ಬೆಂಗಳೂರು: ರಾಜ್ಯದ ಹಲವು ಕಡೆ ಮಳೆ ಆರ್ಭಟ ಮುಂದುವರಿಯಲಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ (Weather Report) ತಿಳಿಸಿದೆ.
ಇನ್ನು ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಉತ್ತರ ಒಳನಾಡಿನ ಕೆಲವು ಕಡೆ ಮಳೆಯಾಗಲಿದೆ.
ಇದನ್ನೂ ಓದಿ: ಪತ್ನಿಯ ನೋವನ್ನು ಅರ್ಥ ಮಾಡಿಕೊಂಡು, ತ್ಯಾಗವನ್ನೇ ಮಾಡಿದ ಪತಿ; ಹಳ್ಳಿಜನ ಸಿಟ್ಟಾದರೂ ಮೌನವಾಗಿಯೇ ಇದ್ದ!
ಹೆಚ್ಚಲಿದೆ ಗಾಳಿ ವೇಗ
ಇನ್ನು ಹಲವು ಕಡೆ ಗುಡುಗು ಸಹಿತ ಮಳೆಯಾಗುವುದಲ್ಲದೆ, ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ. ವೇಗವನ್ನು ಪಡೆದುಕೊಳ್ಳಲಿದೆ.
ಬಾಗಲಕೋಟೆಯಲ್ಲಿ ಮನೆಗಳಿಗೆ ಹಾನಿ
ಬಾಗಲಕೋಟೆಯ ಹಲವು ಕಡೆ ಗುರುವಾರ ರಾತ್ರಿ ಭಾರಿ ಗಾಳಿಯೊಂದಿಗೆ ಧಾರಾಕಾರ ಮಳೆಯಾಗಿದ್ದು, ಮರಗಳು ಮನೆಗಳ ಮೇಲೆ ಬಿದ್ದು, ಸಾಕಷ್ಟು ಹಾನಿಯಾಗಿವೆ. ಮಹಾಲಿಂಗಪುರದ ಕೆಂಗರ ಮಡ್ಡಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಮಳೆಯಿಂದಾಗಿ ಭಾರಿ ಹಾನಿಯಾಗಿದ್ದು, ಭಾರಿ ಮಳೆ, ಗಾಳಿಯಿಂದ ತಗಡಿನ ಶೆಡ್‌ಗಳ ಛಾವಣಿ ಹಾರಿಹೋಗಿವೆ. ಇದರಿಂದ ಸುಮಾರು 25ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ. ಭಾರಿ ಪ್ರಮಾಣದ ಮರಗಳು ಬಿದ್ದು 5ಕ್ಕೂ ಹೆಚ್ಚು ಮನೆಗಳಿಗೆ ಸಂಪೂರ್ಣ ಹಾನಿಯಾಗಿವೆ. ಅಲ್ಲದೆ, ಸುಮಾರು 5 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಮುಖ್ಯಮಂತ್ರಿ ಕಾನೂನು ಸಲಹೆಗಾರರಾಗಿ ಎ ಎಸ್ ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿಯಾಗಿ ನಜೀರ್ ಅಹ್ಮದ್ ನೇಮಕ
ಮನೆಗಳಿಗೆ ಹಾನಿ
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರಗಳ ಕೊಂಬೆಗಳನ್ನು ಕಡಿಯದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆಯರು ಹಿಡಿಶಾಪ ಹಾಕಿದ್ದಾರೆ. ಮೊದಲೇ ಅಪಾಯದಲ್ಲಿರುವ ಮರಗಳನ್ನು ಕತ್ತರಿಸಿ ಎಂದು ಹೇಳಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಈಗ ಮರಗಳು ಮನೆಗಳ ಮೇಲೆ ಬಿದ್ದಿವೆ. ಇದಕ್ಕಾಗಿ ನಮಗೆ ಪರಿಹಾರವನ್ನು ಕೂಡಲೇ ಒದಗಿಸಬೇಕು ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.