Site icon Vistara News

Mahatma Gandhi : ನಿಜವಾದ ಭಾರತವನ್ನು ಪ್ರತಿನಿಧಿಸಿದ ಏಕೈಕ ಆತ್ಮ ಗಾಂಧೀಜಿ: ಸಿಎಂ ಬೊಮ್ಮಾಯಿ

mahatma-gandhi-is-the-atma-who-represented-true-india

#image_title

ಬೆಂಗಳೂರು: ಒಬ್ಬ ವ್ಯಕ್ತಿಯ ಮೌಲ್ಯಾಧಾರಿತವಾಗಿರುವ ಬದುಕು, ಸತ್ಯ ಮತ್ತು ದೇಶಪ್ರೇಮದಿಂದ ಕೂಡಿರುವ ಚಿಂತನೆ, ಹಾಗೂ ಶ್ರೇಷ್ಠ ಮಾನವತಾವಾದಿ ಮಹಾತ್ಮನ ಸ್ಮರಣೆಯೇ ನಿಜವಾದ ಪೂಜೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ವಿವೇಕ ಯುಗ ಮತ್ತು ಗಮ್ಯ ಫೌಂಡೇಶನ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಸಹಯೋಗದೊಂದಿಗೆ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಿದ್ದ”ಗಾಂಧೀ ಸ್ಮರಣೆ-ಗಾಂಧೀ ನಮನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿಯನ್ನು ಸ್ಮರಣೆ ಮಾಡಿದರೆ ಗಾಂಧೀಜಿಯನ್ನು ನಮನ ಮಾಡಿದಂತೆಯೇ. ಮನಯಷ್ಯನ ಸ್ಮೃತಿ ಪಟಲ ಒಳ್ಳೆಯದು ಕೆಟ್ಟದ್ದು ಎರಡನ್ನೂ ಹಿಡಿದಿಟ್ಟುಕೊಳ್ಳುತ್ತದೆ. ಅದೇ ಮೆದುಳು ನಮಗೆ ದಾರಿದೀಪವಾಗುವ ಮೌಲ್ಯಗಳನ್ನು ನೆನಪಿಟ್ಟುಕೊಳ್ಳಲು ಮಹತ್ವ ಕೊಟ್ಟರೆ ಅದಕ್ಕೆ ಹೆಚ್ಚು ಸ್ಥಾನ ಸಿಗುತ್ತೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸೃಷ್ಟಿಕರ್ತನ ನೈಸರ್ಗಿಕವಾಗಿರುವ ಸೃಷ್ಟಿಯಲ್ಲಿ ಏನು ಬೇಕೆಂದು ತಿಳಿದುಕೊಳ್ಳುವ ಬುದ್ಧಿ ಮನುಷ್ಯನಲ್ಲಿ ಮಾತ್ರ ಇದೆ. ಮಹಾತ್ಮಾ ಗಾಂಧೀಜಿ ಅವರಿಗೆ ಮೆದುಳು – ಹೃದಯ ಒಂದೇ ಇತ್ತು. ಹೃದಯ ಹೇಳುವುದೇ ಅವರ ವಿಚಾರ ಆಗಿತ್ತು. ಹೃದಯ ಮಾತಾಡುವ ವಿಚಾರ ಅವರ ಆಚಾರವಾಗಿತ್ತು. ಆ ಆಚಾರ ವಿಚಾರಗಳೇ ಅವರ ಬದುಕಾಗಿತ್ತು. ಅಹಿಂಸೆಯ ಬಗ್ಗೆ ಗಾಂಧೀಜಿ ಗಟ್ಟಿಯಾಗಿ ಪ್ರತಿಪಾದನೆ ಮಾಡಿದ್ದರು. ಹಿಂಸೆ ಅನ್ನೋದು ಅತ್ಯಂತ ಹೇಡಿತನದ ಕೆಲಸ. ಅಹಿಂಸೆಯಿಂದ ನಡೆದುಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಗಾಂಧೀಜಿ ಅವರು ಬಂದದ್ದೆನ್ನೆಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ ಜನರಿಗೆ ತಿಳಿಹೇಳಿದರು. ಎಲ್ಲವನ್ನೂ ಮೀರಿ ಬದುಕಿ ತೋರಿಸಿದ್ದು ಗಾಂಧೀಜಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ : Mahatma Gandhi Death Anniversary: ಇಂದು ಗಾಂಧೀಜಿ ಪುಣ್ಯ ತಿಥಿ: ಮಹಾತ್ಮರು ಹೇಳಿದ ಅದ್ಭುತ ನುಡಿಮುತ್ತುಗಳಿವು

ಗಾಂಧೀಜಿ ಅವರು ಇಡೀ ಜಗತ್ತಿಗೆ ನಿಜವಾದ ಭಾರತವನ್ನು ಪ್ರತಿನಿಧಿಸಿದ ಏಕೈಕ ಆತ್ಮ. ಅಲ್ಲಿಯವರೆಗೂ ಭಾರತದ ಬಗ್ಗೆ ಅನೇಕ ಅಭಿಪ್ರಾಯಗಳು ಇದ್ದವು. ಎರಡನೇ ವಿಶ್ವಯುದ್ಧ ಮುಗಿದು ಎಲ್ಲೆಡೆ ಪ್ರಜಾಪ್ರಭುತ್ವ ಸ್ಥಾಪನೆ ಆಗುತ್ತಿರುವಾಗ ಇಡೀ ವಿಶ್ವವು ಭಾರತದ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳುವಂತೆ ಮಾಡಿದ್ದು ಮಹಾತ್ಮಾ ಗಾಂಧೀಜಿ ಅವರು. ಅವರ ಜೀವನದಲ್ಲಿಎಲ್ಲವೂ ಇದೆ. ಪರಿವರ್ತನೆ ಇದೆ, ಬದಲಾವಣೆ ಇದೆ, ತಪ್ಪುಗಳು ಇವೆ, ತಪ್ಪೊಪ್ಪಿಕೊಂಡಿರುವುದೂ ಇದೆ. ಅವನ್ನು ಸರಿಪಡಿಸಿಕೊಂಡಿದ್ದೂ ಇದೆ. ಅವಮಾನ ಅಪಮಾನ ಇದೆ. ಹಠವೂ ಇದೆ ಜಯವೂ ಇದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ್ ಪಾಟೀಲ್, ಪ್ರಜಾವಾಣಿ ಮುಖ್ಯ ಸಂಪಾದಕರಾದ ರವೀಂದ್ರ ಭಟ್, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಶ್ರೀ ಪಿ ವೂಡೆ ಕೃಷ್ಣ, ಡಿ ಎಂ ಹೆಗ್ಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Exit mobile version