Site icon Vistara News

ವಿಸ್ತಾರ ಸಂಪಾದಕೀಯ: ಬೆಂಗಳೂರು- ಮೈಸೂರು ಹೆದ್ದಾರಿ ಇನ್ನಷ್ಟು ಸುರಕ್ಷಿತವಾಗಲಿ

expressway

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲ್ಲಿ ಸ್ಪೀಡ್‌ ಕಂಟ್ರೋಲರ್‌ ಅಗತ್ಯವಿದೆ; ಇಲ್ಲವಾದರೆ ಅಪಾಯವಿದೆ ಎಂದಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಎಕ್ಸ್‌ಪ್ರೆಸ್‌ ವೇ ಪರಿಶೀಲನೆ ನಡೆಸಿದ ಅವರು, ಹೆದ್ದಾರಿಯಲ್ಲಿ ಸ್ಪೀಡ್‌ ಕಂಟ್ರೋಲ್‌ ಹಾಕಿದ್ದರಿಂದ ಅಪಘಾತ ಪ್ರಮಾಣ ಕಡಿಮೆಯಾಗಿದೆ ಎಂದಿದ್ದಾರೆ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ ಸಾವಿನ ಹೆದ್ದಾರಿಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೇಗ ನಿಯಂತ್ರಣಕ್ಕೆ ಮುಂದಾಗಿತ್ತು. ಹೆದ್ದಾರಿಯಲ್ಲಿ ಅಲ್ಲಲ್ಲಿ ವೇಗ ನಿಯಂತ್ರಣ ನಿಗಾ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ʼಜೂನ್‌ ತಿಂಗಳಲ್ಲಿ 20 ಅಪಘಾತ ಆಗಿತ್ತು. ವೇಗ ನಿಯಂತ್ರಕ ಅಳವಡಿಸಿದ್ದರಿಂದ ಜುಲೈ ತಿಂಗಳಲ್ಲಿ ಇದು ಐದಕ್ಕೆ ಇಳಿದಿದೆʼ ಎಂದು ಸಿಎಂ ಹೇಳಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ 55 ಕಿಮೀ, ಮಂಡ್ಯದಲ್ಲಿ 58 ಕಿಮೀ ಹಾಗೂ ಮೈಸೂರಿನಲ್ಲಿ 5 ಕಿಮೀ ಸೇರಿ ಒಟ್ಟು 118 ಕಿಮೀ ದೂರದ ದಶಪಥ ಇದಾಗಿದ್ದು, ಈ ಮೂರೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ 9 ತಿಂಗಳಲ್ಲಿ 595 ಅಪಘಾತಗಳು ಸಂಭವಿಸಿವೆ. 158 ಜನ ಜೀವ ಕಳೆದುಕೊಂಡಿದ್ದಾರೆ. ಕೇವಲ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ‌ ಜನವರಿಯಿಂದ ಇಲ್ಲಿಯವರೆಗೆ 55 ಮಂದಿ‌ ಪ್ರಾಣ ಕಳೆದುಕೊಂಡಿದ್ದಾರೆ.‌ 52 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ‌ಹೊಸ ಬೈಪಾಸ್‌ನಲ್ಲಿ 269 ಅಪಘಾತಗಳು ಸಂಭವಿಸಿ 92 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಇದೇನೂ ಕಡಿಮೆ ಪ್ರಮಾಣವಲ್ಲ. ಇಷ್ಟೊಂದು ಪ್ರಮಾಣದಲ್ಲಿ ಅಪಘಾತಗಳಾಗುತ್ತಿವೆ ಎಂದರೆ ಇದರ ಹಿಂದೆ ಏನೇನಿದೆ ಎಂದು ಪರಿಶೀಲಿಸಲೇಬೇಕಿದೆ.

