ಬೆಂಗಳೂರು: ಬಿಜೆಪಿ ನಾಯಕಿ ಹಾಗೂ ನಟಿ ಮಾಳವಿಕಾ ಅವಿನಾಶ್ (Actress Malavika Avinash) ಅವರ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆ. ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಅವರು ಇಷ್ಟೊತ್ತಿಗೆ ಬಂಧನದಲ್ಲಿರಬೇಕಿತ್ತು. ಸೈಬರ್ ವಂಚನೆ (Cyber Crime) ಕೇಸ್ ಅಡಿ ಅವರು ಜೈಲುಪಾಲಾಗಬೇಕಿತ್ತು ಎಂಬ ಸಂಗತಿಯನ್ನು ಸ್ವತಃ ಅವರೇ ವಿಡಿಯೊ ಮೂಲಕ ತಿಳಿಸಿದ್ದಾರೆ. ಅಲ್ಲದೆ, ಅವರು ಕೆಜಿಎಫ್ ಚಿತ್ರದಲ್ಲಿ (KGF Movie) ನಟಿಸಿದ್ದರಿಂದ ಬಂಧನದಿಂದ ತಪ್ಪಿಸಿಕೊಳ್ಳುವಂತಾಗಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಮಾಳವಿಕಾ ಅವರಿಗೆ ಒಂದು ನಂಬರ್‌ನಿಂದ ಕರೆ ಬರುತ್ತದೆ. ಕರೆ ಸ್ವೀಕಾರ ಮಾಡಿದ ಮಾಳವಿಕಾ ಅವರಿಗೆ ಶಾಕ್ ಕಾದಿತ್ತು. ತಾವು ಮುಂಬೈ ಪೊಲೀಸರು (Mumbai Police) ಎಂದು ಹೇಳಿಕೊಂಡ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರೆ. ನೀವು ಯಾರು? ನಿಮ್ಮಿಂದ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ. ಸೈಬರ್ ಅಪರಾಧದಡಿ ನಿಮ್ಮನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಲಾಗಿದೆ. ಇದರಿಂದ ಗಾಬರಿಗೊಂಡ ಮಾಳವಿಕಾ ತಮ್ಮ ಬಗ್ಗೆ ವಿವರಣೆ ನೀಡಿದ್ದಾರೆ.
ವಿಡಿಯೊ ಕಾಲ್ ಮಾಡಿದ ಅಧಿಕಾರಿಗಳು
ಮಾಳವಿಕಾ ಅವರು ತಾವೊಬ್ಬ ಸಿನಿಮಾ ನಟಿಯಾಗಿದ್ದು, ಇಂಥ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಆಗ ಅಧಿಕಾರಿಗಳು ಇವರಿಗೆ ವಿಡಿಯೊ ಕಾಲ್ (Video Call) ಮಾಡಿದ್ದಾರೆ. ಅಲ್ಲಿ ಮಾಳವಿಕಾ ಅವರ ಮುಖವನ್ನು ಕಂಡಿದ್ದಾರೆ. ಅರ‍್ರೇ, ನೀವು ಕೆಜಿಎಫ್ ಸಿನಿಮಾದಲ್ಲಿ ನಟಿಸಿದವರಲ್ಲೇ ಎಂದು ಕೇಳಿದ್ದಾರೆ. ಆಗ ಮುಂಬೈ ಪೊಲೀಸರಿಗೆ ಇವರ ಮೇಲೆ ನಂಬಿಕೆ ಬಂದಿದೆ. ಹೀಗಾಗಿ ಆಧಾರ್ ಕಾರ್ಡ್ ದುರುಪಯೋಗ ಆಗಿದೆ ಎಂದು ದೂರು ಕೊಡಿ ಎಂದು ಅವರಿಗೆ ಹೇಳಿದ್ದಾರೆ.
ಏನಿದು ಪ್ರಕರಣ?
