ಬೆಂಗಳೂರು: ನಗರ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಾಗಿರುವ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ (Mahalakshmi Layout Election Results) ಬಿಜೆಪಿಯ ಗೋಪಾಲಯ್ಯ (96424) ಅವರು ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಕೇಶವಮೂರ್ತಿ (45259) ವಿರುದ್ಧ 51165 ಮತಗಳ ಅಂತರದಿಂದ ವಿಜಯ ಸಾಧಿಸಿದರು. 2018ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಗೋಪಾಲಯ್ಯ ಅವರು ಗೆಲುವು ಸಾಧಿಸಿದ್ದರು. ಆದರೆ, ಬಳಿಕ ನಡೆದ ಆಪರೇಷನ್ ಕಮಲದಲ್ಲಿ ಗೋಪಾಲಯ್ಯ ಬಿಜೆಪಿ ಸೇರಿಕೊಂಡರು. ಬಳಿಕ ಅವರು 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 54386 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬಹುತೇಕ ನಗರ ಪ್ರದೇಶದಿಂದ ಕೂಡಿರುವ ಈ ಕ್ಷೇತ್ರದಲ್ಲಿ ಹಳೇ ಬಡಾವಣೆಗಳು, ಕೊಳಚೆ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳು ಹೆಚ್ಚಾಗಿವೆ. ಮಾಗಡಿ, ತುಮಕೂರು, ಕುಣಿಗಲ್, ನೆಲಮಂಗಲ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಬಂದಿರುವ ವಲಸಿಗ ಮತದಾರರು ಇದ್ದಾರೆ. 2008ರಲ್ಲಿ ಕ್ಷೇತ್ರ ರಚನೆಯಾಗಿದ್ದು ನೆ.ಲ ನರೇಂದ್ರ ಬಾಬು ಮೊದಲ ಶಾಸಕ. 2013ರಲ್ಲಿ ಗೋಪಾಲಯ್ಯ ಮೊದಲ ಬಾರಿಗೆ ಜೆಡಿಎಸ್ನಿಂದ ಸ್ಪರ್ಧಿಸಿದ್ದರು. 2018ರಲ್ಲಿ ಜೆಡಿಎಸ್ ಹಾಗೂ 2019ರಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 2,87,300 ಮತದಾರರಿದ್ದಾರೆ. ಒಕ್ಕಲಿಗರು 74,000, ಲಿಂಗಾಯತರು 29,000, ಪರಿಶಿಷ್ಟ ಜಾತಿ/ಪಂಗಡದವರು 51,000, ಬ್ರಾಹ್ಮಣರು 34,000. ದೇವಾಂಗದವರು 21,000 ಮತದಾರರು ಇದ್ದಾರೆ. ಇವರ ಜೊತೆಗೆ ಮುಸ್ಲಿಮರು 18,000, ತಮಿಳರು 17,000, ತಿಗಳರು 8,200, ಕುರುಬರು 8,000 ಮತ್ತು ಇತರೆ ಸಮುದಾಯಗಳ 11,000 ಮಂದಿ ಇದ್ದಾರೆ.