Site icon Vistara News

Lok Sabha Election 2024 : ಕರ್ನಾಟಕದಲ್ಲಿ ಮೇಜರ್‌ ಸರ್ಜರಿ; ವಿಧಾನಸಭೆಯಲ್ಲಿ ಸೋತವರಿಗೆ‌ ಸಂಸತ್ ಟಿಕೆಟ್?

New Parliment building and PM Narendra Modi

ಬೆಂಗಳೂರು: ಮುಂದಿನ ವರ್ಷ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ (Lok Sabha Election 2024) ಈಗಾಗಲೇ ಭರ್ಜರಿ ತಯಾರಿಗಳು ಶುರುವಾಗಿವೆ. ಬಿಜೆಪಿ ವಿರುದ್ಧ ಮಹಾಘಟ ಬಂಧನ್‌ (Mahagathbandhan) ಅಡಿ ಅಸ್ತ್ರ ಪ್ರಯೋಗಕ್ಕೆ ಈಗಾಗಲೇ “ಇಂಡಿಯಾ” (INDIA Alliance) ವೇದಿಕೆ ಸಿದ್ಧಗೊಂಡಿದೆ. ಇನ್ನೊಂದೆಡೆ‌ ಎನ್‌ಡಿಎ (NDA Alliance) ಪುನರುಜ್ಜೀವನಕ್ಕೆ ಬಿಜೆಪಿ ಪ್ರಯತ್ನ ನಡೆಸಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಒಂದಷ್ಟು ಬದಲಾವಣೆಗಳನ್ನು ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಕಸರತ್ತುಗಳು ನಡೆದಿವೆ. ಇದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ 10 ರಿಂದ 12 ಕ್ಷೇತ್ರದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪು ಸಾಧ್ಯತೆ‌ ಇದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಪ್ರಮುಖರು ಲೋಕಸಭೆಯತ್ತ ದೃಷ್ಟಿ ನೆಟ್ಟಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾಗ್ರತೆಯ ಹೆಜ್ಜೆಯನ್ನಿಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ (BJP high command), ಕ್ಷೇತ್ರವಾರು ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡುತ್ತಾ, ಸಂಭಾವ್ಯ ಅಭ್ಯರ್ಥಿಗಳ ತಯಾರಿಗೂ ಇಳಿದಿದೆ. ಈ ಕಾರಣದಿಂದ 10 ರಿಂದ 12 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Rain News : ಮಳೆ ನೀರಿನಿಂದ ಭರ್ತಿಯಾಗಿದ್ದ ತಗ್ಗು ಗುಂಡಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ

ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾತುಕತೆ

ಇತ್ತ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾತುಕತೆ ನಡೆಯುತ್ತಿದೆ. ಏನೇ ಆದರೂ ಈಗಿರುವ 25 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ರಾಜಕೀಯ ರಣತಂತ್ರವನ್ನು ಹೆಣೆಯಲು ಮುಂದಾಗಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಗೆಲ್ಲುವ ಪ್ರಬಲ ಅಭ್ಯರ್ಥಿಗಳಿಗೆ ಹುಡುಕಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಸ್ವತಂತ್ರ ಸ್ಪರ್ಧೆ ಬಗ್ಗೆಯೂ ಚಿಂತನೆ ಇದ್ದು, ಇನ್ನು ಗೊಂದಲದಿಂದ ಹೊರಗೆ ಬಂದಿಲ್ಲ. ಕಳೆದ ಬಾರಿ ಕಾಂಗ್ರೆಸ್‌ – ಜೆಡಿಎಸ್‌ ಒಂದಾಗಿದ್ದರ ಪರಿಣಾಮ ಏನಾಯಿತು? ಬಿಜೆಪಿ ನಿರಾಯಾಸವಾಗಿ 25 ಸೀಟುಗಳನ್ನು ಗೆಲ್ಲಲು ಅನುಕೂಲವಾಯಿತು ಎಂಬ ನಿದರ್ಶನವೂ ಕಣ್ಣ ಮುಂದೆ ಇರುವುದರಿಂದ ಇನ್ನೂ ಮೈತ್ರಿ ಬಗ್ಗೆ ದೃಢ ನಿರ್ಧಾರಕ್ಕೆ ಬಂದಿಲ್ಲ.

ಟಿಕೆಟ್‌ಗಾಗಿ ಹೆಚ್ಚಿದೆ ಫೈಟ್!