ಮಾಳವಿಕಾ ಅವಿನಾಶ್ ಅವರ ಆಧಾರ್ ಕಾರ್ಡ್ ಬಳಸಿ ಸೈಬರ್ ವಂಚಕರು ಸಿಮ್ ಖರೀದಿ ಮಾಡಿದ್ದಾರೆ. ಈ ವಂಚಕರು ಆ ನಂಬರ್‌ನಿಂದ ಮುಂಬೈನಲ್ಲಿ ಕೆಲವರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದರು. ಸಂದೇಶ ಕಳುಹಿಸುತ್ತಿದ್ದ ಬಗ್ಗೆ ಮುಂಬೈ ಪೊಲೀಸರಿಗೆ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆಗೆ ಇಳಿದ ಮುಂಬೈ ಪೊಲೀಸರು ಆ ನಂಬರ್ ಅನ್ನು ಆಧಾರವಾಗಿಟ್ಟುಕೊಂಡು ಆಧಾರ್ ಕಾರ್ಡ್ ಮಾಹಿತಿಯನ್ನು ಪತ್ತೆ ಹಚ್ಚಿದರು. ಅದು ಮಾಳವಿಕಾ ಅವಿನಾಶ್ ಎಂದು ತೋರಿಸುತ್ತಿತ್ತು.
ಬಳಿಕ ಆ ಆಧಾರ್ ಕಾರ್ಡ್‌ನಲ್ಲಿ ನಮೂದಾಗಿದ್ದ ನಂಬರ್ ಅನ್ನು ನೋಡಿ ಮಾಳವಿಕಾ ಅವಿನಾಶ್‌ಗೆ ಕರೆ ಮಾಡಿದ್ದಾರೆ. ಮಾಡಿದ ಕೂಡಲೇ ನೀವು ಸೈಬರ್ ಕ್ರೈಂನಲ್ಲಿ ತೊಡಗಿದ್ದೀರಿ, ನಿಮ್ಮನ್ನು ಬಂಧನ ಮಾಡಬೇಕು ಎಂದು ಹೇಳಿದ್ದಾರೆ. ನಂತರ ವಿಡಿಯೊ ಕಾಲ್ ಮಾಡಿದಾಗ ಮುಂಬೈ ಪೊಲೀಸರು ಮಾಳವಿಕಾ ಅವಿನಾಶ್ ಅವರನ್ನು ನೋಡಿ ನೀವು ಕೆಜಿಎಫ್‌ನಲ್ಲಿ ನಟಿಸಿದ್ದೀರಲ್ಲವೇ ಎಂದು ಗುರುತು ಹಿಡಿದಿದ್ದಾರೆ. ನಂತರ ಆಧಾರ್ ಕಾರ್ಡ್ ದುರ್ಬಳಕೆ ಆಗಿರುವ ಬಗ್ಗೆ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: Congress Karnataka : ಹೈಕಮಾಂಡ್ ಸೂಚನೆ ಮೀರಿ ಮಾತನಾಡಿದವರಿಗೆಲ್ಲ ನೋಟಿಸ್: ಡಿ.ಕೆ. ಶಿವಕುಮಾರ್
ವಿಡಿಯೊ ಮಾಡಿ ಮಾಹಿತಿ ತಿಳಿಸಿದ ಮಾಳವಿಕಾ
ಈ ಎಲ್ಲ ವಿಚಾರವನ್ನು ಮಾಳವಿಕಾ ಅವಿನಾಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ. ತಮ್ಮನ್ನು ಫೋನ್ ಮೂಲಕ ವಿಚಾರಣೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗ್ರತೆ ವಹಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಭಾರತೀಯ ಚಿತ್ರರಂಗವನ್ನು ಧೂಳೆಬ್ಬಿಸಿತ್ತು. ಈ ಚಿತ್ರವನ್ನು ಬಹುತೇಕ ಎಲ್ಲ ಭಾಷೆಗಳ ಸಿನಿಪ್ರಿಯರು ನೋಡಿದ್ದರು. ಅವರಲ್ಲಿ ಮುಂಬೈ ಸೈಬರ್ ಕ್ರೈಂ ತಂಡ ಸಿಬ್ಬಂದಿಯೂ ಇದ್ದರು. ಈ ಹಿನ್ನೆಲೆಯಲ್ಲಿ ಮಾಳವಿಕಾ ಅವರನ್ನು ಅವರು ಸಿನಿಮಾದಲ್ಲಿ ಕಂಡಿದ್ದರು. ಇದು ಮಾಳವಿಕಾ ಅವರಿಗೆ ವರದಾನವಾಗಿದೆ.