೆ ಮುಗಿಸ್ತೇವೆ: ಸಿದ್ದರಾಮಯ್ಯ

Mahadayi Jal Andolan

ಹುಬ್ಬಳ್ಳಿ: ಬಿಜೆಪಿ ಎಷ್ಟೇ ಅಪಪ್ರಚಾರ, ಆಪರೇಷನ್ ಕಮಲ, ಹಣದ ಹೊಳೆ ಹರಿಸಿದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ.೧೦೦ ಅಧಿಕಾರಕ್ಕೆ ಬಂದೇ ಬರುತ್ತದೆ. ಜನರಿಗೆ ಸುಳ್ಳು ಹೇಳುವ, ಲೂಟಿ ಹೊಡೆಯುವ ಈ ಸರ್ಕಾರವನ್ನು ಬೇರು ಸಹಿತ ಕಿತ್ತು ಹಾಕಬೇಕು. ಅಧಿಕಾರಕ್ಕೆ ಬಂದ ನಂತರ ಎರಡೇ ವರ್ಷದಲ್ಲಿ ಮಹದಾಯಿ ತಿರುವು ಯೋಜನೆ (ಕಳಸಾ-ಬಂಡೂರಿ ಯೋಜನೆ) ಮುಗಿಸುತ್ತೇವೆ. ಇದಕ್ಕಾಗಿ (Mahadayi Jal Andolan) ಎರಡು ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಮಹದಾಯಿ ಯೋಜನೆ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ನಗರದ ನೆಹರು ಮೈದಾನದಲ್ಲಿ ಕಾಂಗ್ರೆಸ್‌ನಿಂದ ಸೋಮವಾರ ಹಮ್ಮಿಕೊಂಡಿದ್ದ ಮಹದಾಯಿ ಜಲ-ಜನ ಆಂದೋಲನದಲ್ಲಿ ಮಾತನಾಡಿ, ಅವರದೇ ಸರ್ಕಾರಗಳಿದ್ದರೂ ಮಹದಾಯಿ ಯೋಜನೆ ವಿಚಾರದಲ್ಲಿ ಮಲಗಿದ್ದಾರೆ. ಯೋಜನೆ ಡಿಪಿಆರ್‌ಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ಬಿಜೆಪಿಯವರು ವಿಜಯೋತ್ಸವ ಮಾಡಿದ್ದಾರೆ. ನಾಚಿಕೆ ಆಗಬೇಕು ನಿಮಗೆ ಎಂದು ಕಿಡಿ ಕಾರಿದರು.

ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಆದರೆ ಬಿಜೆಪಿ, ರಾಜ್ಯದ ಜನರನ್ನು ನಂಬಿಸಿ ದ್ರೋಹ ಮಾಡಿದೆ. ಅಧಿಕಾರಕ್ಕೆ ಬಂದರೆ ನೀರಾವರಿಗೆ 1.50 ಲಕ್ಷ ಕೋಟಿ ರೂಪಾಯಿ ಅನುದಾನ ನೀಡುತ್ತೇವೆ ಎಂದು ಬಿಜೆಪಿಯವರು ಪ್ರಣಾಳಿಕೆಯಲ್ಲಿ ಹೇಳಿದ್ದರು. ನಂತರ ಕೇವಲ 45 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಉಳಿದದ್ದು ಏನಾಯಿತು ಮಿಸ್ಟರ್ ಬೊಮ್ಮಾಯಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Kalasa Bhanduri | ಹೋರಾಟ ಮಾಡಿದವರನ್ನು ಹೊಡೆದು ಜೈಲಿಗೆ ಕಳಿಸಿದ್ದು ಕಾಂಗ್ರೆಸ್‌: ಸಚಿವ ಗೋವಿಂದ ಕಾರಜೋಳ