ಕಮಲಪಡೆಯಲ್ಲಿ ‌ಈ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇದರ ಜತೆಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಘಟಾನುಘಟಿ ನಾಯಕರು ಸಂಸತ್‌ ಚುನಾವಣಾ ಕಣದ ಮೇಲೆ ಕಣ್ಣಿಟ್ಟಿದ್ದಾರೆ. ಇದು ಕೆಲವು ಹಾಲಿ ಸಂಸದರಿಗೆ ತಲೆನೋವು ತಂದಿಟ್ಟಿದೆ. ಜತೆಗೆ ಬಿಜೆಪಿ ಹೈಕಮಾಂಡ್‌ಗೂ ಈ ಸಮಸ್ಯೆ ಬಗೆಹರಿಸುವುದು ಹೇಗೆ ಎಂಬ ಬಗ್ಗೆ ಚಿಂತೆ ಶುರುವಾಗಿದೆ ಎನ್ನಲಾಗಿದೆ. ಬಂಡಾಯಕ್ಕೆ ಕಾರಣವಾಗದಂತೆ ಟಿಕೆಟ್‌ ಸಮಸ್ಯೆಯನ್ನು ಎದುರಿಸುವ ಸವಾಲು ಸಹ ಎದುರಾಗಿದೆ.

ಯಾವ ಲೋಕಸಭಾ ಕ್ಷೇತ್ರಗಳ ಚಿತ್ರಣ ಹೇಗಿದೆ?

ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಪಿ.ಸಿ. ಮೋಹನ್ ಹಾಲಿ ಸಂಸದರಾಗಿದ್ದರೂ ಹೊಸಬರಿಗೂ ಹುಡುಕಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಬೆಂಗಳೂರು ಉತ್ತರದಿಂದ ಬಿಜೆಪಿ ಅಭ್ಯರ್ಥಿಯಾಗಲು ಸಾಕಷ್ಟು ಮಂದಿ ಯತ್ನಿಸಿದ್ದಾರೆ. ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಇದ್ದಾರೆ. ಆದರೆ, ಅವರಿಗೆ ಹಲವು ಕಾರಣಗಳಿಂದ ಕೇಂದ್ರ ಸಚಿವ ಸ್ಥಾನವೂ ತಪ್ಪಿ ಈಗ ಒಂದು ಹಂತದಲ್ಲಿ ತಟಸ್ಥರಾಗಿದ್ದಾರೆ. ಹೀಗಾಗಿ ಇಲ್ಲೀಗ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿ. ರವಿ, ಮಾಜಿ ಸಚಿವ ಡಾ. ಕೆ. ಸುಧಾಕರ್ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಣ್ಣಿಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ , ಅಶ್ವತ್ಥ್‌ ನಾರಾಯಣ್ (ವಕ್ತಾರ) ನಡುವೆ ಪೈಪೋಟಿ ಇದೆ. ಬೆಂಗಳೂರು ದಕ್ಷಿಣದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಇದ್ದು, ಇಲ್ಲಿ ತೇಜಸ್ವಿನಿ ಅನಂತಕುಮಾರ್ ಹೆಸರೂ ಕೇಳಿ ಬರುತ್ತಿದೆ.

ಬಾಗಲಕೋಟೆ ಕ್ಷೇತ್ರಕ್ಕೆ ಗದ್ದಿ ಗೌಡರ್ , ಮುರುಗೇಶ್ ನಿರಾಣಿ, ಬೆಳಗಾವಿ ಕ್ಷೇತ್ರಕ್ಕೆ ಹಾಲಿ ಸಂಸದೆ ಮಂಗಳ ಸುರೇಶ್ ಇದ್ದು, ಮಹಾಂತೇಶ್ ಕವಟಗಿಮಠ ಹಾಗೂ ಜಾರಕಿಹೊಳಿ ಕುಟುಂಬ ಪೈಪೋಟಿಗಿಳಿದಿವೆ. ಬಳ್ಳಾರಿಯತ್ತ ಮಾಜಿ ಸಚಿವ ಶ್ರೀರಾಮಲು ಕಣ್ಣಿಟ್ಟಿದ್ದಾರೆ.

ವಿಜಯಪುರದಲ್ಲಿ ಹಾಲಿ ಕೇಂದ್ರ ಸಚಿವರಾಗಿರುವ ರಮೇಶ್ ಜಿಗಜಣಗಿ ಇದ್ದರೂ ಹೊಸಬರಿಗಾಗಿ ಹುಡುಕಾಟ ನಡೆದಿದೆ. ಚಾಮರಾಜನಗರಕ್ಕೆ ಮಾಜಿ ಶಾಸಕ ಎನ್. ಮಹೇಶ್, ಬಾಲರಾಜ್, ಮಾಜಿ ಐಎಎಸ್ ಅಧಿಕಾರಿ ಕೆ. ಶಿವರಾಮ್ ದೃಷ್ಟಿ ನೆಟ್ಟಿದ್ದಾರೆ.

ಯಧುವೀರ್‌ ಒಡೆಯರ್‌ಗೆ ಮೈಸೂರು ಟಿಕೆಟ್?

