Site icon Vistara News

ಅಸಮರ್ಪಕ ಆಡಳಿತ ಸರಿಪಡಿಸಲು ಬೆಂಗಳೂರನ್ನು ಐದು ಭಾಗ ಮಾಡಿ: ಮೋಹನದಾಸ್‌ ಪೈ

Mohan das pai

ಬೆಂಗಳೂರು: ಬೆಂಗಳೂರಿನಲ್ಲಿ ಆಗಿರುವ ಒತ್ತುವರಿಯ ಹಿಂದಿರುವ ಕಾರಣ ಅಸಮರ್ಪಕ ಆಡಳಿತ. ಇದನ್ನು ಸರಿಪಡಿಸಲು ಬೃಹತ್‌ ಆಗಿ ಬೆಳೆದಿರುವ ರಾಜಧಾನಿಯನ್ನು ಐದು ಭಾಗಗಳಾಗಿ ವಿಂಗಡಿಸುವುದು ಅಗತ್ಯ ಎಂದು ಐಟಿ ಉದ್ಯಮಿ ಮೋಹನದಾಸ್‌ ಪೈ ಹೇಳಿದ್ದಾರೆ.

ಈಗ ಒತ್ತುವರಿ ತೆರವಿನ ಡ್ರಾಮಾ ನಡೆಯುತ್ತಿದೆ. ಯಾರೇ ಒತ್ತುವರಿ ಮಾಡಿದ್ದರೂ ಅದನ್ನು ತೆರವು ಮಾಡಬೇಕು. ಸಿಎಂ ಆದೇಶ ನೀಡಿದ್ದಾರೆ, ನಾವು ಭರವಸೆ ಇಟ್ಟು ಕಾಯಬೇಕು. ಆದರೆ ಕೆಳಹಂತದ ಅಧಿಕಾರಿಗಳು ಸರ್ಕಾರದ ಮಾತನ್ನು ಪಾಲಿಸುವುದಿಲ್ಲ. ಭ್ರಷ್ಟ, ಅಪ್ರಾಮಾಣಿಕ ಅಧಿಕಾರಿಗಳನ್ನು ಕಿತ್ತು ಹಾಕುವ ಕಠಿಣ ವ್ಯವಸ್ಥೆ ಬರಬೇಕು ಎಂದು ವಿಸ್ತಾರ ನ್ಯೂಸ್‌ಗೆ ನೀಡಿದ ವಿಶೇಷ ಹೇಳಿಕೆಯಲ್ಲಿ ಪೈ ಹೇಳಿದ್ದಾರೆ.

ಬೆಂಗಳೂರು ಬೃಹತ್‌ ಆಗಿ ಬೆಳೆದಿದೆ. ಇದನ್ನು ನಿಭಾಯಿಸಲು ಒಬ್ಬ ಮೇಯರ್‌ ಹಾಗೂ ಕೆಲವೇ ಕಮಿಷನರ್‌ಗಳು ಸಾಲದು. ಬೆಂಗಳೂರನ್ನು ಐದು ಭಾಗಗಳನ್ನಾಗಿ ಮಾಡಬೇಕು. ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಬೆಂಗಳೂರುಗಳಾಗಿ ವಿಭಜಿಸಿ, ಪ್ರತಿಯೊಂದಕ್ಕೂ ಒಬ್ಬೊಬ್ಬ ಮೇಯರ್‌ ನೇಮಿಸಬೇಕು. ಮೇಯರ್‌ ಕಾರ್ಯಾವಧಿಯನ್ನು ಒಂದು ವರ್ಷಕ್ಕಿಂತ ಹೆಚ್ಚಿಸಬೇಕು. ಮೇಯರ್‌ ಜನಪ್ರಿಯನಾದರೆ ತಮಗೆ ಕಂಟಕ ಎಂಬ ಅಭಿಪ್ರಾಯವನ್ನು ರಾಜಕಾರಣಿಗಳು ಬಿಡಬೇಕು ಎಂದಿದ್ದಾರೆ.

ಬೆಂಗಳೂರನ್ನು ಹಾಳು ಮಾಡಿದ್ದಾರೆ ಎಂದು ಐಟಿ ಕಂಪನಿಗಳನ್ನು ದೂರಬೇಡಿ. ಒತ್ತುವರಿ ಆಗಿರುವುದು ಐಟಿ ಬಿಟಿಯವರಿಂದಲ್ಲ. ಇಕೋ ಸ್ಪೇಸ್ ಜಾಗ ಯಾರದ್ದು? ಐಟಿಯವರು ಭೂಮಾಲೀಕರಲ್ಲ. ಹೆಚ್ಚಿನ ಐಟಿ ಕಂಪನಿಯವರು ಬಾಡಿಗೆಯಲ್ಲಿ ಇದ್ದಾರೆ. ಅವರಿಗೆ ಕಟ್ಟಡಗಳು ರಾಜಕಾಲುವೆ ಮೇಲಿರುವುದು ಹೇಗೆ ತಿಳಿದಿರುತ್ತದೆ? ಐಟಿಯವರ ಮೇಲೆ ಆರೋಪ ಹೊರಿಸುವುದು ತಪ್ಪು. ಇವತ್ತು ಯುವಕರಿಗೆ ಕೆಲಸ ಕೊಡುತ್ತಿರುವವರು ಯಾರು? ಐಟಿ ಬಗ್ಗೆ ಮಾತನಾಡುವವರು ಕೆಲ್ಸ ಕೊಡ್ತಾರಾ? ಸರ್ಕಾರದ ಹತ್ರ ದುಡ್ಡಿದೆಯಾ, ಅವರ ಬಳಿ ಹಣದ ಪ್ರಿಂಟಿಂಗ್ ಪ್ರೆಸ್ ಇದೆಯಾ? ಕೆಲ್ಸ ಕೊಡುವವರು ಕಂಪನಿಯವರು. ಇಂದು ಬೆಂಗಳೂರಿಗರು ಬಹಳ ಅದೃಷ್ಟವಂತರು ಯಾಕೆಂದರೆ ವಿಶ್ವದ ಎಲ್ಲಾ ಕಂಪನಿಗಳು ಬೆಂಗಳೂರಿನಲ್ಲಿವೆ. ಅವರಿಂದ ನಮಗೆ ಟ್ಯಾಕ್ಸ್ ಬರುತ್ತಿದೆ, ಆದಾಯವಿದೆ. ಹೀಗಾಗಿ ಐಟಿಯನ್ನು ದೂರುವುದು ಸರಿಯಲ್ಲ ಎಂದು ಉದ್ಯಮಿ ಮೋಹನದಾಸ್ ಪೈ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | ಬೆಂಗಳೂರು ಅವ್ಯವಸ್ಥೆ ಬಗ್ಗೆ ಮೋಹನ್‌ ದಾಸ್‌ ಪೈ ಟೀಕೆಗೆ ಬಿಜೆಪಿ ಮುಖಂಡ ಆಕ್ರೋಶ, ಸಿಎಂ ಬೊಮ್ಮಾಯಿ ಸಮರ್ಥನೆ

Exit mobile version