ಶಿವಮೊಗ್ಗ: ಹುಲ್ಲಿನ ಪಿಂಡಿ ಕಟ್ಟುವ ಯಂತ್ರಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ ಶಿವಮೊಗ್ಗದ 9Shivamogga News) ಬೈಪಾಸ್‌ನಲ್ಲಿರುವ ಟಾಯೋಟಾ ಶೋರೂಂ ಹಿಂಭಾಗದಲ್ಲಿ ನಡೆದಿದೆ. ತಮಿಳುನಾಡು ಮೂಲದ ಸೂರ್ಯ ಮೃತ ಯುವಕ.
ವಡ್ಡಿನಕೊಪ್ಪದ ಉಜ್ಜಿನಪ್ಪ ಎಂಬುವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹುಲ್ಲಿನ ಪಿಂಡಿ ಕಟ್ಟುವ ಯಂತ್ರದಲ್ಲಿ ಸಿಲುಕಿದ್ದ ಹುಲ್ಲನ್ನು ತೆಗೆಯಲು ಯುವಕ ಮುಂದಾಗಿದ್ದಾನೆ. ಈ ವೇಳೆ ಯಂತ್ರದೊಳಗೆ ಇಣುಕಿ ನೋಡುವಾಗ ಯುವಕ ಕುತ್ತಿಗೆ ಸಿಲುಕಿಕೊಂಡಿದೆ. ಹೀಗಾಗಿ ಉಸಿರುಗಟ್ಟಿ ಯುವಕ ಮೃತಪಟ್ಟಿದ್ದಾನೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | ಆನೇಕಲ್ ಕ್ವಾರಿಯಲ್ಲಿ ಈಜಲು ಹೋದ ಬಾಲಕರಿಬ್ಬರು ನೀರು ಪಾಲು; ದೂಧ್‌ಗಂಗಾದಲ್ಲಿ ಮುಳುಗಿ ಯುವಕ ಸಾವು
ಕಲುಷಿತ ನೀರು ಸೇವಿಸಿ ಮೃತಪಟ್ಟ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ರಾಯಚೂರು: ಜಿಲ್ಲೆಯ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ನಿಧಿಯಿಂದ ಪರಿಹಾರ ಬಿಡುಗಡೆ ಮಾಡಿ ಸಿಎಂ ಜಂಟಿ ಕಾರ್ಯದರ್ಶಿ ಪಿ.ಎ. ಗೋಪಾಲ ಆದೇಶ ಹೊರಡಿಸಿದ್ದಾರೆ.
ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಮಾಡಿ 35ಕ್ಕೂ ಹೆಚ್ಚು ಜರು ಅಸ್ವಸ್ಥರಾಗಿದ್ದರು. ಈ ಪೈಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹನುಮೇಶ್ (5) ಎಂಬ ಬಾಲಕ ಮೃತಪಟ್ಟಿದ್ದ. ಬಾಲಕನ ಸಾವಿಗೆ ಕಲುಷಿತ ನೀರು ಸೇವನೆ ಕಾರಣ ಎಂಬುವುದು ಸಾಬೀತಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಲಾಗಿತ್ತು. ಸದ್ಯ ಹಣ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದುಹೋದ ಹಿನ್ನೆಲೆಯಲ್ಲಿ ಚರಂಡಿ ನೀರು ಮಿಶ್ರಣವಾಗಿ ಕುಡಿಯುವ ನೀರು ಪೂರೈಕೆಯಾಗಿತ್ತು. ಹೀಗಾಗಿ ಕಲುಷಿತ ನೀರು ಕುಡಿದಿದ್ದರಿಂದ 35ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೇ 26ರಂದು ಮೃತಪಟ್ಟಿದ್ದ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಿಎಂ ಸಿದ್ದರಾಮಯ್ಯ ಅವರು ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳುವ ಜತೆಗೆ, ಮುಖ್ಯಮಂತ್ರಿಗಳ ನಿಧಿಯಿಂದ 5 ಲಕ್ಷ ರೂಪಾಯಿ ಮಂಜೂರು ಮಾಡಿದ್ದಾರೆ.