ದಾವಣಗೆರೆಯಲ್ಲಿ ಸಂಸದ ಸಿದ್ದೇಶ್ವರ್ ಇದ್ದು, ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಧಾರವಾಡದಲ್ಲಿ ಸಂಸದ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಯಾವುದೇ ಪೈಪೋಟಿ ಇಲ್ಲ. ಮೈಸೂರು ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಜತೆಗೆ ಯದುವೀರ ಒಡೆಯರ್ ಹೆಸರೂ ಕೇಳಿಬರುತ್ತಿದೆ.

ಮಂಡ್ಯಕ್ಕೆ ಸುಮಲತಾ ಅಂಬರೀಶ್, ಶಿವಮೊಗ್ಗಕ್ಕೆ ಬಿ.ವೈ. ರಾಘವೇಂದ್ರ ಹೆಸರುಗಳಷ್ಟೇ ಸದ್ಯಕ್ಕೆ ಇದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್‌ ಕೈತಪ್ಪು ಸಾಧ್ಯತೆ ಹೆಚ್ಚಿದ್ದು, ಆ ಜಾಗಕ್ಕೆ ಯಾರು ಸೂಕ್ತ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಕಲಬುರಗಿಯಲ್ಲಿ ಸಂಸದ ಉಮೇಶ್ ಜಾಧವ್, ಚಿತ್ರದುರ್ಗದಲ್ಲಿ ನಾರಾಯಣ ಸ್ವಾಮಿ ಇದ್ದು, ನಟ ಶಶಿಕುಮಾರ್ ಸಹ ಆಕಾಂಕ್ಷಿಯಾಗಿದ್ದಾರೆ. ಚಿಕ್ಕಬಳ್ಳಾಪುರದ ಮೇಲೆ ಮಾಜಿ ಸಚಿವ ಡಾ. ಕೆ. ಸುಧಾಕರ್ ಕಣ್ಣಿಟ್ಟಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ನಳಿನ್‌ ಕುಮಾರ್ ಕಟೀಲ್‌ ಬದಲು ಹೊಸಬರಿಗಾಗಿ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದೆ.

ಬೀದರ್‌ನಲ್ಲಿ ಭಗವಂತ್ ಖೂಬಾ, ಹಾವೇರಿಯಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್‌ ಹಾಗೂ ಮಾಜಿ ಸಚಿವ ಬಿ.ಸಿ. ಪಾಟೀಲ್ ಪೈಪೋಟಿಗೆ ಇಳಿದಿದ್ದಾರೆ. ಕೋಲಾರದಲ್ಲಿ ಮುನಿಸ್ವಾಮಿ ಹಾಲಿ ಸಂಸದರಾಗಿದ್ದರೂ ಛಲವಾದಿ ನಾರಾಯಣ ಸ್ವಾಮಿ ಕಣ್ಣಿಟ್ಟಿದ್ದಾರೆ. ಕೊಪ್ಪಳದಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಕ್ಷೇತ್ರದ ಮೇಲೆ ಮಾಜಿ ಸಚಿವ ಆನಂದ ಸಿಂಗ್ ದೃಷ್ಟಿ ನೆಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Weather Report : ಭಾನುವಾರವೂ ವರುಣ ಹಾಜರ್‌; ಎಲ್ಲೆಲ್ಲಿ ಮಳೆ ಮುನ್ಸೂಚನೆ?

ಈ ಕ್ಷೇತ್ರಗಳಲ್ಲೂ ಇದೆ ಪೈಪೋಟಿ

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವರಾದ ವಿ. ಸೋಮಣ್ಣ ಮತ್ತು ಜೆ. ಮಾಧುಸ್ವಾಮಿ ನಡುವೆ ಪೈಪೋಟಿ ಇದೆ. ಚಿಕ್ಕೋಡಿ ಕ್ಷೇತ್ರಕ್ಕೆ ಅಣ್ಣಾ ಸಾಹೇಬ ಜೊಲ್ಲೆ ಹಾಗೂ ಹಾಸನಕ್ಕೆ ಪ್ರೀತಂ ಗೌಡ ಹೆಸರು ಕೇಳಿ ಬರುತ್ತಿದೆ. ರಾಯಚೂರು ಕ್ಷೇತ್ರಕ್ಕೆ ಹಾಲಿ ಸಂಸದ ರಾಜಾ ಅಮರೇಶ ನಾಯಕ ಇದ್ದರೂ ಬಿ.ವಿ. ನಾಯಕ್ ಹೆಸರು ಕೇಳಿ ಬಂದಿದ್ದರೆ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಇದ್ದು, ಇದರತ್ತ ಮಾಜಿ ಸಚಿವ ಸಿ.ಟಿ. ರವಿ ಕಣ್ಣಿಟ್ಟಿದ್ದಾರೆ.

Exit mobile version