ಹೆದ್ದಾರಿ ನಿರ್ಮಾಣ ತರಾತುರಿಯ, ನಿರ್ಲಕ್ಷ್ಯದ ಸಂಗತಿಯಲ್ಲ. ಇದರ ಹಿಂದೆ ಸಮರ್ಪಕ ವೈಜ್ಞಾನಿಕತೆಯ ಅಗತ್ಯವಿದೆ. ಇಲ್ಲಿ ಆಗುವ ಸಣ್ಣದೊಂದು ವಿನ್ಯಾಸದ ಉಡಾಫೆಯೂ ನೂರಾರು ಜನರ ಜೀವವನ್ನು ಬಲಿ ಪಡೆಯಬಹುದು. ಸಮರ್ಪಕ, ವೈಜ್ಞಾನಿಕ ರಸ್ತೆಗಳೇ ಆಧುನಿಕತೆಯ, ಅಭಿವೃದ್ಧಿಯ ರೂವಾರಿ. ಎರಡು ನಗರಗಳ ನಡುವಿನ ಎರಡೂವರೆ ಗಂಟೆಯ ಪ್ರಯಾಣ ಒಂದೂವರೆ ಗಂಟೆಗೆ ಇಳಿದಿದೆ ಎಂದರೆ, ಇದರಲ್ಲಿ ಪ್ರಯಾಣಿಸುವ ಲಕ್ಷಾಂತರ ಮಂದಿಗೆ ಎಷ್ಟು ಸಮಯ ಉಳಿದಿದೆ ಎಂದು ತರ್ಕಿಸಬಹುದು; ಇಂದು ಸಮಯವೇ ಹಣ ಹಾಗೂ ಉತ್ಪಾದಕತೆ. ಆದರೆ ಇದು ಸುರಕ್ಷತೆಯ ಜತೆಗೇ ಇರಬೇಕು, ಸುರಕ್ಷತೆಯ ಜತೆಗೆ ರಾಜಿ ಮಾಡಿಕೊಂಡು ವೇಗ ಇರಬಾರದು. ಹೆದ್ದಾರಿ ಅವೈಜ್ಞಾನಿಕವಾಗಿದೆ ಎಂದು ಹೇಳುವ ಹಾಗಿಲ್ಲ ಎಂದಿದ್ದಾರೆ ಸಿಎಂ. ಆದರೆ ಇನ್ನೂ ಕೆಲವು ಸೌಲಭ್ಯಗಳು ಆಗಬೇಕು. ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ಮಾಣ ಮಾಡಿದ್ದಾರೆ. ನಾವು ಸುರಕ್ಷತೆ ಕಾಪಾಡಲು ಏನೇನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

