ಕೊಪ್ಪಳ: ತುಪ್ಪ ತಿಂದವರು, ತಿನ್ನುವವರು ಎಂದೂ ಜೈಲಿಗೆ ಹೋಗಿಲ್ಲ. ಪುರೋಹಿತರು ಎಂದಾದರೂ ಯುದ್ಧ ಮಾಡಿದ್ದಾರಾ? ಎಂದಿರುವ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ, ಅವರು ಯುದ್ದ ಮಾಡಲು ಪ್ರೇರೇಪಣೆ ಮಾಡುತ್ತಾರೆ ಎಂದಿದ್ದಾರೆ.
ಕೊಪ್ಪಳ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದ ಹಾಲುಮತ ಧರ್ಮ ಪ್ರಚಾರ ಯಾತ್ರೆಯಲ್ಲಿ ಭಾಷಣ ಮಾಡಿದ ಮಲ್ಲಿಕಾ ಘಂಟಿ, ಸಂವಿಧಾನ ತಿದ್ದುವ ಕೆಲಸ ನಡೆದಿದೆ. ಇದನ್ನು ಒಂದು ಪಕ್ಷ ಮಾಡುತ್ತಿದೆ. ಒಂದು ಪಕ್ಷ ಸರ್ಕಾರಿ ಉದ್ಯೋಗಗಳನ್ನು ಖಾಸಗಿಗೆ ಮಾರುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮಗೆ ಆರ್ಥಿಕ ಬಲ ಬರಬೇಕಿದೆ. ನಾಗಪುರ ಶಾಲೆಯಲ್ಲಿ ಓದಿ ಬಂದವರಿಗೆ ವೋಟ್ ಕೊಡಬೇಡಿ ಎಂದ ಮಲ್ಲಿಕಾ ಘಂಟಿ, ಎಂಟೇ ವರ್ಷದಲ್ಲಿ ದೇಶವನ್ನು ಇವರು ಮಾರಿದ್ದಾರೆ. ಮುಂದೆ ನಮ್ಮನ್ನೂ ಮಾರುತ್ತಾರೆ. ಎಂಟು ವರ್ಷದಲ್ಲಿ ನುಂಗಿ ನೀರು ಕುಡಿದು ಅಂಬಾನಿ, ಆದಾನಿಗೆ ಕೊಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
10 ವರ್ಷದ ಹಿಂದೆ ಅಂಬಾನಿ, ಆದಾನಿ ಎಲ್ಲಿದ್ದರು? ಎಂದು ಪ್ರಶ್ನಿಸಿದ ಘಂಟಿ, ಮೋದಿ ಸರ್ಕಾರ ಎಷ್ಟೆಷ್ಟೋ ಸಾಲ ಮಾಡಿದೆಯಂತೆ. ಅಧಿಕಾರದ ಕಿರೀಟ ಎಲ್ಲರಿಗೂ ಸಿಕ್ಕಾಗ ಮಾತ್ರ ಸಮಾನತೆ ಬರುತ್ತದೆ ಎಂದಿದ್ದಾರೆ.
ಸಿದ್ದರಾಮಯ್ಯ ಕಾರ್ ಮೇಲೆ ನಡೆದ ಮೊಟ್ಟೆ ಎಸೆತ ನಿಜಕ್ಕೂ ಬೇಸರದ ವಿಚಾರ. ತುಪ್ಪ ತಿಂದವರು, ತಿನ್ನವವರು ಎಂದೂ ಜೈಲಿಗೆ ಹೋಗಿಲ್ಲ. ಪುರೋಹಿತರು ಎಂದಾದರೂ ಯುದ್ಧ ಮಾಡಿದ್ದಾರಾ? ಅವರು ಯುದ್ದ ಮಾಡಲು ಪ್ರೇರೇಪಣೆ ಮಾಡುತ್ತಾರೆ. ಜೈರಾಮ್, ಶ್ರೀರಾಮ್ ಎಂದು ಹೇಳುತ್ತಾ ನಮ್ಮ ಹುಡುಗರನ್ನು ಜಗಳಕ್ಕೆ ಹಚ್ಚುತ್ತಾರೆ. ಹೊಡೆದಾಡಿಕೊಂಡು ಜೈಲಿನಲ್ಲಿರೋದು ನಮ್ಮಂತಹ ಹಿಂದುಳಿದ ಸಮುದಾಯದ ಹುಡುಗರು.
ನಾಗಪುರ ಶಕ್ತಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಬೈಠಕ್ ಎಂದು ಬಂದು ನಮ್ಮದೇ ಮನೆಯ ಉಪ್ಪಿಟ್ಟು ತಿಂದು ಜಗಳ ಹಚ್ಚಿ ಹೋಗುತ್ತಾರೆ, ಎಚ್ಚರವಿರಿ. ಸಂಗೊಳ್ಳಿ ರಾಯಣ್ಣನನ್ನು ತುಪ್ಪ ತಿನ್ನುವ ಜನರು ಬ್ರಿಟಿಷರಿಗೆ ಹಿಡಿದುಕೊಟ್ಟಿದ್ದರು. ಪಾರ್ಲಿಮೆಂಟ್‌ನಲ್ಲಿ ನಾವು ಡೊಳ್ಳು ಬಾರಿಸಬೇಕು ಎಂಬುದು ನಮ್ಮ ಕನಸು ಆಗಬೇಕು. ನಮ್ಮ ಅಸ್ತಿತ್ವದ ವಿಚಾರ ಬಂದರೆ ಎದ್ದು ನಿಲ್ಲಬೇಕು. ಅಕ್ಷರದ ಕಡೆಗೆ ನಮ್ಮ ಸಮುದಾಯ ಹೆಚ್ಚು ಗಮನ ಕೊಡಬೇಕು ಎಂದಿದ್ದಾರೆ.
ಇದನ್ನೂ ಓದಿ | ಮುರುಘಾ ಶ್ರೀ ಪ್ರಕರಣ | ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ, ಹೇಳಿದ್ದೇನು?