Site icon Vistara News

Man Dragged By Car | ಕಾರಿನ ಬಾನೆಟ್‌ ಮೇಲೆ ಯುವಕನನ್ನು 1 ಕಿ.ಮೀ.ವರೆಗೆ ಎಳೆದೊಯ್ದ ಮಹಿಳೆ

Man Dragged By Car

ಬೆಂಗಳೂರು: ದ್ವಿಚಕ್ರ ವಾಹನದ ಮೂಲಕ ವೃದ್ಧರೊಬ್ಬರನ್ನು ಒಂದೂವರೆ ಕಿ.ಮೀ. ಎಳೆದೊಯ್ದ ಪ್ರಕರಣ ನಡೆದ ಬೆನ್ನಲ್ಲೇ ರಾಜಧಾನಿಯಲ್ಲಿ ಅಂತಹುದೇ ಮತ್ತೊಂದು ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಕಾರಿನ ಬಾನೆಟ್‌ ಮೇಲೆ ಯುವಕನೊಬ್ಬನನ್ನು ಸುಮಾರು ಒಂದು ಕಿ.ಮೀ.ವರೆಗೆ ಎಳೆದೊಯ್ದಿದ್ದಾರೆ (Man Dragged By Car). ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದೆ ಎಂದು ಆರೋಪಿಸಿದ ಯುವಕ ಅದನ್ನು ತಡೆಯಲೆಂದು ಬಾನೆಟ್‌ ಹತ್ತಿದ್ದಾನೆ. ಆದರೆ, ಮಹಿಳೆ ಆತನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಾರನ್ನೇ ಓಡಿಸಿಕೊಂಡು ಹೋಗಿದ್ದಾರೆ. ನಗರದ ಉಳ್ಳಾಳದ ಬಳಿ ಶುಕ್ರವಾರ ನಡೆದಿದೆ. ಘಟನೆ ನಡೆದ ಬಳಿಕ ಈ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ದೂರು ಮತ್ತು ಪ್ರತಿದೂರು ದಾಖಲಾದ ಹಿನ್ನೆಲೆಯಲ್ಲಿ ಒಟ್ಟು ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ
ಪ್ರಿಯಾಂಕ ಎಂಬುವವರು ಕಾರಿನಲ್ಲಿ ಉಳ್ಳಾಲದ ಬಳಿ ತೆರಳುತ್ತಿದ್ದಾಗ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಎಸ್ಕೇಪ್‌ ಆಗಲು ಯತ್ನಿಸಿದ್ದಾರೆ. ಈ ವೇಳೆ ಪ್ರಶ್ನಿಸಲು ಯುವಕ ದರ್ಶನ್‌ ಎಂಬಾತ ಮುಂದಾದಾಗ ಮಹಿಳೆ ಕಾರು ಚಲಾಯಿಸಿದ್ದಾರೆ. ಇದರಿಂದ ಯುವಕ ಕಾರಿನ ಬಾನೆಟ್‌ ಮೇಲೆ ಹತ್ತಿ ಆಕ್ರೋಶ ಹೊರಹಾಕಿದ್ದಾನೆ. ಆತನ ಸಮೇತ ಕಾರನ್ನು ೧ ಕಿ.ಮೀ. ದೂರದವರೆಗೆ ಮಹಿಳೆ ಚಲಾಯಿಸಿದ್ದಾರೆ.

ಬಳಿಕ ಸ್ಥಳೀಯರು ಕಾರನ್ನು ಚೇಸ್‌ ಮಾಡಿ ಮಹಿಳೆಯನ್ನು ತಡೆದು ನಿಲ್ಲಿಸಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್‌ ಯುವಕನಿಗೆ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಜ್ಞಾನ ಭಾರತಿ ಠಾಣೆ ಪೊಲೀಸರು ಆಗಮಿಸಿ, ಕಾರನ್ನು ವಶಕ್ಕೆ ಪಡೆದರು. ಕಾರಿಗೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಎರಡೂ ಕಾರುಗಳ ಮಾಲೀಕರಿಂದ ದೂರು ಹಾಗೂ ಪ್ರತಿದೂರು ನೀಡಲಾಗಿದೆ.‌

