ಬೆಂಗಳೂರು: ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮರಳಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜೆಡಿಎಸ್ ಪಕ್ಷದ ಶಾಲು ಹಾಕುವ ಮೂಲಕ ಖೂಬಾ ಅವರನ್ನು ಪಕ್ಷಕ್ಕೆ ಕುಮಾರಸ್ವಾಮಿ ಬರಮಾಡಿಕೊಂಡರು. ಶುಭ ಸಮಯ ಇದ್ದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾಗಿ ಖೂಬಾ ಅವರು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ಬಸವ ಕಲ್ಯಾಣ ಕ್ಷೇತ್ರವನ್ನು ಎರಡು ಅವಧಿಗೆ ಪ್ರತಿನಿಧಿಸಿದ್ದರು ಖೂಬಾ. ಕಳೆದ ಚುನಾವಣೆ ವೇಳೆ ಬಿಜೆಪಿಗೆ ಮರಳಿದ್ದರು. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಬಿ. ನಾರಾಯಣ ರಾವ್ ವಿರುದ್ಧ ಸೋಲುಂಡಿದ್ದರು.
ಈ ಕುರಿತು ಮಾತನಾಡಿದ ಕುಮಾರಸ್ವಾಮಿ, ಖೂಬಾ ಅವರು ಜೆಡಿಎಸ್ ಪಕ್ಷದಲ್ಲಿಯೇ ಇದ್ದವರು. ಕಾರಣಾಂತರಗಳಿಂದ ಅವರು ಪಕ್ಷ ಬಿಟ್ಟಿದ್ದರು. ಈಗ ಮರಳಿ ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಒಳ್ಳೆಯ ಸಮಯ ಇದೆ ಎನ್ನುವ ಕಾರಣಕ್ಕೆ ಬಂದು ಪಕ್ಷಕ್ಕೆ ಸೇರಿದರು. ಶೀಘ್ರದಲ್ಲಿಯೇ ಅವರು ಪಕ್ಷದ ರಾಜ್ಯದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಷೆಂಪೂರ್ ಮತ್ತಿತರೆ ಹಿರಿಯ ನಾಯಕರ ಸಮಕ್ಷಮದಲ್ಲಿ ತಮ್ಮ ಬೆಂಬಲಿಗರ ಜತೆ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ: ರಾಮ ರಾಮ! ಶ್ರೀರಾಮನ ಕಾಲಿನ ಮೇಲೆ ನಿಂತು ಪ್ರತಿಮೆಗೆ ಹೂವಿನ ಹಾರ ಹಾಕಿದ ಬಸವಕಲ್ಯಾಣ ಬಿಜೆಪಿ ಶಾಸಕ!