Site icon Vistara News

Suicide Case | ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಪ್ರಕರಣ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧವೂ ಎಫ್‌ಐಆರ್‌

suicide case- pradeep- aravinda limbavali

ಬೆಂಗಳೂರು: ಹಿಂದೊಮ್ಮೆ ತನ್ನ ಪತ್ನಿಯನ್ನೇ ಸಂಶಯಿಸಿ ಗುಂಡು ಹಾರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಬಳಿಕ ಈಗ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬೆಂಗಳೂರಿನ ಬೆಳ್ಳಂದೂರು ಬಳಿಯ ಅಂಬಲಿಪುರ ನಿವಾಸಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣದಲ್ಲಿ (Suicide Case) ಈಗ ಶಾಸಕ ಅರವಿಂದ ಲಿಂಬಾವಳಿ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.

ಪ್ರದೀಪ್‌ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೆಸರೂ ಇರುವುದರಿಂದ ಅವರನ್ನು ಮೂರನೇ ಆರೋಪಿಯಾಗಿ ಗುರುತಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಬೆಂಗಳೂರಿನ ಬೆಳ್ಳಂದೂರು ಬಳಿಯ ಅಂಬಲಿಪುರ ನಿವಾಸಿ ಡಿಸೆಂಬರ್‌ ೩೧ರಂದು ರಾತ್ರಿ ಇಡೀ ಕುಟುಂಬದ ಜೊತೆಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ನೆಟ್ಟಿಗೆರೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಹೊಸ ವರ್ಷಾಚರಣೆ ನಡೆಸಿದ್ದರು. ಜನವರಿ ೧ರಂದು ಬೆಳಗ್ಗೆ ಐದು ಗಂಟೆ ವೇಳೆ ಪತ್ನಿ ಮುಂದಿನ ಕಾರಿನಲ್ಲಿ ಹೋಗುತ್ತಿದ್ದರೆ ಹಿಂದಿನ ಕಾರಿನಲ್ಲಿ ಪ್ರದೀಪ್‌ ಸಾಗುತ್ತಿದ್ದರು. ಈ ನಡುವೆ, ಪ್ರದೀಪ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡಿದ್ದರು. ಸಾವಿಗೂ ಮುನ್ನ ಆತ ಬರೆದಿದ್ದ ಡೆತ್​ ನೋಟ್‌ನಲ್ಲಿ ಶಾಸಕ ಅರವಿಂದ ಲಿಂಬಾವಳಿ, ಗೋಪಿ.ಕೆ, ಸೋಮಯ್ಯ, ಜಿ.ರಮೇಶ್ ರೆಡ್ಡಿ, ಜಯರಾಮ್ ರೆಡ್ಡಿ, ರಾಘವ್ ಭಟ್ ಹೆಸರು ಉಲ್ಲೇಖಿಸಿದ್ದರು.

ಲಿಂಬಾವಳಿ ವಿರುದ್ಧವೂ ಎಫ್‌ಐಆರ್‌
ಇದೀಗ ಕಗ್ಗಲಿಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ 306ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಅಂದರೆ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ದೂರು ದಾಖಲಾಗಿದ್ದು, A1 ಆಗಿ ಗೋಪಿ ಕೆ., A2 ಆಗಿ ಸೋಮಯ್ಯ, A3 ಆಗಿ ಅರವಿಂದ ಲಿಂಬಾವಳಿ, A4 ಆಗಿ ರಮೇಶ್ ರೆಡ್ಡಿ, A5 ಆಗಿ ಜಯರಾಮ್ ರೆಡ್ಡಿ, A6 ಆಗಿ ರಾಘವ ಭಟ್‌ ಹೆಸರು ನಮೂದಾಗಿದೆ.

ಎಫ್ ಐ ಆರ್ ಆಧರಿಸಿ ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಸಾಧ್ಯತೆ ಇದ್ದು, ಶಾಸಕರೂ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಪ್ರದೀಪ್ಪ ತ್ನಿ ನಮಿತಾ ನೀಡಿದ ದೂರಿನನ್ವಯ ಎಫ್ ಐ ಆರ್ ದಾಖಲಾಗಿದೆ.

ಇದು ಹಣಕಾಸಿನ ವಿಷಯ
ಪ್ರದೀಪ್‌ ಬರೆದಿಟ್ಟಿರುವ ಡೆತ್‌ ನೋಟ್‌ ಗಮನಿಸಿದರೆ ಇದು ಹಣಕಾಸಿನ ವಿಷಯದಲ್ಲಿ ನಡೆದಿರುವ ವಂಚನೆ ಎನ್ನುವುದು ಸ್ಪಷ್ಟವಾಗುತ್ತದೆ. ಇದರಲ್ಲಿ ಶಾಸಕ ಲಿಂಬಾವಳಿ ಮಧ್ಯವರ್ತಿಯ ಪಾತ್ರ ವಹಿಸಿದ್ದಾರೆ. ವಂಚಕರು ಶಾಸಕರ ಮುಂದೆ ಹಣ ಕೊಡುವುದಾಗಿ ಒಪ್ಪಿದ್ದರೂ ಪ್ರದೀಪ್‌ಗೆ ಮರಳಿಸಿಲ್ಲ. ಹೀಗಾಗಿ ಎಲ್ಲರೂ ಸೇರಿ ತನಗೆ ಮೋಸ ಮಾಡಿದ್ದಾರೆ ಎಂಬ ನೋವಿನಿಂದ ಪ್ರದೀಪ್‌ ಪ್ರಾಣ ಕಳೆದುಕೊಂಡಿದ್ದಾರೆ.