ಪ್ರಮೋದ್‌ ಮತ್ತು ದರ್ಶನ್

ದೂರು, ಪ್ರತಿದೂರು ದಾಖಲು
ಕಾರಿನ ಬಾನೆಟ್‌ ಮೇಲೆ ಯುವಕನೊಬ್ಬನನ್ನು ಎಳೆದೊಯ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ದರ್ಶನ್ ಎಂಬಾತ ನೀಡಿದ ದೂರಿನ ಮೇಲೆ ಕಾರು ಚಲಾಯಿಸಿದ ಮಹಿಳೆ ಪ್ರಿಯಾಂಕ, ಗಂಡ ಪ್ರಮೋದ್‌, ನಿರೀಶ್‌ ಎಂಬುವವರ ವಿರುದ್ಧ ಜ್ಞಾನ ಭಾರತಿ ಠಾಣೆಯಲ್ಲಿ ದಾಖಲಾಗಿದೆ. ಹಾಗೆಯೇ ಮಹಿಳೆ ಪತಿ ಪ್ರಮೋದ್‌ ನೀಡಿದ ದೂರಿನ ಅನ್ವಯ ದರ್ಶನ್‌, ಸುಜನ್‌, ಯಶ್ವಂತ್‌ ಹಾಗೂ‌ ವಿನಯ್ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದರ್ಶನ್‌ ಮತ್ತು ತಂಡ

ದರ್ಶನ್‌ ನೀಡಿದ ದೂರಿನಲ್ಲಿ ಏನಿದೆ?
ರಸ್ತೆಯಲ್ಲಿ ಕಾರಿಗೆ ಗುದ್ದಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಮಹಿಳೆ ಬೈದಿದ್ದಾರೆ ಎಂದು ಪಾಪರೆಡ್ಡಿಪಾಳ್ಯ ದರ್ಶನ್‌ ದೂರಿನಲ್ಲಿ ತಿಳಿಸಿದ್ದಾರೆ. ಉಲ್ಲಾಳ ಮುಖ್ಯ ರಸ್ತೆಯ ಸಿಗ್ನಲ್ ಬಳಿ ರೆಡ್‌ ಸಿಗ್ನಲ್‌ ಇದ್ದರೂ ಮಹಿಳೆ ಕಾರನ್ನು ಚಾಲನೆ ಮಾಡಿಕೊಂಡು ಬಂದಿದ್ದರು. ಈ ವೇಳೆ ಕಾರು ನಿಲ್ಲಿಸಿ ಪ್ರಶ್ನಿಸಿದಾಗ, ಮಹಿಳೆ ಮಧ್ಯದ ಬೆರಳು ತೋರಿಸಿ ಫಕ್‌ ಯು ಎಂದು ಅವಾಚ್ಯವಾಗಿ ನಿಂದಿಸಿದರು. ನಂತರ ಅಲ್ಲಿಗೆ ಬಂದ ವ್ಯಕ್ತಿ ಏಕಾಏಕಿ ಕೆಟ್ಟ ಪದಗಳಿಂದ ಬೈದು, ಮುಷ್ಟಿಯಿಂದ ನನ್ನ ಮುಖಕ್ಕೆ ಗುದ್ದಿ, ಶರ್ಟ್ ಅನ್ನು ಹರಿದು ಜೀವ ಬೆದರಿಕೆ ಹಾಕಿದ್ದಾನೆ.

ನಂತರ ನಾನು ಪೊಲೀಸ್‌ ಠಾಣೆಗೆ ಬನ್ನಿ ಎಂದು ಹೇಳಿದಾಗ ಮಹಿಳೆ ಕಾರು ಚಲಾಯಿಸಲು ಮುಂದಾದರು. ಆಗ ನಾನು ಕಾರಿಗೆ ಅಡ್ಡ ಹೋದಾಗ ಕಾರನ್ನು ನಿಲ್ಲಿಸದೇ ನನ್ನ ಸಮೇತ 3-4 ಕಿ.ಮೀ, ದೂರ ಚಲಾಯಿಸಿದರು. ನಂತರ ಸಾರ್ವಜನಿಕರು, ತಡೆದು ನಿಲ್ಲಿಸಿದರು. ಹೀಗಾಗಿ ಪ್ರಿಯಾಂಕ, ಗಂಡ ಪ್ರಮೋದ್ ಮತ್ತು ನಿತೀಶ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.

