ಬೆಂಗಳೂರು, ಕರ್ನಾಟಕ: ಮತ ಏಣಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಸನಿಹಕ್ಕೆ ಹೋಗುತ್ತಿರುವುದು ಕಾಂಗ್ರೆಸಿಗರಿಗೆ ಖುಷಿಯೆನ್ನು ತಂದಿದ್ದರೆ, ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ 58ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಧರ್ಮ ಪತ್ನಿ ರಾಧಾಬಾಯಿ ಅವರು ವಿವಾಹ ವಾರ್ಷಿಕೋತ್ಸವದ ಸಂತಸವನ್ನು ಹಂಚಿಕೊಂಡರು. ಜತೆಗೆ, ಇತರ ಕುಟುಂಬದ ಸದಸ್ಯರು ಪಾಲ್ಗೊಂಡರು.
ಕರ್ನಾಟಕ ವಿಧಾನಸಭೆ ಚುನಾವಣೆ ಮತ ಏಣಿಕೆ ಭರದಿಂದ ಸಾಗುತ್ತಿದ್ದು, ನಿಚ್ಚಳವಾಗಿ ಕಾಂಗ್ರೆಸ್ ಬಹುಮತದ ಸಾಗುತ್ತಿದೆ. ಹಾಗಾಗಿ, ಸಹಜವಾಗಿಯೇ ಕಾಂಗ್ರೆಸ್ ಪಕ್ಷದಲ್ಲಿ ಸಂತಸ ಮೂಡಿದೆ. ಕಾರ್ಯಕರ್ತರು ವಿಜಯವನ್ನು ಆನಂದಿಸುತ್ತಿದ್ದಾರೆ. ಕರ್ನಾಟಕವೂ ಸೇರಿದಂತೆ ದಿಲ್ಲಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ವಿಜಯದ ಆಚರಣೆ ನಡೆದಿದೆ.
ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದವರಿಗೆ ಭಾರೀ ಹಿನ್ನಡೆ
ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ (Karnataka Election result 2023) ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಆರಂಭಿಕ ಪ್ರವೃತ್ತಿಗಳ ಪ್ರಕಾರ ಕಾಂಗ್ರೆಸ್ ಭಾರಿ ಮುನ್ನಡೆಯನ್ನು ಸಾಧಿಸಿದೆ. ರಾಜ್ಯ ಸಚಿವ ಸಂಪುಟದ ಹಲವು ಸಚಿವರ ಸಹಿತ ಬಿಜೆಪಿಗೆ ಹಿನ್ನಡೆಯಾಗಿದೆ. 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 116 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 78 ಕಡೆಗಳಲ್ಲಿ ಮುನ್ನಡೆಯಲ್ಲಿದೆ. ಜೆಡಿಎಸ್ 25 ಮತ್ತು ಇತರರು ಐದು ಕಡೆ ಗೆಲುವಿನ ಕಡೆಗೆ ಸಾಗುವ ಪ್ರವೃತ್ತಿ ತೋರಿಸಿದ್ದಾರೆ.
ಈ ಚುನಾವಣೆಯ ಮತ ಎಣಿಕೆಯ ಅತ್ಯಂತ ಮಹತ್ವದ ಸಂಗತಿ ಎಂದರೆ 2019ರಲ್ಲಿ ಕಾಂಗ್ರೆಸ್- ಜೆಡಿಎಸ್‌ನ ಮೈತ್ರಿ ಸರ್ಕಾರ ಉರುಳುವುದಕ್ಕೆ ಕಾರಣವಾದ ಆಪರೇಷನ್ ಕಮಲದಲ್ಲಿ ಬಿಜೆಪಿ ಪಾಲಾಗಿದ್ದ 17 ಮಂದಿಯಲ್ಲಿ ಹೆಚ್ಚಿನವರು ಹಿನ್ನಡೆಯಲ್ಲಿದ್ದಾರೆ. ಆಗ 14 ಮಂದಿ ಕಾಂಗ್ರೆಸ್ ಶಾಸಕರು, ಮೂವರು ಜೆಡಿಎಸ್ ಶಾಸಕರು ಆಪರೇಷನ್‌ಗೆ ಒಳಗಾಗಿದ್ದರು.
ಇವರ ಪೈಕಿ ರಮೇಶ್ ಜಾರಕಿಹೊಳಿ (ಗೋಕಾಕ), ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್), ಎಸ್‌ಟಿ ಸೋಮಶೇಖರ್ (ಯಶವಂತಪುರ), ಎಂಟಿಬಿ ನಾಗರಾಜ್ (ಹೊಸಕೋಟೆ), ಮಹೇಶ್ ಕುಮಟಳ್ಳಿ (ಅಥಣಿ), ಶ್ರೀಮಂತ ಪಾಟೀಲ್ (ಕಾಗವಾಡ), ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ), ಬಿ.ಸಿ. ಪಾಟೀಲ್ (ಹಿರೇಕೆರೂರು), ಕೆ.ಸಿ. ನಾರಾಯಣ ಗೌಡ (ಕೆ.ಆರ್. ಪೇಟೆ) ಅವರು ಹಿನ್ನಡೆಯಲ್ಲಿದ್ದಾರೆ.
ಇದನ್ನೂ ಓದಿ: Karnataka Election Results 2023 : ಯಾವ ಜಿಲ್ಲೆಯಲ್ಲಿ ಯಾವ ಪಕ್ಷ ಸದ್ಯ ಮುನ್ನಡೆಯಲ್ಲಿದೆ?
ಸಚಿವರಾದ ಬೈರತಿ ಬಸವರಾಜ್, ಶಿವರಾಮ ಹೆಬ್ಬಾರ್, ಅವರು ಮುನ್ನಡೆಯಲ್ಲಿದ್ದಾರೆ. ರಾಜ್ಯದ 224 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 73.19 ಶೇಕಡಾ ಮತದಾನ ಆಗಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 80, ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಶಾಸಕರ ವಲಸೆ ಬಳಿಕ ಬಿಜೆಪಿ ಬಲ 120ಕ್ಕೇರಿದ್ದರೆ, ಕಾಂಗ್ರೆಸ್ ಶಕ್ತಿ 65ಕ್ಕೆ, ಜೆಡಿಎಸ್ ಶಾಸಕರ ಸಂಖ್ಯೆ 35ಕ್ಕೆ ಇಳಿದಿತ್ತು.