ನಾನು ಸಿಎಂ ಆಗಿದ್ದಾಗ ಪ್ರಧಾನಿಗಳಿಗೆ ಪರಿಪರಿಯಾಗಿ ಬೇಡಿದರೂ ಮಹದಾಯಿ ಸಮಸ್ಯೆ ಬಗೆಹರಿಸಲು ಒಪ್ಪಲಿಲ್ಲ. ಗೋವಾ ಕಾಂಗ್ರೆಸಿಗರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಶೆಟ್ಟರ್, ಜೋಶಿ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ನನಗೆ ಹೇಳಿದ್ದರು. ತೆಲುಗು ಗಂಗಾ ಯೋಜನೆ ವಿಚಾರದಲ್ಲಿ ಇಂದಿರಾ ಗಾಂಧಿಗೆ ಸಾಧ್ಯವಾದ್ದದ್ದು, ಇವರಿಗೆ ಯಾಕೆ ಆಗಿಲ್ಲ? ಮಿಸ್ಟರ್ ಯಡಿಯೂರಪ್ಪ, ಬೊಮ್ಮಾಯಿ ಡೋಂಗಿತನ ಬಿಟ್ಟು ಜನರಿಗೆ ಸತ್ಯ ಹೇಳುವುದನ್ನು ಕಲಿತುಕೊಳ್ಳಿ ಎಂದು ಕುಟುಕಿದರು.

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಈ ರಾಜ್ಯವನ್ನು ಉಳಿಸಬೇಕು. ಬಿಜೆಪಿಯದ್ದು 40 ಪರ್ಸೆಂಟ್‌ ಸರ್ಕಾರ. ಬಸವರಾಜ್ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ವೀಕೆಸ್ಟ್ ಮುಖ್ಯಮಂತ್ರಿ. ಭಾಷಣದಲ್ಲಿ ಮಾತ್ರ ದಮ್, ತಾಕತ್ತು ಬಗ್ಗೆ ಮಾತನಾಡುತ್ತಾರೆ. ಆರ್‌ಎಸ್‌ಎಸ್‌ ಕೈಗೊಂಬೆಯಾಗಿರುವ ಅವರು, ಆದರೆ ನರೇಂದ್ರ ಮೋದಿಯವರ ಬಳಿ ಹೋಗಿ ಗಡಗಡ ನಡಗುತ್ತಾರೆ ಎಂದು ಟೀಕಿಸಿದರು.

ಹುಬ್ಬಳ್ಳಿಯ ಖಾದ್ರಿ ದರ್ಗಾ ಮುಟ್ಟಬೇಡಿ ಎಂದು ಹೇಳಿದ್ದೆ. ಮುಸ್ಲಿಂ ಬಾಂಧವರಿಗೆ ಕರೆದು ಮಾತನಾಡಿ ಎಂದು ಸಿಎಂಗೆ ಹೇಳಿದ್ದೆ. ಆದರೆ, ಪ್ರಲ್ಹಾದ್ ಜೋಶಿ ಒತ್ತಡಕ್ಕೆ ಮಣಿದು ದರ್ಗಾ ತೆರವು ಮಾಡಿಸಿದ್ದಾರೆ. ದರ್ಗಾ ಒಡೆಯುವ ಅವಶ್ಯಕತೆ ಇರಲಿಲ್ಲ, ಟೈಮ್ ಕೊಟ್ಟಿದ್ದರೆ ಏನಾಗುತ್ತಿತ್ತು? ಈ ದ್ವೇಷದ ರಾಜಕಾರಣ ಇನ್ನೆರಡು ಮೂರು ತಿಂಗಳು ಮಾಡಬಹುದು, ಅವರನ್ನು ಮಟ್ಟ ಹಾಕಲು ಜನರು ಕಾಯುತ್ತಿದ್ದಾರೆ ಎಂದು ಕಿಡಿ ಕಾರಿದರು.

ದೇಶ ಜೋಡಿಸಲು ರಾಹುಲ್ ಗಾಂಧಿ ಭಾರತ್‌ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಆದರೆ ಇವರು ಮನಸ್ಸಿಗೆ ಹುಳಿ ಹಿಂಡಿ ಒಡೆದು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ಮನಸ್ಸು ಜೋಡಿಸುವ ಪಕ್ಷ, ಬಿಜೆಪಿ ಒಡೆಯುವ ಪಕ್ಷ. ಬಿಜೆಪಿ ಅಧಿಕಾರದಲ್ಲಿ ಇರುವವರೆಗೆ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಮಹಿಳೆಯರು ಅಸುರಕ್ಷಿತ ಎಂದು ಆಕ್ರೋಶ ಹೊರಹಾಕಿದರು.

ಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಕೇವಲ ಹಸಿ ಸುಳ್ಳು ಹೇಳುತ್ತಿದ್ದಾರೆ. ಈಗಿನ ಮುಖ್ಯಮಂತ್ರಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಮಂತ್ರಿ ಈ ಭಾಗದವರಿದ್ದಾರೆ. ಕೇಂದ್ರ, ರಾಜ್ಯ, ಗೋವಾ, ಮಹಾರಾಷ್ಟ್ರ ಸೇರಿ ನಾಲ್ಕು ಎಂಜಿನ್ ಬಿಜೆಪಿ ಸರ್ಕಾರವಿದೆ. ಇಷ್ಟೆಲ್ಲಾ ಇದ್ದರೂ ಜನರಿಗೆ ಕುಡಿಯಲು ನೀರು ಕೊಡಲು ಆಗಿಲ್ಲಾ, ಇನ್ನೂ ಯಾಕಿರಬೇಕು ಈ ಸರ್ಕಾರ ಎಂದು ಹೇಳಿದರು.

ನಮಗೆ ಬಸವಣ್ಣ, ಶಿಶುನಾಳ ಶರೀಫ, ಕನಕದಾಸ, ಕುವೆಂಪು ಕರ್ನಾಟಕ ಬೇಕು. ಕಾಂಗ್ರೆಸ್ ಸರ್ಕಾರಗಳಿದ್ದಾಗ ಜನರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೇವೆ. ಬಿಜೆಪಿ ಸರ್ಕಾರ ಮತ್ತೊಮ್ಮೆ ಬರಲು ಸಾಧ್ಯವಿಲ್ಲ, ನಾವೇ ಮುಂದಿನ ಬಜೆಟ್‌ ಮಂಡಿಸುತ್ತೇವೆ. ೧೦೦೦ ಕೋಟಿ ರೂಪಾಯಿ ಮೀಸಲಿಟ್ಟು ಮಹದಾಯಿ ಯೋಜನೆ ಜಾರಿಗೆ ತರುತ್ತೇವೆ, ಇದು ಕಾಂಗ್ರೆಸ್ ಪ್ರತಿಜ್ಞೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ್ ಮಾತನಾಡಿ, ಮಹದಾಯಿ ವಿಚಾರದಲ್ಲಿ ಈ ಭಾಗಕ್ಕೆ ಬಿಜೆಪಿ ಮೋಸ ಮಾಡಿದೆ. ಇದುವರೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಕ್ಲಿಯರೆನ್ಸ್ ತೆಗೆದುಕೊಂಡಿಲ್ಲ. ಈಗ ಅಧಿಕಾರದ ಅವಧಿ ಮುಗಿಯುವಾಗ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಮಹದಾಯಿ ನೀರನ್ನು ಇವರಿಂದ ತರಲು ಹಿಂದೆಯೂ ಸಾಧ್ಯವಾಗಿಲ್ಲ, ಮುಂದೆಯೂ ಆಗಲ್ಲ. ದೆಹಲಿ ಮತ್ತು ಬೆಂಗಳೂರಿನಲ್ಲಿರುವ ಸರ್ಕಾರಗಳು, ಉತ್ತರ ಕರ್ನಾಟಕ ಭಾಗಕ್ಕೆ ದ್ರೋಹ ಮಾಡಿವೆ. ಇವರ ಚರಿತ್ರೆಯೇ ಮೋಸದಿಂದ ಕೂಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ಕೇಂದ್ರದಲ್ಲಿ ಇರೋದು ಫೇಕ್ ಸರ್ಕಾರ. ಪ್ರಧಾನಮಂತ್ರಿಗಳ ಸರ್ಟಿಫಿಕೇಟ್ ಫೇಕ್, ಮಹದಾಯಿ ಡಿಪಿಆರ್ ಪತ್ರವೂ ಫೇಕ್‌. ದೇಶದಲ್ಲಿ ಸುಳ್ಳಿನ ಪ್ರಧಾನಿ ಇದ್ದಾರೆ, ಅವರ ಚೇಲಾ ಒಬ್ಬ ಇಲ್ಲಿ ಮಂತ್ರಿಯಿದ್ದಾರೆ ಎಂದು ಪ್ರಲ್ಹಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | SCST Reservation | 90 ದಿನದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದಿಲ್ಲ ಎಂದ ಡಿ.ಕೆ. ಶಿವಕುಮಾರ್‌

