Site icon Vistara News

Mandya News: ಮನೆ ಮುಂದೆ ಚರಂಡಿ ನಿರ್ಮಾಣಕ್ಕೆ ಪ್ರಧಾನಿ ಮೋದಿಗೆ ಮೊರೆ; ಕಾಮಗಾರಿ ಶುರು

Road work

ಮಂಡ್ಯ: ಮನೆ ಮುಂದೆ ಚರಂಡಿ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊರೆ ಹೋಗಿದ್ದು, ನಮೋಗೆ ಪತ್ರ ಬರೆದ ಬೆನ್ನಲ್ಲೇ ಚರಂಡಿ ಕಾಮಗಾರಿ ಆರಂಭವಾಗಿರುವುದು (Mandya News) ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.

ಬೂದನೂರು ಗ್ರಾಮದ ಚಂದ್ರಶೇಖರ್ ಪತ್ರಕ್ಕೆ ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಸ್ಪಂದನೆ ಸಿಕ್ಕಿದೆ. ಅಧಿಕಾರಿಗಳನ್ನು ಬೇಡಿಕೊಂಡರೂ ಆಗದ ಕೆಲಸ ಒಂದು ಪತ್ರದಿಂದಾಗಿದೆ. ಪ್ರಧಾನಿ ಕಚೇರಿಯಿಂದ ಸೂಚನೆ ಬರುತ್ತಿದ್ದಂತೆ ಚರಂಡಿ ನಿರ್ಮಿಸಲು ಗ್ರಾಮ ಪಂಚಾಯಿತಿ ಮುಂದಾಗಿದೆ.

ಮನೆ ಮುಂದೆ ಅಶುಚಿತ್ವ ಕಂಡು ಚರಂಡಿ ನಿರ್ಮಾಣಕ್ಕೆ ಸಾಫ್ಟ್‌ವೇರ್ ಎಂಜಿನಿಯರ್ ಚಂದ್ರಶೇಖರ್ ಮನವಿ ಮಾಡಿದ್ದರು. ಹತ್ತಾರು ಬಾರಿ ಮನವಿ ಮಾಡಿದರೂ ಗ್ರಾ.ಪಂ ಪಿಡಿಒ ಹಾಗೂ ಸದಸ್ಯರು ತಲೆ ಕೆಡಿಸಿಕೊಂಡಿರಲಿಲ್ಲ. ಮೇಲಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಚಂದ್ರಶೇಖರ್‌ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.

ಜುಲೈ 5 ರಂದು ಆನ್‌ಲೈನ್ ಮೂಲಕ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆಯಲಾಗಿತ್ತು. ದೂರು ಸಲ್ಲಿಸಿದ ಕೆಲವೇ ದಿನಕ್ಕೆ ಪಿಎಂ‌ ಕಚೇರಿಯಿಂದ ಸ್ಪಂದನೆ ಸಿಕ್ಕಿದೆ. ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿಗೆ ಸೂಕ್ತ ಕ್ರಮವಹಿಸುವಂತೆ ತಾಕೀತು ಮಾಡಲಾಗಿದೆ. ಹೀಗಾಗಿ ಅಧಿಕಾರಿಗಳು, ತಕ್ಷಣ ಸ್ವಚ್ಛ ಭಾರತ್‌ ಮಿಷನ್ ಯೋಜನೆಯಡಿ ಚರಂಡಿ ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ | ವಿಧಾನಸೌಧ ರೌಂಡ್ಸ್: ರಾಜ್ಯ ಕಾಂಗ್ರೆಸ್‌ ಮೇಲೆ ಬಿಜೆಪಿ ಹೈಕಮಾಂಡ್‌ನಿಂದ ವಿಜಯೇಂದ್ರ ಅಸ್ತ್ರ ಪ್ರಯೋಗ!

ವರದಿ ನೀಡುವಂತೆ ಮಂಡ್ಯ ತಾ.ಪಂ ಸಿಇಒಗೆ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದು, ನವೆಂಬರ್ 9ರಿಂದ ಚರಂಡಿ ಕಾಮಗಾರಿ ಕಾಮಗಾರಿ ಆರಂಭವಾಗಿದೆ. ಇಷ್ಟಾದರೂ ಕಾಟಾಚಾರಕ್ಕೆ ಗ್ರಾಂ ಪಂಚಾಯಿತಿ ಅಧಿಕಾರಿಗಳು ಕೆಲಸ ಮಾಡಿಸುತ್ತಿದ್ದಾರೆ ಎಂಬ ಅರೋಪ ಕೇಳಿಬಂದಿದೆ. 30 ಮೀಟರ್ ಬದಲಿಗೆ ಕೇವಲ 10 ಮೀಟರ್ ಚರಂಡಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಲು ಚಂದ್ರಶೇಖರ್ ನಿರ್ಧಾರ ಮಾಡಿದ್ದು,
ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ದೂರು ಕೊಡಲು ತೀರ್ಮಾನ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version