ಪತ್ರದಲ್ಲೇನಿದೆ..?
ʼʼHSR ಲೇಔಟ್ ಸಮೀಪದ ಹರಳೂರಿನಲ್ಲಿ ಕ್ಲಬ್ ತೆರೆಯುವ ಉದ್ದೇಶಕ್ಕೆ ಕೆ. ಗೋಪಿ ಮತ್ತು ಸೋಮಯ್ಯ ಬಳಿ 2018ರಲ್ಲಿ ಚರ್ಚೆ ಮಾಡಿದ್ದೆ. ರೆಸಾರ್ಟ್ ನಡೆಸಲು ಇವರಿಬ್ಬರು ಒಪ್ಪಿಕೊಂಡು ಪ್ರತಿ ತಿಂಗಳು 3 ಲಕ್ಷ ರೂ. ಲಾಭಾಂಶ ಮತ್ತು ಅಲ್ಲಿಯೇ ಕೆಲಸ ಮಾಡಿದರೆ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಸಂಬಳ ಕೊಡುವುದಾಗಿ ಹೇಳಿದ್ದರು. ಅದಕ್ಕೆ ಒಪ್ಪಿಕೊಂಡು 2018ರ ಮೇ ತಿಂಗಳಿಂದ ಡಿಸೆಂಬರ್‌ವರೆಗೆ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಬ್ಯಾಂಕ್‌ಗೆ ಜಮೆ ಮಾಡಿದ್ದೇನೆ. ಮೈಸೂರಿನಲ್ಲಿ ಇರುವ ಮನೆ ಮಾರಾಟ ಮಾಡಿ 40 ಲಕ್ಷ ರೂಪಾಯಿ ನಗದು ರೂಪದಲ್ಲಿ ಈ ಇಬ್ಬರಿಗೆ ನೀಡಿದ್ದೆ. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಲಾಭ ಕೊಡಲಿಲ್ಲ. ಈ ಬಗ್ಗೆ ಮಾತನಾಡಲು ಶಾಸಕರ ಬಳಿಗೆ ಹೋದಾಗ ರಾಜಿ ಸಂಧಾನ ನೆಪದಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿಯಂತೆ 9 ತಿಂಗಳು ನನ್ನ ಬಳಿ ಹಣ ಪಡೆದರು. ಆನಂತರ 90 ಲಕ್ಷ ರೂ. ವಾಪಸ್ ಕೊಡುತ್ತಾರೆ ಎಂದು ಹೇಳಿದರು. ಆದರೆ, ಆ ವೇಳೆಗೆ ನಾನು ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಶಾಸಕ ಲಿಂಬಾವಳಿ ಸಹ ನನಗೆ ಸಹಾಯ ಮಾಡಿಲ್ಲ. ರಮೇಶ್ ರೆಡ್ಡಿ ಬಳಿ 10 ಲಕ್ಷ ರೂ. ಸಾಲ ಪಡೆದಿದ್ದೆ. ಅದರ ಪ್ರತಿಯಾಗಿ ಕೃಷಿ ಜಮೀನು ಮಾರಾಟ ಮಾಡಿ 35 ಲಕ್ಷ ರೂ. ಪಾವತಿ ಮಾಡಿದ್ದೇನೆ. ಆದರೂ ಮತ್ತಷ್ಟು ಹಣ ಸುಲಿಗೆಗೆ ಬೆದರಿಕೆ ಒಡ್ಡುತ್ತಿದ್ದಾರೆ. ರಾಘವ ಭಟ್ ನನ್ನ ಬಳಿ 20 ಲಕ್ಷ ರೂ. ಸಾಲ ಪಡೆದಿದ್ದು, ಇಲ್ಲಿಯವರೆಗೂ ವಾಪಸ್ ಕೊಡದೆ ಮೋಸ ಮಾಡಿದ್ದಾರೆ. ನನಗೆ 2 ಕೋಟಿ 20 ಲಕ್ಷ ಬರಬೇಕಿತ್ತು, ಶಾಸಕರು ರಾಜಿಸಂಧಾನ ಮಾಡಿಸಿ 90 ಲಕ್ಷ ರೂ. ಕೊಡಿಸುವುದಾಗಿ ಹೇಳಿ 10 ಲಕ್ಷದ 9 ಚೆಕ್ ಕೊಡಿಸಿದ್ದರು. ಪ್ರತಿ ತಿಂಗಳು ಅಕೌಂಟ್‌ಗೆ ಜಮೆ ಮಾಡಿಸಿಕೊಳ್ಳುವಂತೆ ಹೇಳಿದ್ದರು. ಕ್ಲಬ್ ಪ್ರಾರಂಭಿಸಲು ಮಾಡಿಕೊಂಡಿದ್ದ ಸಾಲ, ಅದಕ್ಕೆ ಬಡ್ಡಿ ಹಣ ಕಟ್ಟಲು ಪತ್ನಿ ಸಹ ಸಾಲ ಮಾಡಿಕೊಟ್ಟಿದ್ದಾರೆ. ಈ ಎಲ್ಲ ಹಣವೂ ಪತ್ನಿ ಮತ್ತು ಮಗಳಿಗೆ ಕೊಡಿಸಬೇಕು.ʼʼ

ಇದನ್ನೂ ಓದಿ | Suicide Case | ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು, ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Exit mobile version