Site icon Vistara News

AICC ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತವರಿಗೆ ಮಲ್ಲಿಕಾರ್ಜುನ ಖರ್ಗೆ: ಕಲ್ಯಾಣ ಕ್ರಾಂತಿ ಸಮಾವೇಶದ ಮೂಲಕ ಸ್ವಾಗತ

mallikarjun kharge visiting home town first time after taking charge as aicc president

ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ ಶನಿವಾರ ತವರು ಜಿಲ್ಲೆ ಆಗಮಿಸುತ್ತಿದ್ದು, ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ.

ಖರ್ಗೆ ಅವರ ಕರ್ಮ ಭೂಮಿ ಕಲಬುರ್ಗಿಯಲ್ಲಿ ಬೃಹತ್‌ ಸಮಾವೇಶವನ್ನು ಶನಿವಾರ ಆಯೋಜನೆ ಮಾಡಲಾಗಿದ್ದು, ಅದಕ್ಕೆ ಕಲ್ಯಾಣ ಕ್ರಾಂತಿ ಸಮಾವೇಶ ಎಂದು ಹೆಸರಿಡಲಾಗಿದೆ.

ಸುಮಾರು ಮೂರು ದಶಕದ ನಂತರ ನೆಹರೂ ಕುಟುಂಬದ ಹೊರಗಿನವರು ಎಐಸಿಸಿ ಅಧ್ಯಕ್ಷರಾಗಿದ್ದು, ಸ್ಪರ್ಧೆಯಲ್ಲಿದ್ದ ತಿರುವನಂತಪುರ ಸಂಸದ ಶಶಿ ತರೂರ್‌ ಅವರನ್ನು ಸೋಲಿಸಿ ಅಕ್ಟೋಬರ್‌ ಕೊನೆಯ ವಾರದಲ್ಲಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿದ್ದ ಖರ್ಗೆ ಅವರಿಗೆ ನವೆಂಬರ್‌ 6ರಂದು ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಅಲ್ಲಿಂದ ರ‍್ಯಾಲಿಯ ಮೂಲಕ ಅರಮನೆ ಮೈದಾನಕ್ಕೆ ಕರೆತರಲಾಗಿತ್ತು.

ಸರ್ವೋದರ ಸಮಾವೇಶದ ಹೆಸರಿನಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಖರ್ಗೆ, ನನಗೆ ಹಾರ ತುರಾಯಿ ಹಾಕಿ ಸನ್ಮಾನಿಸುವುದಲ್ಲ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಸೂಚನೆ ನೀಡಿದ್ದರು.

ಆನಂತರ ರಾಷ್ಟ್ರೀಯ ಪ್ರವಾಸಕ್ಕೆ ತೆರಳಿದ್ದ ಖರ್ಗೆ, ಪ್ರಮುಖವಾಗಿ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಖರ್ಗೆ ಅಧಿಕಾರ ವಹಿಸಿಕೊಳ್ಳುವ ವೇಳೆಗೆ ಚುನಾವಣೆ ತಯಾರಿ ಬಹುತೇಖ ನಡೆದಿತ್ತು. ಟಿಕೆಟ್‌ ಹಂಚಿಕೆ ಪ್ರಕ್ರಿಯೆಯೂ ನಡೆಯುತ್ತಿತ್ತು. ಆದ್ಧರಿಂದ ಹೆಚ್ಚೇನೂ ಅಧಿಕಾರ ಚಲಾಯಿಸಲು ಅವಕಾಶವಾಗಲಿಲ್ಲ. ಗುಜರಾತ್‌ನಲ್ಲಿ ಭಾಷಣ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣನಿಗೆ ಹೋಲಿಕೆ ಮಾಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿತು.

ಸ್ವತಃ ಮೋದಿ ಹಾಗೂ ಇತರೆ ಬಿಜೆಪಿ ನಾಯಕರು ಖರ್ಗೆ ಮಾತನ್ನು ಬಳಸಿಕೊಂಡು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಒಂದೆಡೆ ಗುಜರಾತ್‌ನಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡರೆ ಮತ್ತೊಂದೆಡೆ ಹಿಮಾಚಲದಲ್ಲಿ ಗೆಲುವಿನ ನಗೆ ಬೀರಿದೆ. ಚುನಾವಣೆಗಳ ಸಿಹಿ-ಕಹಿ ಅನುಭವದ ನಡುವೆಯೇ ಖರ್ಗೆ ತವರು ನೆಲಕ್ಕೆ ಆಗಮಿಸುತ್ತಿದ್ದಾರೆ.

ಕಲ್ಯಾಣ ಕ್ರಾಂತಿ ಸಮಾವೇಶ
ಶನಿವಾರ ಮದ್ಯಾಹ್ನ 12.30ಕ್ಕೆ ಕಲಬುರಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಕಲ್ಯಾಣ ಕ್ರಾಂತಿ ಸಮಾವೇಶನವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಂಯ್ಯ, ಕೆಪಿಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಕಲ್ಯಾಣ ಕರ್ನಾಟಕ ಉಸ್ತುವಾರಿ ಶ್ರೀಧರ ಬಾಬು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿ ಅನೇಕ ಮುಖಂಡರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೂ ಮೊದಲು ನಗರೇಶ್ವರ ಶಾಲೆಯಿಂದ ಜಗತ್‌ ವೃತ್ತದವರೆಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಈಗಾಗಲೆ ನಗರದಾದ್ಯಂತ ಫೆಕ್ಸ್‌, ಬಂಟಿಂಗ್‌ ಗಳ ಮೂಲಕ ಅಲಂಕಾರ ಮಾಡಲಾಗಿದ್ದು, ಸ್ವಾಗತಕ್ಕೆ ಸಜ್ಜಾಗಲಾಗಿದೆ.

ಇದನ್ನೂ ಓದಿ | Sarvodaya Samavesha | ಪಕ್ಷಕ್ಕೆ ಬಂದ ಕೂಡಲೇ ಸಿಎಂ ಮಾಡಿ ಅನ್ನಬೇಡಿ: ಮಲ್ಲಿಕಾರ್ಜುನ ಖರ್ಗೆ

Exit mobile version