ಆನೇಕಲ್: ರೈಲಿನಿಂದ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹಳೆ ಚಂದಾಪುರ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ರೈಲಿನಿಂದ ಬಿದ್ದ ಪರಿಣಾಮ ಕೈಕಾಲು ಮುರಿದು ಸ್ಥಳದಲ್ಲಿಯೇ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ.
ಬೆಂಗಳೂರಿನ ಲಗ್ಗೆರೆ ಮೂಲದ ವ್ಯಕ್ತಿ ಮೃತಪಟ್ಟಿದ್ದು, ಕುಡಿದ ಮತ್ತಿನಲ್ಲಿ ಆಯತಪ್ಪಿ ರೈಲಿನಿಂದ ಕೆಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ರೈಲಿನಿಂದ ಬಿದ್ದಾಗ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೈಯ್ಯಪ್ಪನಹಳ್ಳಿ ಪೊಲೀಸರು ಹಾಗೂ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Enforcement Directorat: ಆನ್‌ಲೈನ್ ಮೂಲಕ 5,000 ಕೋಟಿ ರೂ. ವಂಚನೆ; ಪ್ರಮುಖ ಆರೋಪಿಯ ಬಂಧನ
ಗಂಟಲಿನಲ್ಲಿ ನಾಣ್ಯ ಸಿಲುಕಿ 2 ವರ್ಷದ ಮಗು ಸಾವು
ಧಾರವಾಡ: ಗಂಟಲಿನಲ್ಲಿ ಒಂದು ರೂಪಾಯಿ ನಾಣ್ಯ ಸಿಲುಕಿ 2 ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದ ಕೋಳಿಕೇರಿ ಬಡಾವಣೆಯಲ್ಲಿ ನಡೆದಿದೆ. ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ಬಾಯಿಗೆ ಹಾಕಿಕೊಂಡಿದ್ದ ಮಗು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದೆ.
ನಗರದ ಕೋಳಿಕೇರಿ ಬಡಾವಣೆಯ ಮಹ್ಮದ ಜುಬೇರ್ ಸಾಲಿ (2) ಮೃತ ಮಗು. ಆಟವಾಡುತ್ತಿದ್ದಾಗ ಬಾಯಿಯಲ್ಲಿ ಒಂದು ರೂಪಾಯಿ ನಾಣ್ಯ ಹಾಕಿಕೊಂಡಿದೆ. ಅದು ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಮಗು ಒದ್ದಾಡುತ್ತಿದ್ದದ್ದನ್ನು ಕಂಡು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.