ಎಚ್.ಕೆ. ಪಾಟೀಲ್‌ ಮಾತನಾಡಿ, ಮಹದಾಯಿ ಯೋಜನೆ ಡಿಪಿಆರ್ ವಿಳಂಬ ಮಾಡಿದರು, ಈಗ ಡಿಪಿಆರ್ ಮಂಜೂರಾದರೆ ಯೋಜನೆ ಮಂಜೂರು ಆದಂತೆಯಾ? ಡಿಪಿಆರ್‌ನಲ್ಲಿ ಏನೆಲ್ಲ ಕಂಡಿಷನ್ ಹಾಕಿದ್ದಾರೆ ನೋಡಿದ್ದೀರಾ?, ಡಿಪಿಆರ್ ಪತ್ರದಲ್ಲಿ ದಿನಾಂಕ ಇರಲಿಲ್ಲ, ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಮಗೆ ಕಣ್ಣುಕಾಣಂಗಿಲ್ಲ‌ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದರು. ಜೋಶಿಯವರೇ, ನಮಗಲ್ಲ, ನಿಮಗೆ ನೆತ್ತಿ ಮೇಲೆ ಕಣ್ಣು ಬಂದಿವೆ ಎಂದು ಕಿಡಿ ಕಾರಿದರು.

ಕುಡಿಯುವ ನೀರಿಗೆ ಅರಣ್ಯ ಇಲಾಖೆ ಅನುಮತಿ ಬೇಕಿಲ್ಲ ಎಂದು ಹೇಳುವ ಜೋಶಿಯವರೇ, ಕೇಂದ್ರ ಅರಣ್ಯ ಇಲಾಖೆಗೆ ಸರ್ಕಾರದ ಕಾರ್ಯದರ್ಶಿ ಮೂಲಕ ಯಾಕೆ ನೀವು ಅರ್ಜಿ‌ ಕೊಟ್ಟಿದ್ದೀರಿ? ಡಿಸೆಂಬರ್ 30ಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು ಯಾಕೆ? ಸುಳ್ಳು ಪೋಣಿಸುವಲ್ಲಿ ಬಿಜೆಪಿಯವರು ನಿಸ್ಸೀಮರು. ಮಹದಾಯಿ ಯೋಜನೆ ಹುಟ್ಟುಹಾಕಿದ್ದು ಕಾಂಗ್ರೆಸ್. ಆ ಯೋಜನೆಯನ್ನು ಬಿಜೆಪಿಯಿಂದ ಪೂರ್ಣಗೊಳಿಸಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾವು ಔಟ್‌ಡೇಟೆಡ್ ಆಗಿಲ್ಲ, ಬಿಜೆಪಿಯವರ ವಿಶ್ವಾಸಾರ್ಹತೆ ಔಟ್‌ಡೇಟೆಡ್ ಆಗಿದೆ. ಕಳಸಾ-ಬಂಡೂರಿ ನಾಲೆ ಆಡಳಿತಾತ್ಮಕ ಮಂಜೂರಾತಿ ಕಾಂಗ್ರೆಸ್ ನೀಡಿತ್ತು. ಬಿಜೆಪಿಯವರು ಸುಳ್ಳಿನ ಶೂರರು. ಚುನಾವಣೆ ಬಂದಾಗ ಬಿಜೆಪಿಗೆ ಮಹದಾಯಿ ನೆನಪಾಗುತ್ತದೆ ಎಂದು ಟೀಕಿಸಿದರು.

ಇದನ್ನೂ ಓದಿ | Karnataka Election | ಮೊದಲ ಪಟ್ಟಿ ರೆಡಿ, 95% ಹಾಲಿ ಶಾಸಕರಿಗೆ ಕಾಂಗ್ರೆಸ್‌ ಟಿಕೆಟ್‌ ಪಕ್ಕಾ ಎಂದ ಡಿ.ಕೆ. ಶಿವಕುಮಾರ್‌

Exit mobile version