Site icon Vistara News

Mahisha Dasara : ಮಹಿಷ Vs ಚಾಮುಂಡಿ ; ಅ. 13ರಂದು ಬಿಜೆಪಿಯಿಂದ ಚಾಮುಂಡಿ ಚಲೋ

Pratapsimha Mahishasura

ಮೈಸೂರು: ಮೈಸೂರಿನಲ್ಲಿ ದಸರಾ ಮಹೋತ್ಸವದ (Mysore Dasara) ಸಂಭ್ರಮದ ಆಚರಣೆಗೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಲ್ಲೇ ಮಹಿಷ ವರ್ಸಸ್‌ ಚಾಮುಂಡಿ (Mahisha Vs Chamundi) ಕದನಕ್ಕೆ ವೇದಿಕೆ ರೆಡಿಯಾಗಿದೆ. ಅ.13ರಂದು ಮಹಿಷ ದಸರಾ (Mahisha Dasara) ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ತಯಾರಿ ನಡೆಸುತ್ತಿದ್ದರೆ ಅದೇ ದಿನ ಚಾಮುಂಡಿ ಚಲೋ‌ (Chamundi Chalo) ಜಾಥಾ ನಡೆಸುವುದಾಗಿ ಬಿಜೆಪಿ ಘೋಷಿಸಿದೆ. ಬುಧವಾರ ಮೈಸೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ್‌ ಸಿಂಹ (MP Pratapsimha) ಅವರು ಮಹಿಷ ದಸರಾ ನಡೆಸಿದರೆ ಸಂಘರ್ಷಕ್ಕೆ ಸಿದ್ಧ ಎಂದು ಎಚ್ಚರಿಕೆ ಕೊಟ್ಟರು.

ʻʻಸಿಎಂ ಸಿದ್ದರಾಮಯ್ಯ, ಸಚಿವ ಡಾ.ಮಹದೇವಪ್ಪ ನೇತೃತ್ವದಲ್ಲಿ ದಸರಾ ಆಚರಣೆಗೆ ಮೈಸೂರು ಸಜ್ಜಾಗುತ್ತಿದೆ. ಟಿಪ್ಪು, ಹೈದರಾಲಿ ಕಾಲ ಬಿಟ್ಟು ದಸರಾ 414 ವರ್ಷಗಳಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿದೆ. ದಸರಾ, ನವರಾತ್ರಿ, ಚಾಮುಂಡಿ ಮಹಿಮೆ, ಆಷಾಢ, ವರ್ಧಂತಿ, ತೆಪ್ಪೋತ್ಸವ ಎಲ್ಲವೂ ಮೈಸೂರಿಗರು, ಹೊರಗಿನವರಿಗೆ ಗೊತ್ತು. 2015-16ರಲ್ಲಿ ಮಹಿಷ ದಸರಾ ಎನ್ನುವ ಅಪದ್ಧ, ಅಸಹ್ಯ, ಅಪಸವ್ಯ ಶುರುವಾಯಿತುʼʼ ಎಂದು ಮೊದಲಿಗೆ ಪ್ರತಾಪ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ʻʻಮಹಿಷಾಸುರ ಯಾವಾಗ ಮೂಲನಿವಾಸಿಗಳ ದೇವರಾಗಿದ್ದ ಗೊತ್ತಿಲ್ಲ. ದೆವ್ವ ಯಾವಾಗ ದೇವರಾಯ್ತು ಗೊತ್ತಿಲ್ಲ.
ದೇವಿಯನ್ನು ದೆವ್ವ, ದೆವ್ವವನ್ನು ದೇವರು ಮಾಡುವ ಪ್ರಯತ್ನ ನಡೆದಿದೆ. ಪುರಭವನದಿಂದ ಚಾಮುಂಡಿಬೆಟ್ಟದವರೆಗೆ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 2018ರಲ್ಲೂ ಮುಂದುವರಿದಿತ್ತು. 2019ರಲ್ಲಿ ಬಿಜೆಪಿ ಸರ್ಕಾರ ಬಂತು. ಸೋಮಣ್ಣ ಸಚಿವರಾದ ಮೇಲೆ ಮಹಿಷ ದಸರಾ ನಿಲ್ಲಿಸಿದ್ದೆವುʼʼ ಎಂದು ಸಂಸದ ಪ್ರತಾಪ್ ಸಿಂಹ ನೆನಪಿಸಿದರು.