ಮುಖ್ಯವಾಗಿ, ದಶಪಥದ ಎಂಟ್ರಿ ಹಾಗೂ ಎಕ್ಸಿಟ್‌ ಭಾಗಗಳು ಸ್ವಲ್ಪ ಅಪಾಯಕಾರಿಯಾಗಿವೆ. ಎಕ್ಸಿಟ್‌ ಹಾಗೂ ಎಂಟ್ರಿ ವಿಭಾಗಗಳು ತುಂಬಾ ಹತ್ತಿರ ಹತ್ತಿರದಲ್ಲಿದ್ದು, ಚಾಲನೆ ಮಾಡುವವರಿಗೆ ಆತಂಕದ ಅನುಭವವಾಗುತ್ತದೆ. ಹಾಗೆಯೇ, ದಶಪಥದಲ್ಲಿ ವೇಗವಾಗಿ ಹೋಗುವವರು ನಿಧಾನ ಲೇನ್‌ನಲ್ಲಿ ಚಲಿಸುವುದು, ನಿಧಾನವಾಗಿ ಹೋಗುವವರು ವೇಗದ ಲೇನ್‌ನಲ್ಲಿ ಚಲಿಸುವುದು ನಡೆಯುತ್ತಿದೆ. ಇದನ್ನು ಆಯಾ ಚಾಲಕರು ಅರ್ಥ ಮಾಡಿಕೊಂಡು ಸಾಗಬೇಕು. ರಾತ್ರಿಯ ವೇಳೆಯಲ್ಲಿ ಕೆಲವು ಭಾರಿ ವಾಹನಗಳು ಬ್ಯಾಕ್‌ಲೈಟ್‌ ಅಥವಾ ಇಂಡಿಕೇಟರ್‌ ಇಲ್ಲದೆ ಚಲಿಸುವುದು ಮಹಾ ಅಪಾಯಕಾರಿ. ಹಿಂದಿನಿಂದ ಭಾರಿ ವೇಗದಲ್ಲಿ ಬರುವ ವಾಹನ ಚಾಲಕರಿಗೆ ಇದು ತಿಳಿಯುವುದೇ ಇಲ್ಲ. ಕೆಟ್ಟು ನಿಂತ ವಾಹನಗಳ ಸೂಚನೆ ದೂರದಿಂದಲೇ ಕೊಡಬೇಕು. ಕಬ್ಬು ಇತ್ಯಾದಿಗಳನ್ನು ಹೊತ್ತ ಟ್ರಾಕ್ಟರ್‌ ಮುಂತಾದ ವಾಹನಗಳು ದಶಪಥದಲ್ಲಿ ಓಡಾಡುವುದು ಅಪಾಯಕ್ಕೆ ಆಹ್ವಾನ. ಕೆಲವರು ರಸ್ತೆ ಚೆನ್ನಾಗಿದೆ ಎಂದು ನೂರು ಕಿಲೋಮೀಟರ್‌ಗೂ ಅಧಿಕವಾಗಿ, ಕೆಲವರು ಹುಚ್ಚಾಪಟ್ಟೆ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಇದು ಅಪಾಯಕಾರಿ ಮಾತ್ರವಲ್ಲ, ಶಿಕ್ಷಾರ್ಹ ಅಪರಾಧ. ಹಾಗೆಯೇ ಪುಂಡ ಹುಡುಗರ ವ್ಹೀಲಿಂಗ್‌ಗೆ ತಡೆ ಹಾಕಲೇಬೇಕಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ನ್ಯಾಯದಾನ ವ್ಯವಸ್ಥೆ ಚುರುಕಾಗಲಿ, ನ್ಯಾಯಾಂಗಕ್ಕೇ ಕಳಂಕ ಅಂಟದಿರಲಿ

ಇನ್ನು ಹಲವೆಡೆ ಸರ್ವಿಸ್‌ ರಸ್ತೆಗಳ ಅಗತ್ಯವಿದೆ. ದಶಪಥದ ಪಕ್ಕದ ಗ್ರಾಮಗಳ ನಿವಾಸಿಗಳು, ರೈತರು, ನಿತ್ಯದ ಕೆಲಸಗಳಿಗೆ ರಸ್ತೆಯ ಎರಡೂ ಬದಿಗೆ ಓಡಾಡಬೇಕಾದವರು ಜೀವ ಪಣಕ್ಕಿಟ್ಟು ದಶಪಥದಲ್ಲಿ ಓಡಾಡಲು ಸಾಧ್ಯವಿಲ್ಲ. ಇಂಥವರಿಗಾಗಿ ಸರ್ವಿಸ್‌ ರಸ್ತೆಗಳು ಉದ್ದಕ್ಕೂ ಆಗಬೇಕಿದೆ. ಇಲ್ಲಿ ವೇಗದ ವಾಹನಗಳಿಗೆ ತಡೆ ಹಾಕುವ ವ್ಯವಸ್ಥೆಯೂ ಆಗಬೇಕು. ಟೋಲ್‌ ದರ ದುಬಾರಿಯಾಗಿದ್ದು, ಇದನ್ನು ನಿಯಂತ್ರಿಸಲು ಕ್ರಮ ಆಗಬೇಕು. ಇತ್ತೀಚೆಗೆ ಕೆಲವು ದರೋಡೆ ಪ್ರಕರಣಗಳೂ ವರದಿಯಾಗಿದ್ದು, ನಿರ್ದಿಷ್ಟ ಅಂತರದಲ್ಲಿ ಪೊಲೀಸರ ಹೈವೇ ಪ್ಯಾಟ್ರೋಲಿಂಗ್‌ ಕೂಡ ಇರಬೇಕಿದೆ. ಇವೆಲ್ಲವೂ ಆದಾಗ ಒಂದು ಹೆದ್ದಾರಿ ಸುರಕ್ಷಿತವೆನಿಸುತ್ತದೆ.

Exit mobile version