Site icon Vistara News

Dead Body Found: ಸ್ನೇಹಿತರ ಜತೆ ಎಣ್ಣೆ ಪಾರ್ಟಿ ಮಾಡಲು ಹೋದವ ಶವವಾಗಿ ಪತ್ತೆ

Sudeep

ಆನೇಕಲ್: ಸ್ನೇಹಿತರ ಜತೆ ಎಣ್ಣೆ ಪಾರ್ಟಿ ಮಾಡಲು ಹೋದವ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹುಲಿಮಂಗಲ ಬಳಿ ನಡೆದಿದೆ. ಭಾನುವಾರ ಸ್ನೇಹಿತರ ಜತೆಗೆ ಎಣ್ಣೆ ಪಾರ್ಟಿ ಹೋಗಿದ್ದ ಯುವಕ, ಗುಂಡಿಯಲ್ಲಿ ಶವವಾಗಿ (Dead Body Found) ಪತ್ತೆಯಾಗಿದ್ದಾನೆ.

ಸಿಂಗೇನಾ ಅಗ್ರಹಾರ ನಿವಾಸಿ ಸುದೀಪ್ (23) ಮೃತ ಯುವಕ. ಸ್ನೇಹಿತರ ಜತೆಗೆ ಎಣ್ಣೆ ಪಾರ್ಟಿಗೆ ಹೋಗಿದ್ದ ಯುವಕ, ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹುಲಿಮಂಗಲ ಕ್ರಾಸ್‌ನ ಬಾರ್‌ ಬಳಿಯ ಗುಂಡಿಯಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾನೆ.

ಮನೆಯಲ್ಲಿ ದಸರಾ ಪೂಜೆಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋಗಿದ್ದ ಸುದೀಪ್‌, ಪೂಜೆ ಮುಗಿಸಿ ಸ್ನೇಹಿತರ ಜತೆಗೆ ಎಣ್ಣೆ ಪಾರ್ಟಿ ಮಾಡಿದ್ದಾನೆ, ನಂತರ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಕಂಡುಬಂದಿದೆ. ಮೃತನ ಕುಟುಂಬಸ್ಥರು, ಯಾರೋ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದು, ಸಮರ್ಪಕ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Girl death : ನೀರು ತುಂಬಲು ಕೆರೆಗೆ ಹೋಗಿದ್ದ ಬಾಲಕಿ ಕಾಲು ಜಾರಿ ಬಿದ್ದು ಸಾವು, ಸಿಡಿದ ಜನರು

ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತ ದೇಹವನ್ನು ಅತ್ತಿಬೆಲೆ ಆಕ್ಸ್‌ಫರ್ಡ್‌ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಬೆಂಗಳೂರಿನ ನಾಗವಾರಪಾಳ್ಯದಲ್ಲಿ ನವಜಾತ ಶಿಶು ಪತ್ತೆ

ಬೆಂಗಳೂರು: ನಗರದ ನಾಗವಾರಪಾಳ್ಯದ ಮೋರಿ ಬಳಿ ನವಜಾತ ಶಿಶು ಪತ್ತೆಯಾಗಿದೆ. ಮೂರು ದಿನದ ಹಿಂದೆ ಜನಸಿದ ಮಗುವನ್ನು ಅಪರಿಚಿತರು ಮೋರಿ ಬಳಿ ಇಟ್ಟು ಹೋಗಿದ್ದು, ಬೈಯಪ್ಪನಹಳ್ಳಿ ಪೊಲೀಸರು ಮಗುವನ್ನು (Newborn Baby) ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ನವಜಾತ ಹೆಣ್ಣು ಮಗು ಪತ್ತೆಯಾಗಿದೆ. ಕೂಡಲೇ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬೈಯಪ್ಪನಹಳ್ಳಿ ಪೊಲೀಸರು ಆಗಮಿಸಿ ಮಗುವಿನ ರಕ್ಷಣೆ ಮಾಡಿ, ಸಿವಿ ರಾಮನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಗುವಿನ ಆರೈಕೆಗಾಗಿ ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳ ನಿಯೋಜನೆ ಮಾಡಲಾಗಿದ್ದು, ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಗು ಬಗ್ಗೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಕೌಶಿಕ್‌ ಎಂಬಾತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಗುವನ್ನ ಸುರಕ್ಷಿತವಲ್ಲದ ಅಪಾಯಕಾರಿ ಸ್ಥಳದಲ್ಲಿ ಪಾಲಕರು ಬಿಟ್ಟು ಹೋಗಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ | Tiger Pawl : ಹುಲಿ ಉಗುರು ಬಳಸುವ ಚಿತ್ರ ನಟರ ಅರೆಸ್ಟ್‌ ಆಗುತ್ತಾ? ; ಸಚಿವ ಈಶ್ವರ ಖಂಡ್ರೆ ಹೇಳಿದ್ದೇನು?

ಸ್ನೇಹಿತರ ಮನೆಗೆ ಬಂದಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಸಾವು

ಆನೇಕಲ್: ಸ್ನೇಹಿತರ ಮನೆಗೆ ಹಬ್ಬಕ್ಕೆ ಬಂದಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಆನೇಕಲ್ ಸಮೀಪದ ಅರವಂಟಿಗೆಪುರ ರೈಲ್ವೆ ಗೇಟ್ ಬಳಿ ನಡೆದಿದೆ. ಚಿತ್ರದುರ್ಗ ಮೂಲದ ರಾಮು (40) ಮೃತರು. ರೈಲು ಹಳಿ ದಾಟುವಾಗ ರೈಲಿಗೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾರೆ.

ಬೊಮ್ಮಸಂದ್ರ ಎಂಟಿಆರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಮು, ಮಂಗಳವಾರ ಸ್ನೇಹಿತರ ಜತೆಗೆ ಹಬ್ಬಕ್ಕೆ ಬಂದಿದ್ದರು. ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್ ದಾಟಲು ಹೋಗಿ ರೈಲಿಗೆ ಸಿಲುಕಿದ್ದಾರೆ. ರೈಲು ಡಿಕ್ಕಿ ಹೊಡೆದು ದೇಹ ಛಿದ್ರವಾಗಿದೆ. ಮೃತ ದೇಹವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದ್ದು, ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version