ಮಹಿಷಾ ದಸರಾ ತಡೆಯಲು ಚಲೋ ಚಾಮುಂಡಿ

ಅಕ್ಟೋಬರ್ 13ರಂದು ಬೆಳಗ್ಗೆ 8ಕ್ಕೆ ಚಾಮುಂಡಿ ಬೆಟ್ಟ ಚಲೋ ನಡೆಯಲಿದೆ. ಮಹಿಷಾ ದಸರಾವನ್ನು ತಡೆಯುವುದೇ ನಮ್ಮ ಉದ್ದೇಶ. ಸಂಘರ್ಷಕ್ಕೂ ನಾವು ಸಿದ್ಧರಿದ್ದೇವೆ ಎಂದು ಪ್ರತಾಪಸಿಂಹ ಘೋಷಿಸಿದರು.

13ರಂದು ಚಲೋ ಚಾಮುಂಡಿ ಬೆಟ್ಟಕ್ಕೆ ರ‍್ಯಾಲಿ ಮಾಡುತ್ತೇವೆ. ಮೆಟ್ಟಿಲು ಮೂಲಕ ಬೆಟ್ಟಕ್ಕೆ ಹತ್ತುತ್ತೇವೆ. ಬೆಟ್ಟ ಹತ್ತಲು ಸಾಧ್ಯವಾಗದವರು ಮುಖ್ಯದ್ವಾರದಿಂದ ವಾಹನಗಳಲ್ಲಿ ಬರಬಹುದು. ಬೈಕ್, ಕಾರು ಮುಂತಾದ ವಾಹನದಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಇದು ಚಾಮುಂಡಿ ತಾಯಿಯ ಭಕ್ತರ ಚಳವಳಿ. ಅಂದಾಜು 5000 ಜನ ಭಾಗವಹಿಸುತ್ತಾರೆ ಎಂದು ಪ್ರತಾಪಸಿಂಹ ವಿವರಿಸಿದರು. ʻʻಇದು ಬಿಜೆಪಿ ಕಾರ್ಯಕ್ರಮ ಅಲ್ಲ. ಮುಂದಾಳತ್ವ ಮಾತ್ರ ತೆಗೆದುಕೊಂಡಿದ್ದೇವೆʼʼ ಎಂದು ಪ್ರತಾಪಸಿಂಹ ವಿವರಿಸಿದರು.

ಚಾಮುಂಡಿ ನಿಮ್ಮ ತಾಯಿ ಅಲ್ವಾ?

ʻʻಮೈಸೂರಿನ ಜನ ಕಷ್ಟ- ಸುಖ ಎಲ್ಲದಕ್ಕೂ ಚಾಮುಂಡಿ ಬೆಟ್ಟಕ್ಕೆ ಓಡಿ ಹೋಗ್ತೀರಿ. ಯಾರೋ ನಾಲ್ಕೋ ಜನ ಮಹಿಷ ದಸರಾ ಮಾಡ್ತಾರೆ. ಚಾಮುಂಡಿ ನಿಮ್ಮ ತಾಯಿ ಅಲ್ವ? ಆಕೆಗೆ ಅಪಮಾನ ಆಗುವಾಗ ನಿಮಗೆ ಸಿಟ್ಟು ಬರಲ್ವ ? ಮೈಸೂರಿಗರೇ ಪಕ್ಷ, ಸಿದ್ಧಾಂತ ಭೇದವಿಲ್ಲದ ನಮ್ಮ ಚಳವಳಿಗೆ ಬೆಂಬಲ ಕೊಡಿʼʼ ಎಂದು ಪ್ರತಾಪ್‌ಸಿಂಹ ವಿನಂತಿಸಿದರು

ಮೈಸೂರು‌ ಜಿಲ್ಲೆಯ‌ 11 ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಮನವಿ ಮಾಡುತ್ತಿದ್ದೇವೆ. ಧರ್ಮಾತೀತವಾಗಿ ಎಲ್ಲರಿಗೂ ಕರೆ ಕೊಡುತ್ತಿದ್ದೇವೆ ಎಂದು ಹೇಳಿದರು ಪ್ರತಾಪ್ ಸಿಂಹ.

ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮುಖಂಡರಾದ ಸೋಮಸುಂದರ್, ವಾಣೀಶ್, ಮಹೇಶ್ ರಾಜೇ ಅರಸ್, ಕೇಬಲ್ ಮಹೇಶ್ ಭಾಗಿ‌ಯಾಗಿದ್ದರು.

ಮಹಿಷ ದಸರಾ ಕಾರ್ಯಕ್ರಮ ಏನೇನು?

ಮಹಿಷ ದಸರಾ ಕಾರ್ಯಕ್ರಮದ ಭಾಗವಾಗಿ ಅಕ್ಟೋಬರ್‌ 13ರಂದು ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉದ್ಘಾಟನೆ ನಡೆಯಲಿದೆ. ಬಳಿಕ ಬೆಟ್ಟದ ತಪ್ಪಲಿನಲ್ಲಿ ಹಲವಾರು ಗೋಷ್ಠಿಗಳು ನಡೆಯಲಿವೆ.

Exit mobile version