ಮಂಡ್ಯ: ಕೌಟುಂಬಿಕ ಕಲಹಕ್ಕೆ ಮನನೊಂದು ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ. ಮಾಡಿಕೊಂಡಿರುವ ಘಟನೆ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ವಿದ್ಯಾ (32), ಪುರುಷೋತ್ತಮ (46) ಮೃತರು. ಮೊದಲಿಗೆ ಪತಿ ಕೆಲಸಕ್ಕೆ ತೆರಳಿದ್ದಾಗ ಪತ್ನಿ ವಿದ್ಯಾ (32) ಗುರುವಾರ ಸಂಜೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಷಯ ತಿಳಿದು ಮನೆಗೆ ಬಂದ ಪತಿ ಪುರುಷೋತ್ತಮ ಮನೆ ಪಕ್ಕದ ಜಮೀನಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road Accident : ಹಾಸನದಲ್ಲಿ ಬೈಕ್ ಮೇಲೆಯೇ ಹರಿದ ಬಸ್: ಸವಾರ ಸ್ಥಳದಲ್ಲೇ ಮೃತ್ಯು, ಯುವತಿಗೆ ಗಾಯ
ಮಂಗಳೂರಿನಲ್ಲಿ ಬಸ್ಸಿನಡಿಗೆ ಬಿದ್ದು ಮಹಿಳೆ ಸಾವು
ಮಂಗಳೂರು: ನಗರದ ಬೆಂದೂರುವೆಲ್ ವೃತ್ತದಲ್ಲಿ ಬಸ್ಸಿನಡಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಖಾಸಗಿ ಬಸ್ಸಿನಿಂದ ಇಳಿದು ರಸ್ತೆ ದಾಟುವಾಗ ಅದೇ ಬಸ್ಸಿನಡಿಗೆ ಬಿದ್ದು ಮಹಿಳೆ ಸಾವಿಗೀಡಾಗಿದ್ದಾರೆ. ಐರಿನ್ ಡಿಸೋಜ (65) ಮೃತ ಮಹಿಳೆ. ಅಪಘಾತದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನಲ್ಲಿ ಖಾಸಗಿ ಬಸ್ಸಿನ ಧಾವಂತಕ್ಕೆ ನಾಲ್ಕು ದಿನದಲ್ಲಿ ಎರಡನೇ ಬಲಿ ಇದಾಗಿದೆ.
ಪರೀಕ್ಷೆ ಭಯದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ; ನದಿಯಲ್ಲಿ ಶವ ಪತ್ತೆ
ಕಡಬ (ಮಂಗಳೂರು): ಮಾರ್ಚ್ 31ರಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಳ್ಳುತ್ತಿದೆ. ಶಿಕ್ಷಣ ಇಲಾಖೆ ಮತ್ತು ವಿದ್ಯಾರ್ಥಿಗಳು ಇದಕ್ಕೆ ಎಲ್ಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇಷ್ಟರ ನಡುವೆಯೇ ಪರೀಕ್ಷೆ ಭಯದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Student death) ಮಾಡಿಕೊಂಡಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಗುಂಡಿಮಜಲ್ ಗ್ರಾಮದಲ್ಲಿ ಅದ್ವೈತ್ ಶೆಟ್ಟಿ (15) ಎಂಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಅದ್ವೈತ್ ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದ. ಮನೆಯಿಂದ ಹೊರಗೆ ಹೋದವನು ಕಣ್ಮರೆಯಾಗಿದ್ದ ಆತನಿಗಾಗಿ ಮನೆಯವರು ರಾತ್ರಿ ಇಡೀ ಹುಡುಕಾಟ ನಡೆಸಿದರು. ಬೆಳಗ್ಗೆವರೆಗೂ ಬಾಲಕ ಪತ್ತೆಯಾಗಿರಲಿಲ್ಲ.
ಗುರುವಾರ ಮುಂಜಾನೆಯೂ ಹುಡುಕಾಟ ಮುಂದುವರಿದಾಗ ಕುಮಾರಧಾರಾ ನದಿಯ ನಾಕೂರು ಗಯಾ ಎಂಬಲ್ಲಿ ನದಿಯ ಪಕ್ಕದಲ್ಲಿ ಸ್ಕೂಲ್ ಬ್ಯಾಗ್ ಪತ್ತೆಯಾಯಿತು. ಬಳಿಕ ಪುತ್ತೂರು ಅಗ್ನಿಶಾಮಕ ದಳದಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ನದಿಯಲ್ಲಿ ಮೃತದೇಹ ಪತ್ತೆಯಾಯಿತು.
ಕಡಬ ಹಾಗೂ ಬೆಳ್ಳಾರೆ ಪೊಲೀಸರು ಆಗಮಿಸಿದ್ದು, ಪೋಷಕರ ಬಳಿ ವಿವರಣೆ ಪಡೆದಿದ್ದಾರೆ. ಮನೆಯವರಿಗೂ ಈ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾರ್ಚ್ 31ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿರುವುದರಿಂದ ಅದರ ಭಯದಿಂದಲೇ ಪ್ರಾಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.