ಚಿಕ್ಕಮಗಳೂರು: ಫೇಸ್‌ಬುಕ್ ಸೇರಿ ಹಲವು ಸಾಮಾಜಿಕ ಜಾಲತಾಣಗಳ (Social Media) ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವವರು, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಆಸ್ಪತ್ರೆಯಲ್ಲಿರುವವರ ಚಿಕಿತ್ಸೆಗೆ (Treatment) ಸಹಾಯ ಮಾಡುವವರ ಸಂಖ್ಯೆ ಹೆಚ್ಚಿದೆ. ಆದರೆ, ಚಿಕ್ಕಮಗಳೂರಿನಲ್ಲಿ (Chikkamagaluru) ಅಬ್ದುಲ್ ಖಾದರ್ ಎಂಬಾತನು ವ್ಯಕ್ತಿಯೊಬ್ಬರ ಮಗಳ ಚಿಕಿತ್ಸೆಗೆ ಸಹಾಯ ಮಾಡುತ್ತೇನೆ ಎಂದು ಲಕ್ಷಾಂತರ ರೂಪಾಯಿ ವಂಚಿಸಿದ ಹೀನ ಕೃತ್ಯ ಬಯಲಾಗಿದೆ. ಅಷ್ಟೇ ಅಲ್ಲ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಬಾಲಕಿ ಮೃತಪಟ್ಟಿದ್ದಾಳೆ. ಇದಾದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ತಾಲೂಕು ಬೆಟ್ಟದ ಮಳಲಿಯ ರವಿ ಎಂಬುವರ ಪುತ್ರಿಯು ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದಳು. ಮಗಳ ಚಿಕಿತ್ಸೆಗೆ ಸಹಾಯ ಮಾಡುವಂತೆ ರವಿ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಸಾರ್ವಜನಿಕರಿಂದ ಹಣಕಾಸು ನೆರವು ಸಿಗುತ್ತದೆ ಎಂಬ ಭರವಸೆಯಿಂದ ಅವರು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ನೋಡಿದ ಅಬ್ದುಲ್ ಖಾದರ್, ರವಿ ಅವರಿಗೆ ಕರೆ ಮಾಡಿದ್ದಾನೆ. ನಾನು ನಿಮಗೆ ಸಹಾಯ ಮಾಡುತ್ತೇನೆ, ನನಗೆ 10 ಪರ್ಸೆಂಟ್ ದುಡ್ಡು ಕೊಡಬೇಕು ಎಂದಿದ್ದಾನೆ. ಇದನ್ನು ನಂಬಿದ ರವಿ ಈಗ ಮೋಸಹೋಗಿದ್ದಾರೆ. ಅತ್ತ, ಮಗಳನ್ನೂ ಕಳೆದುಕೊಂಡಿದ್ದಾರೆ.
ಮಗಳ ಚಿಕಿತ್ಸೆಗೆ ನೆರವು ನೀಡುತ್ತೇನೆ ಎಂದು ಹೇಳಿದ ಅಬ್ದುಲ್ ಖಾದರ್‌ನ ಮಾತು ನಂಬಿದ ರವಿ ಅವರು ಒಂದು ಲಕ್ಷ ರೂಪಾಯಿಗಿಂತ ಅಧಿಕ ಹಣ ನೀಡಿದ್ದಾರೆ. ಇದಾದ ಬಳಿಕ ವಂಚನೆ ಅರಿತ ರವಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ಸೈಬರ್ ಕ್ರೈಂ ಪೊಲೀಸರು ತೀರ್ಥಹಳ್ಳಿ ಮೂಲದ ಅಬ್ದುಲ್ ಖಾದರ್‌ನನ್ನು ಬಂಧಿಸಿದ್ದಾರೆ. ವ್ಯಕ್ತಿಯ ಕಷ್ಟದ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡು ವಂಚಿಸಿದವನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: Fraud Case : ಹೋಮ್ ಲೋನ್ ಕೊಡಿಸುವ ನೆಪದಲ್ಲಿ ಖತರ್ನಾಕ್ ದಂಪತಿಯ ನಯವಂಚನೆ
ಸೈಬರ್ ಕ್ರೈಂ ಅಥವಾ ಆನ್‌ಲೈನ್ ವಂಚನೆ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಆಗಾಗ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅನಾಮಧೇಯ ವ್ಯಕ್ತಿಗಳು ಕರೆ ಮಾಡಿದಾಗ ಒಟಿಪಿ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿ ಹಂಚಿಕೊಳ್ಳಬಾರದು. ಕರೆ ಮಾಡಿದವರಿಗೆ ಒಟಿಪಿ ಸೇರಿ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಹಂಚಿಕೊಳ್ಳಬಾರದು. ಕರೆ ಮಾಡಿದವರ ಆಮಿಷಗಳಿಗೆ ಜನ ಬಲಿಯಾಗಬಾರದು ಎಂಬುದಾಗಿ ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