Site icon Vistara News

ಬೀದಿ ದೀಪ ಸರಿ‌ಪಡಿಸುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು; ಕಂಬದಲ್ಲೇ ನೇತಾಡಿದ ಶವ

Electric shock

ವಿಜಯನಗರ: ಬೀದಿ ದೀಪ ಸರಿ‌ಪಡಿಸುವಾಗ ವಿದ್ಯುತ್ ತಗುಲಿ (Electric shock) ವ್ಯಕ್ತಿ ಮೃತಪಟ್ಟ ಘಟನೆ ಹರಪನಹಳ್ಳಿ ತಾಲೂಕಿನ ಒಡೆಯರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಸೂಚನೆ ಮೇರೆಗೆ ವಿದ್ಯುತ್ ಕಂಬಗಳಿಗೆ ಬೀದಿ ದೀಪ ಹಾಕಲು ಹೋಗಿ ಅನಾಹುತ ನಡೆದಿದ್ದು, ಅವಘಡದಿಂದ ವಿದ್ಯುತ್ ಕಂಬದಲ್ಲೇ ಶವ ನೇತಾಡುತ್ತಿರುವುದು ಕಂಡುಬಂದಿದೆ.

ರೇಣುಕಪ್ಪ (37) ಮೃತ ವ್ಯಕ್ತಿ. ಇವರು ಗ್ರಾಮದಲ್ಲಿ ವಿದ್ಯುತ್ ಪಂಪ್ ಸೆಟ್, ಮನೆಗಳಿಗೆ ವಿದ್ಯುತ್ ಸಂಪರ್ಕದ ‌ಕೆಲಸ ಮಾಡುತ್ತಿದ್ದರು. ಗ್ರಾಪಂ ಸಿಬ್ಬಂದಿಯೊಬ್ಬರು ಬೀದಿ ದೀಪ ಸರಿಮಾಡುವಂತೆ ಹೇಳಿದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳಿಗೆ ಬೀದಿ ದೀಪ ಹಾಕಲು ಹೋಗಿದ್ದಾರೆ. ಈ ವೇಳೆ ಅವಘಡ ನಡೆದಿದೆ.

ಇದನ್ನೂ ಓದಿ | Murder Case : ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ; ಪತ್ನಿಗೆ ಕತ್ತಿ ಬೀಸಿ ಕೊಂದ ಪತಿ

ಮದುವೆಗೆ 13 ದಿನ ಬಾಕಿ ಇರುವಾಗಲೇ ಬಾತ್‌ ರೂಮಿನಲ್ಲಿ ನೇಣಿಗೆ ಶರಣಾದಳು

ಶಿವಮೊಗ್ಗ: ಮಗಳ ಮದುವೆಗಾಗಿ ಆ ಪೋಷಕರು ಅದ್ಧೂರಿಯಾಗಿ ತಯಾರಿಯನ್ನು ಮಾಡಿಕೊಂಡಿದ್ದರು. ಅದಾಗಲೇ ಮಗಳ ಮದುವೆ ಕಾರ್ಡ್‌ ಅನ್ನು ಊರು ತುಂಬ ಹಂಚಿದ್ದರು. ಆದರೆ ಸಂಭ್ರಮದ ಮನೆಯಲ್ಲೀಗ ಸೂತಕ ಛಾಯೆ ಆವರಿಸಿದೆ. ಮದು ಮಗಳಾಗಿ ಹಸೆಮಣೆ ಏರಬೇಕಾದವಳು (Shivamogga News) ಸಾವಿನ ಮನೆ ಸೇರಿದ್ದಾಳೆ. ಮದುವೆಗೆ 13 ದಿನಗಳು ಇರುವಾಗ ಯುವತಿಯೊಬ್ಬಳು‌ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ.

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚೈತ್ರ (26) ಮೃತ ಯುವತಿ. ಚೈತ್ರ ಮನೆಯ ಸ್ನಾನದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಚೈತ್ರಗೆ ಮುಂದಿನ ಫೆಬ್ರವರಿ 4 ರಂದು ವಿವಾಹ ನಿಶ್ಚಯವಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಎಂಕಾಂ ಪದವಿ ಪಡೆದಿದ್ದ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನಗೆ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ನನಗೆ ಮದುವೆ ಬೇಡವೆಂದು ವಿರೋಧ ಮಾಡುತ್ತಿದ್ದಳು ಎನ್ನಲಾಗಿದೆ. ಆದರೆ ಮನೆಯವರು ಮನವೊಲಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ:Suspicious Death : ಮನೆಯೊಳಗೆ ನೇತಾಡುತ್ತಿತ್ತು ಗ್ರಾಪಂ ಸದಸ್ಯೆ ಶವ; ಕೊಲೆಯೋ? ಆತ್ಮಹತ್ಯೆಯೋ?

ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಗಂಡನ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡಳು

ಮಂಡ್ಯ: ಕೌಟುಂಬಿಕ ಕಲಹಕ್ಕೆ ಬೇಸತ್ತ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಮಂಡ್ಯದ ನೆಹರುನಗರ ಪೂರ್ವ ಬಡಾವಣೆಯಲ್ಲಿ ನಡೆದಿದೆ. ಪದ್ಮ.ವಿ (36) ಮೃತ ದುರ್ದೈವಿ.

ಇದನ್ನೂ ಓದಿ | Murder Case: ಪ್ರತಿದಿನವೂ ಅಕ್ಕನನ್ನು ಪೀಡಿಸುತ್ತಿದ್ದ ತಮ್ಮ; ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಬಾವ

ಪದ್ಮ ರಾಮನಗರ ತಾಲೂಕಿನ ಅಂಕನಹಳ್ಳಿ ಗ್ರಾಮದವಳು. ಮಂಡ್ಯದ ಸಿದ್ದರಾಜು ಎಂಬಾತನನ್ನು ಪ್ರೀತಿಸಿ ಪದ್ಮ ಮದುವೆ ಆಗಿದ್ದಳು. ಸಿದ್ದರಾಜು ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ. 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಇತ್ತೀಚೆಗೆ ಸಿದ್ದರಾಜು ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಇದರಿಂದ ನೊಂದ ಪದ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Exit mobile version