ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಸಂಘಟನಾತ್ಮಕ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹಿಂದಿಯಲ್ಲಿ ಮಾತನಾಡಲು ನಿರಾಕರಿಸಿದರು.
ಸೋಮವಾರ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ತಾವು ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವುದಾಗಿ ಹೇಳಿದರು.
ರಾಜ್ಯಕ್ಕೆ ಬರುವ ಕಾರ್ಯಕ್ರಮ ಇರಲಿಲ್ಲ. ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿಯಾಗಬೇಕು ಎಂಬ ಕಾರಣಕ್ಕೆ ಬಂದೆ. ಬಳ್ಳಾರಿಯಲ್ಲಿ ಸಮಾವೇಶ ಯಶಸ್ವಿಯಾಯಿತು. ಸಂಘಟನೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಅಭ್ಯರ್ಥಿ ಆಗಿ ನಿಂತಿದ್ದೇನೆ. ಗಾಂಧಿ ಕುಟುಂಬದಿಂದ ಚುನಾವಣೆಯಲ್ಲಿ ಭಾಗಿಯಾಗಿಲ್ಲ. ಇಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡ್ರಿ ಎಂದು ಅಭಿಪ್ರಾಯ ವ್ಯಕ್ತ ಆಯಿತು. ಇದಾದ ಮೇಲೆ ನಾನು ಸ್ಪರ್ಧೆ ಮಾಡಿದ್ದೇನೆ. ನನಗೆ ಚುನಾವಣೆಗೆ ನಿಲ್ಲಬೇಕು ಎಂಬ ಆಸಕ್ತಿ ಇರಲಿಲ್ಲ. ಎಲ್ಲಾ ಹಿರಿಯ ನಾಯಕರೂ ಒತ್ತಾಯ ಮಾಡಿದ್ದರಿಂದ ಸ್ಪರ್ಧಿಸಿದ್ದೇನೆ ಎಂದರು.
ಚುನಾವಣೆಯಲ್ಲಿ ಬೆಂಬಲ ಕೊಡಿ ಎಂದು ಕೇಳುತ್ತೇನೆ. ಪ್ರಾಥಮಿಕ ಸದಸ್ಯತ್ವದಿಂದ ನನ್ನ ರಾಜಕೀಯ ಜೀವನ ಸಾಗಿದೆ. ಎಲ್ಲರೂ ನನಗೆ ಬೆಂಬಲ ಕೊಡುತ್ತಾರೆ. ಆದರೆ ಅಪೀಲ್ ಮಾಡುವುದು ನನ್ನ ಕರ್ತವ್ಯ. ಎಲ್ಲರೂ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
RSS ಬೆಂಬಲಿತ ಕೇಂದ್ರ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ ಎಂದ ಖರ್ಗೆ, ಅನೇಕ ಚುನಾಯಿತ ಸರ್ಕಾರಗಳನ್ನು ತೆಗೆದು ಹಾಕಿದ್ದಾರೆ. ಸ್ವಾಯತ್ತ ಸಂಸ್ಥೆಗಳ ಮೂಲಕ ಸರ್ಕಾರಗಳನ್ನು ತೆಗೆದು ಹಾಕುತ್ತಾರೆ. ಯಾರು ತಮಗೆ ಬೆಂಬಲ ನೀಡುವುದಿಲ್ಲವೋ ಅವರ ಮೇಲೆ ಕೇಸ್ ಹಾಕುತ್ತಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ 6 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಬಿಜೆಪಿಯವರು ಹೆದರಿಸಿ, ಬೆದರಿಸಿ ಅವರ ಸರ್ಕಾರ ರಚನೆ ಮಾಡಿಕೊಂಡಿದ್ದಾರೆ. ಇದನ್ನು ಎದುರಿಸಬೇಕು ಎಂದರೆ ಕಾಂಗ್ರೆಸ್ ಪಕ್ಷ ಸ್ಟ್ರಾಂಗ್ ಆಗಬೇಕು. ಇದೆಲ್ಲವೂ ಒಬ್ಬನಿಂದಲೇ ಆಗುತ್ತದೆ ಎಂದು ಹೇಳುವುದಿಲ್ಲ. ಎಲ್ಲರೂ ಸೇರಿ ಪಕ್ಷವನ್ನು ಕಟ್ಟಬೇಕು ಎಂದರು.
ಶಶಿತರೂರು ಸ್ಪರ್ಧೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇವೆ. ಅವರ ವಿಷಯಗಳ ಅವರು ಹೇಳುತ್ತಾರೆ. ಮನೆಯೊಳಗೆ ನಡೆಯುತ್ತಿರುವ ಚುನಾವಣೆ ಇದು. ಅವರ ವಿರುದ್ಧ ಕಾಂಟ್ರವರ್ಸಿಗೆ ಹೋಗುವುದಿಲ್ಲ. ಇದು ಫ್ರೆಂಡ್ಲಿ ಪೈಟ್ ಎಂದರು.
