Site icon Vistara News

Kannada in Bangkok | ಬ್ಯಾಂಕಾಕ್‌ನ ಎಲೆಕ್ಟ್ರಾನಿಕ್‌ ಮಳಿಗೆಯಲ್ಲಿ ಕನ್ನಡದ ಕಂಪು: ಮಾತಾಡ್ತಿರೋರು ಕನ್ನಡಿಗರೇ ಅಲ್ಲ!

Bangkok kannada

ಬೆಂಗಳೂರು: ಬೆಂಗಳೂರಿನಲ್ಲಿ ಕೆಲವು ಮಳಿಗೆಗಳಿಗೆ ಹೋದರೆ ಕನ್ನಡದಲ್ಲಿ ಮಾತನಾಡೋದೇ ಅಪರಾಧ ಅನ್ನುವ ಹಾಗೆ ವರ್ತಿಸ್ತಾರೆ. ನಮ್ಮ ಕನ್ನಡದ ಹುಡುಗ-ಹುಡುಗಿಯರೇ ಸ್ಟೈಲಾಗಿ ಇಂಗ್ಲಿಷಲ್ಲಿ ಮಾತನಾಡಿದರಷ್ಟೇ ಮರ್ಯಾದೆ ಅಂದುಕೊಳ್ಳುತ್ತಾರೆ. ಜತೆಗೆ ಇಂಗ್ಲಿಷ್‌ ಹಾಡುಗಳ ಅಬ್ಬರವೂ ಇರ್ತದೆ. ಆದರೆ, ಬ್ಯಾಂಕಾಕ್‌ನಲ್ಲಿ ಈ ಒಂದು ಅಂಗಡಿಗೆ ಹೋದರೆ ನಮಗೆ ಮುದ್ದಾದ ಕನ್ನಡ ಕೇಳಿಸುತ್ತದೆ, ಕನ್ನಡದ ಅಕ್ಷರಗಳು ಕಾಣಸಿಗುತ್ತವೆ! (Kannada in Bangkok) ಹೀಗೆ ಹೇಳಿದರೆ ಆಶ್ಚರ್ಯ ಆಗುತ್ತೆ ಅಲ್ವಾ?

ಇನ್ನು ಕೆಲವರು ಓ ಇರಬಹುದು, ಯಾರೋ ಕನ್ನಡಿಗರ ಅಂಗಡಿ ಇರಬಹುದು. ಯಾರೋ ಕನ್ನಡಿಗರು ಆ ಅಂಗಡಿಗೆ ಹೋಗಿರ್ತಾರೆ. ಅಲ್ಲಿ ಕನ್ನಡ ಮಾತಾಡೋ ಯಾರೋ ಸಿಕ್ಕಿರ್ತಾರೆ. ಅವರಿಬ್ಬರು ಕನ್ನಡದಲ್ಲಿ ಮಾತಾಡಿರ್ತಾರೆ ಅಂತ ಅಂದುಕೊಳ್ಳಲೂಬಹುದು. ಆದರೆ, ಇದು ಈ ಎಲ್ಲ ಲೆಕ್ಕಾಚಾರಗಳನ್ನು ಮೀರಿದ್ದು. ಅಲ್ಲಿರುವ ಅಂಗಡಿಯೂ ಕನ್ನಡಿಗರದ್ದಲ್ಲ, ಸೊಗಸಾಗಿ ಕನ್ನಡ ಮಾತಾಡೋನೂ ಕನ್ನಡಿಗನಲ್ಲ! ಆದರೆ ಹೋದವರು ಮಾತ್ರ ಕನ್ನಡಿಗರು ಅನ್ನೋದು ನಿಜ.

ಬ್ಯಾಂಕಾಕ್‌ನ ಇಂದ್ರ ಮಾರುಕಟ್ಟೆ. ಅಂಕಣಕಾರರಾದ ನಾರಾಯಣ ಯಾಜಿಯವರೂ ನಿಂತಿದ್ದಾರೆ.