ಕಾರು ಚಲಾಯಿಸುತ್ತಿದ್ದ ಪ್ರಿಯಾಂಕ ಮತ್ತು ಪತಿ ಪ್ರಮೋದ್‌

ಮಹಿಳೆ ಪತಿ ಪ್ರಮೋದ್‌ ನೀಡಿದ ದೂರಿನ ಸಾರಾಂಶ
ನಾನು ಮತ್ತು ನನ್ನ ಪತ್ನಿ ಕಾರಿನಲ್ಲಿ ಆಸ್ಪತ್ರಗೆ ತೆರಳುವಾಗ ದರ್ಶನ್‌ ಮತ್ತು ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಪ್ರಮೋದ್‌ ಠಾಣೆಗೆ ದೂರು ನೀಡಿದ್ದಾರೆ. ಅಂಬೇಡ್ಕರ್ ಕಾಲೇಜ್ ಬಳಿ ಉಲ್ಲಾಳ ಮುಖ್ಯ ರಸ್ತೆಯ ಹತ್ತಿರ ಬಲಕ್ಕೆ ತಿರುವು ತೆಗೆದುಕೊಳ್ಳುತ್ತಿರುವಾಗ ಟ್ರಾಫಿಕ್ ಜಾಮ್ ಆಗಿತ್ತು. ನಂತರ ಬಲಕ್ಕೆ ತಿರುವು ಪಡೆದುಕೊಳ್ಳುವಾಗ ವ್ಯಕ್ತಿ ನಮಗೆ ಅವಾಚ್ಯ ಶಬ್ದಗಳಿಂದ ಬೈದ. ಬಳಿಕ ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಅಡ್ಡ ಹಾಕಿ ಗಲಾಟೆ ಮಾಡಿದ ಎಂದು ತಿಳಿಸಿದ್ದಾರೆ.

ಆ ವ್ಯಕ್ತಿಯು ಬಂದು ಕಾರಿನ ಗ್ಲಾಸ್‌ ಅನ್ನು ಬಡೆದು, ಸುಮಾರು 4-5 ಜನರನ್ನು ಕರೆಸಿ ಜಗಳ ಮಾಡಿದ. ನಂತರ ನಾನು ನನ್ನ ಸ್ನೇಹಿತ ನಿತೀಶ್‌ಗೆ ಕರೆಮಾಡಿ ತಕ್ಷಣ ಸ್ಥಳಕ್ಕೆ ಬರುವಂತೆ ತಿಳಿಸಿದೆ. ಬಳಿಕ ಎರಡು ಗುಂಪುಗಳ ನಡುವೆ ಮಾತಿಕ ಚಕಮಕಿ ಆದಾಗ, ನನ್ನ ಹೆಂಡತಿ ತಡೆಯಲು ಬಂದರು. ಆದರೆ, ಆ ವ್ಯಕ್ತಿಯು ನನ್ನ ಹೆಂಡತಿಯ ಬಟ್ಟೆಯನ್ನು ಹಿಡಿದು ಎಳೆದಾಡಿ, ನಿನ್ನನ್ನು ಮತ್ತು ನಿನ್ನ ಹೆಂಡತಿಯನ್ನು ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ. ಬಳಿಕ ನನಗೆ ಮೂಗಿನ ಮೇಲೆ ಕಲ್ಲಿನಿಂದ ಹೊಡೆದಿದ್ದರಿಂದ ನನಗೆ ಗಾಯವಾಗಿ ರಕ್ತ ಬಂತು. ನಂತರ ಮತ್ತೊಬ್ಬ ವ್ಯಕ್ತಿ ಹಲ್ಲೆ ಮಾಡಿ, ಕಾರಿನ ಗ್ಲಾಸ್‌ಗಳನ್ನು ಜಖಂಗೊಳಿಸಿದ್ದಾರೆ ಂದು ಹೇಳಿದ್ದಾರೆ.

ದರ್ಶನ್‌ ನಮ್ಮ ಕಾರಿನ ಬಾನೆಟ್ ಮೇಲೆ ಏರಿ, ಹಲ್ಲೆ ಮಾಡಲು ಮುಂದಾದ. ಹೀಗಾಗಿ ನಾವು ಕಾರು ಚಾಲನೆ ಮಾಡಿದೆವು. ನಮಗೆ ಬೆದರಿಕೆ ಹಾಕಿದ್ದರಿಂದ ಕಾರನ್ನು ಚಲಾಯಿಸಿದ್ದೇವೆ. ಹೀಗಾಗಿ ದರ್ಶನ್‌, ಸುಜನ್‌, ಯಶ್ವಂತ್‌ ಹಾಗೂ‌ ವಿನಯ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡೊದ್ದಾರೆ.

ಇದನ್ನೂ ಓದಿ |Road accident | ಘಟಪ್ರಭಾ ಸೇತುವೆ ಮೇಲೆ ಬಸ್‌- ಬೈಕ್‌ ಮುಖಾಮುಖಿ ಡಿಕ್ಕಿ: ಇಬ್ಬರೂ ಸವಾರರು ಸಾವು

Exit mobile version