ಕಾಂಗ್ರೆಸ್‌ನಲ್ಲಿ ಸಿದ್ದು, ಡಿಕೆಶಿ ಬಣದ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವ ಬಣಗಳೂ ಇಲ್ಲ. ಎಲ್ಲವೂ ನಿಮ್ಮ ಊಹೆ ಅಷ್ಟೇ. ನಾವು ಒಗ್ಗಟ್ಟಿನಲ್ಲಿದ್ದೇವೆ ಎಂದರು.
ಗೆದ್ದ ನಂತರ ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಅವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲ. ಹೀಗಾಗಿ ಏನೇನೊ ಮಾತನಾಡುತ್ತಾರೆ. ಆ ಕುಟುಂಬದವರು ಈ ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ. ನಂತರ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಬಹುಮತ ಬಂದಾಗಲೂ ಸೋನಿಯಾ ಗಾಂಧಿ ಅಧಿಕಾರ ಅನುಭವಿಸಲಿಲ್ಲ. ಅವರ ಸಲಹೆಯಿಂದ ನಮ್ಮ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಅವರಿಗೆ ದೇಶದ ಮೂಲೆ ಮೂಲೆ ಗೊತ್ತಿದೆ. ಹೀಗಾಗಿ ಅವರ ಸಲಹೆ ಪಡೆಯುವುದು ನನ್ನ ಕರ್ತವ್ಯ ಎಂದರು.
ಸುದ್ದಿಗೋಷ್ಠಿಯ ನಡುವೆ, ಹಿಂದಿಯಲ್ಲೂ ಮಾತನಾಡುವಂತೆ ವಿ.ಆರ್. ಸುದರ್ಶನ್ ಅವರು ಖರ್ಗೆ ಅವರಿಗೆ ಮನವಿ ಮಾಡಿದರು. ಹಿಂದಿ ಸುದ್ದಿವಾಹಿನಿಯ ಪತ್ರಕರ್ತರು ಈ ಕುರಿತು ಅವರಿಗೆ ಮನವಿ ಮಾಡುತ್ತಿದ್ದರು. ಆದರೆ ಅನೇಕ ಬಾರಿ ಇದನ್ನು ಖರ್ಗೆ ಕಡೆಗಣಿಸಿದರು. ಹಿಂದಿಯಲ್ಲಿ ಪ್ರತಿಕ್ರಿಯೆ ನೀಡಿದ ಖರ್ಗೆ, ಹಿಂದಿ ಏಕೆ ಮಾತನಾಡಬೇಕು? ಈಗಾಗಲೆ ದೇಶದ ವಿವಿಧೆಡೆ ಸುದ್ದಿಗೋಷ್ಠಿಯಲ್ಲಿ ಹೇಳಿದ ವಿಚಾರಗಳನ್ನೇ ಇಲ್ಲಿಯೂ ಕರ್ನಾಟಕದಲ್ಲಿ ಹೇಳುತ್ತಿದ್ದೇನೆ. ಅಷ್ಟಕ್ಕೂ ತಮಗೆ ಉಪಯೋಗ ಎನ್ನುವುದಾದರೆ, ಇಲ್ಲಿ ಕನ್ನಡದಲ್ಲಿ ಹೇಳಿದ್ದನ್ನೇ ಹಿಂದಿಗೆ ಅನುವಾದ ಮಾಡಿಕೊಳ್ಳಿ. ಬೇರೆ ಕಡೆಗಳಲ್ಲಿ ನಾನು ಹಿಂದಿಯಲ್ಲಿ ಮಾತನಾಡುತ್ತೇನೆ. ಅಲ್ಲೆಲ್ಲ ಕನ್ನಡದಲ್ಲಿ ಮಾತನಾಡಿದರೆ ತೆಗೆದುಕೊಳ್ಳುತ್ತೀರ? ಸ್ಥಳೀಯರನ್ನೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಿ. ಕರ್ನಾಟಕದಲ್ಲಿ ಬಂದು ಕನ್ನಡದಲ್ಲಿ ಮಾತನಾಡಬೇಕು ಎಂದು ಹಿಂದಿಯಲ್ಲೇ ತಿಳಿ ಹೇಳಿದರು.
ಇದನ್ನೂ ಓದಿ | Bharat Jodo | ಸೋನಿಯಾ, ರಾಹುಲ್ ಪ್ರಯತ್ನದಿಂದ ಕಲ್ಯಾಣ ಕರ್ನಾಟಕಕ್ಕೆ 371ಜೆ ಸ್ಥಾನಮಾನ: ಖರ್ಗೆ