Site icon Vistara News

Kadaba News: ಚಿನ್ನದ ಅಂಗಡಿ ಉದ್ಘಾಟನೆ ದಿನವೇ ಶವವಾಗಿ ಪತ್ತೆಯಾದ ಯುವಕ

gold shop owner Nagaprasad

#image_title

ಕಡಬ: ನೂತನ ಚಿನ್ನದ ಅಂಗಡಿ ಉದ್ಘಾಟನೆಯ ದಿನವೇ ಅನುಮಾನಾಸ್ಪದ ರೀತಿಯಲ್ಲಿ ಮಾಲೀಕ ಮೃತಪಟ್ಟಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಬಳಿ (Kadaba News) ಗುರುವಾರ ನಡೆದಿದೆ. ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಅಪಘಾತದಲ್ಲಿ ಯುವಕ ಮೃತಪಟ್ಟಿರುವಂತೆ ಕಂಡುಬಂದಿದ್ದರೂ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಯುವಕ ನಾಗಪ್ರಸಾದ್, ಮರ್ಧಾಳದ ಮಸೀದಿ ಬಿಲ್ಡಿಂಗ್‌ನಲ್ಲಿ ಜೂ.22 ರಂದು ‘ಐಶ್ವರ್ಯ ಗೋಲ್ಡ್’ ಹೆಸರಿನ ಚಿನ್ನದಂಗಡಿ ಶುಭಾರಂಭದ ತಯಾರಿ ನಡೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜೂ.21 ರಂದು ಆಹ್ವಾನ ಪತ್ರ ಕೊಡಲು ಬೆಳ್ತಂಗಡಿ ಕಡೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೊಗಿದ್ದ. ಹಾಗೆ ಹೋದಾತ ಸಂಜೆಯಾದರೂ ಮನೆಗೆ ಬಾರದ ಕಾರಣ ಮನೆಯವರು ಹಾಗೂ ಗೆಳೆಯರು ಆತನ ಮೊಬೈಲ್‌ಗೆ ಕರೆ ಮಾಡುತ್ತಿದ್ದರು. ಆದರೆ ಆತ ಕರೆ ಸ್ವೀಕರಿಸಿರಲಿಲ್ಲ.‌

ಇದನ್ನೂ ಓದಿ | Murder Case: ಉದ್ಯಮಿ ಅಟ್ಟಾಡಿಸಿ ನಡುರಸ್ತೆಯಲ್ಲಿ ಕೊಂದರು; ಕುಡಿದು ಸ್ನೇಹಿತನನ್ನೇ ಮುಗಿಸಿಬಿಟ್ಟರು!

ಆತನ ಮೊಬೈಲ್ ರಾತ್ರಿ 10 ಗಂಟೆಯ ತನಕ ರಿಂಗ್ ಆಗಿದ್ದು, ಬಳಿಕ ಸ್ವಿಚ್ ಆಫ್ ಎಂದು ಕೇಳಿಬಂದಿದೆ. ಈ ಬಗ್ಗೆ ಅನುಮಾನಗೊಂಡು ಆತನ ಮನೆಯವರು ಜೂ.21ರ ರಾತ್ರಿ ಕಡಬ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ. ಈ ದೂರಿನ ಮೇಲೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದಾದ ಬಳಿಕ ಜೂ.22ರ ಮುಂಜಾನೆ ಬೈಕೊಂದು ಗುಂಡ್ಯ ಬಳಿ ಹೆದ್ದಾರಿಯಲ್ಲಿ ಅಪಘಾತವಾದ ರೀತಿಯಲ್ಲಿ ಪತ್ತೆಯಾಗಿತ್ತು. ಅದನ್ನು ನೋಡಿದ ಸ್ಥಳೀಯರು ಅನುಮಾನಗೊಂಡು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಕಂದಕದಲ್ಲಿ ಬಿದ್ದಿರುವುದನ್ನು ಕಂಡು ದೇಹವನ್ನು ಮೇಲಕ್ಕೆತ್ತಿದ್ದಾರೆ. ಆದರೆ, ಆತ ಮೃತಪಟ್ಟಿದ್ದು, ಈ ವೇಳೆ ವಿಚಾರಿಸಿದಾಗ ಆ ಮೃತ ದೇಹ ನಾಪತ್ತೆಯಾಗಿದ್ದ ನಾಗಪ್ರಸಾದ್‌ನದ್ದು ಎಂದು ತಿಳಿದುಬಂದಿದೆ.

ಬಳಿಕ ಕಡಬ ಠಾಣೆ ಪೊಲೀಸರು ಮತ್ತು ಸಕಲೇಶಪುರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ | Murder case: ಎಂಜಿನಿಯರ್‌ ಪತ್ನಿಯ ಕೊಲೆ; ಮಗ ಕೃತ್ಯದಿಂದ ನೊಂದು ತಾಯಿ ಆತ್ಮಹತ್ಯೆಗೆ ಯತ್ನ

ಸಾವಿನ ಸುತ್ತ ಅನುಮಾನದ ಹುತ್ತ

ಬೆಳ್ತಂಗಡಿ ಕಡೆ ಹೋಗಿರುವ ನಾಗಪ್ರಸಾದ್, ಗುಂಡ್ಯ ಕಡೆ ಬರಲು ಕಾರಣವೇನು? ಕರೆ ಯಾಕೆ ಸ್ವೀಕರಿಸಲಿಲ್ಲ? ಆತನ ಜತೆ ಕಾರು ಇದ್ದರೂ ಬೈಕ್‌ನಲ್ಲಿ ಯಾಕೆ ಹೋದ? ಅದಲ್ಲದೆ ಚಿನ್ನದಂಗಡಿ ಶುಭಾರಂಭದ ಹಿಂದಿನ ದಿನವೇ ಘಟನೆಯಾಗಲು ಕಾರಣವೇನು? ಎನ್ನುವುದು ಮನೆಯವರಲ್ಲಿ, ಸಂಬಂಧಿಕರಲ್ಲಿ ಹಾಗೇ ಗೆಳೆಯರಲ್ಲಿ ಅನುಮಾನ ಮೂಡಿಸಿದೆ.

ಅಪಘಾತದ ಶಂಕೆ

ಗುಂಡ್ಯದಿಂದ ಸಕಲೇಶಪುರಕ್ಕೆ ಹೋಗುವ ರಸ್ತೆಯಲ್ಲಿ ನಾಗಪ್ರಸಾದ್‌ ಬೈಕ್ ಮತ್ತು ಮೃತದೇಹ ಪತ್ತೆಯಾಗಿದೆ. ಬೈಕ್ ರಸ್ತೆ ಬದಿಯಲ್ಲಿರುವ ಕಿರು ಸೇತುವೆಗೆ ಡಿಕ್ಕಿ ಹೊಡೆದು ಬಳಿಕ ಆತ ಕಂದಕಕ್ಕೆ ಉರುಳಿರಬಹುದು ಎನ್ನಲಾಗಿದೆ. ಆತನ ದೇಹದಲ್ಲಿ ಅಪಘಾತ ಸಂಭವಿಸಿದ ರೀತಿ ಗಾಯಗಳು ಕಂಡುಬಂದಿದೆ. ಬೈಕ್ ಕಾಲು ಸೇತುವೆಗೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ರೀತಿಯಲ್ಲಿದೆ. ಈ ಕಾರಣ ಪ್ರಾಥಮಿಕ ತನಿಖೆಯಲ್ಲಿ ಇದು ಅಪಘಾತ ಎಂದು ಕಂಡುಬಂದಿದ್ದು ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version