ಅಂದ ಹಾಗೆ ಬ್ಯಾಂಕಾಕ್‌ನಲ್ಲಿ ಕನ್ನಡದ ಕಂಪನ್ನು ಹುಡುಕಿದವರು ವಿಸ್ತಾರ ನ್ಯೂಸ್‌ನ ʻಧವಳ ಧಾರಿಣಿʼ ಅಂಕಣಕಾರರಾದ ನಾರಾಯಣ ಯಾಜಿಯವರು. ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನ ಎಜಿಎಂ ಆಗಿ ನಿವೃತ್ತರಾಗಿರುವ ಅವರು, ಸೇವಾವಧಿಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಸಾಧಕ ಉದ್ಯೋಗಿಗಳಿಗಾಗಿ ಬ್ಯಾಂಕ್‌ ಆಯೋಜಿಸಿದ ವಿದೇಶ ಪ್ರವಾಸದ ಅಡಿಯಲ್ಲಿ ಥೈಲ್ಯಾಂಡ್‌ ಮತ್ತು ಬ್ಯಾಂಕಾಕ್‌ ಟೂರಿನಲ್ಲಿದ್ದಾರೆ. ಬ್ಯಾಂಕಾಕ್‌ನಲ್ಲಿ ಒಂದು ಎಲೆಕ್ಟ್ರಾನಿಕ್‌ ಮಳಿಗೆಗೆ ಹೋದಾಗ ಅವರಿಗೆ ಈ ಕನ್ನಡದ ಇಂಪಾದ ಧ್ವನಿ ಕೇಳಿಸಿದೆ.

ಸಂತೋಷ್‌ ಅವರು ಕೆಲಸ ಮಾಡುತ್ತಿರುವ ಎಲೆಕ್ಟ್ರಾನಿಕ್‌ ಮಳಿಗೆ

ಈ ವ್ಯಕ್ತಿಯ ಹೆಸರು ಸಂತೋಷ, ಅಪ್ಪು ಪ್ರೇಮಿ!
ಬ್ಯಾಂಕಾಕ್‌ನಲ್ಲಿ ಇಂದ್ರ ಮಾರುಕಟ್ಟೆ ಅಂತ ಒಂದಿದೆ. ಅಲ್ಲಿ ಸಂತೋಷ ಎಂಬವರು ಎಲೆಕ್ಟ್ರಾನಿಕ್‌ ಅಂಗಡಿ ನಡೆಸುತ್ತಿದ್ದಾರೆ. ಅವರು ತಮ್ಮ ಅಂಗಡಿಗೆ ಬರುವವರು ಕನ್ನಡಿಗರು ಎಂದು ಗೊತ್ತಾದರೆ ಸಾಕು ತಕ್ಷಣವೇ ಕನ್ನಡ ಮಾತನಾಡಲು ಶುರು ಮಾಡುತ್ತಾರೆ. ಅಷ್ಟೇ ಅಲ್ಲ, `ʻʻಕರ್ನಾಟಕದ ಯಾತ್ರಿಕರಿಗೆ ಸುಸ್ವಾಗತ. ನಾನು ಕನ್ನಡದ ಅಭಿಮಾನಿ. ನನಗೂ ಕನ್ನಡ ಬರುತ್ತದೆ ಪರಿಗಣಿಸಿ.. ಜಯ ಕರ್ನಾಟಕ-ಸಂತೋಷ್ʼʼ ಎಂದು ಬೋರ್ಡ್‌ ಬರೆದಿಟ್ಟಿದ್ದಾರೆ ಕನ್ನಡದಲ್ಲೇ! ʻʻನಾನು ಅಪ್ಪು ಪ್ರೇಮಿʼʼ ಅನ್ನೋದು ಟ್ಯಾಗ್‌ಲೈನ್‌!

ಇವರು ಕನ್ನಡಿಗರೇ ಅಲ್ಲ!
ಬ್ಯಾಂಕಾಕ್‌ನ ನೆಲದಲ್ಲಿ ನಿಂತು ಇಷ್ಟೆಲ್ಲ ಪ್ರೀತಿಯಿಂದ ಕನ್ನಡ ಮಾತನಾಡುವ ಈ ಸಂತೋಷ್‌ ಕನ್ನಡಿಗರೇನೂ ಅಲ್ಲ. ಅವರ ಊರು ಬರ್ಮಾ ಅಂದರೆ ನಂಬ್ತೀರಾ? ಇವರು ಕನ್ನಡ ಕಲಿತ ಕಥೆಯೂ ಕುತೂಹಲಕಾರಿಯಾಗಿದೆ. ಅವರು ೨೦೧೪ರಿಂದ ಈ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಇಂದ್ರ ಮಾರುಕಟ್ಟೆಯಲ್ಲಿರುವ ಈ ಎಲೆಕ್ಟ್ರಾನಿಕ್‌ ಅಂಗಡಿಗೆ ಬರುವ ಗ್ರಾಹಕರ ಜತೆ ಮಾತನಾಡಿ ಮಾತನಾಡಿಯೇ ಅವರು ಕನ್ನಡವನ್ನು ಕಲಿತಿದ್ದಂತೆ. ಈಗ ಕನ್ನಡಿಗರಿಗಿಂತಲೂ ಸೊಗಸಾಗಿ ಮಾಡುತ್ತಾರೆ. ಈ ಅಂಗಡಿಗೆ ದಿನಕ್ಕೆ ಕಡಿಮೆ ಎಂದರೂ ೨೦ರಿಂದ ೩೦ ಮಂದಿ ಕನ್ನಡಿಗರು ಬರುತ್ತಾರಂತೆ. ಅವರ ಜತೆ ಮಾತನಾಡಿ ಮಾತನಾಡಿಯೇ ಇಷ್ಟು ಚಂದ ಮಾತಾಡ್ತಾರಂತೆ.

ಕನ್ನಡದಲ್ಲಿ ಬರೆಯೋದೂ ಇದೆ!
ವಿಶೇಷವೆಂದರೆ, ಸಂತೋಷ್‌ಗೆ ಕನ್ನಡದಲ್ಲಿ ಬರೆಯೋದೂ ಗೊತ್ತು.`ʻʻಕರ್ನಾಟಕದ ಯಾತ್ರಿಕರಿಗೆ ಸುಸ್ವಾಗತ. ನಾನು ಕನ್ನಡದ ಅಭಿಮಾನಿ. ನನಗೂ ಕನ್ನಡ ಬರುತ್ತದೆ ಪರಿಗಣಿಸಿ.. ಜಯ ಕರ್ನಾಟಕ-ಸಂತೋಷ್ʼʼ ಎಂದು ಬರೆದಿಟ್ಟಿದ್ದಾರೆ. ಕನ್ನಡ ಬರೆಯೋದನ್ನು ಹೇಗೆ ಕಲಿತರು ಅನ್ನೋದು ಇನ್ನೊಂದು ಅಚ್ಚರಿ. ಅವರು ಏನು ಹೇಳಬೇಕು ಎನ್ನುವುದನ್ನು ಅವರಿಗೆ ಗೊತ್ತಿರುವ ಭಾಷೆಯಲ್ಲಿ ಬರೆದುಕೊಂಡು ಅದನ್ನು ಗೂಗಲ್‌ನಲ್ಲಿ ಕನ್ನಡಕ್ಕೆ ಭಾಷಾಂತರ ಮಾಡಿದರಂತೆ. ಬಳಿಕ ಕನ್ನಡ ಅಕ್ಷರಗಳಲ್ಲಿ ದುಂಡಗೆ ಚಂದಕ್ಕೆ ಬರೆದಿದ್ದಾರೆ.

ವಿದೇಶಿ ನೆಲದಲ್ಲಿ ಕನ್ನಡವನ್ನು ಕೇಳುವುದೇ ಖುಷಿ. ಅದರಲ್ಲೂ ಯಾವುದೇ ದೇಶದ ವ್ಯಕ್ತಿ, ಕನ್ನಡದ ಗಂಧ ಗಾಳಿ ತಿಳಿಯದೆ ಇಷ್ಟೊಂದು ಹಿತವಾಗಿ ಮಾತನಾಡುವುದು, ಬರೆಯುವುದು ನೋಡಿದರೆ ಇನ್ನಷ್ಟು ಖುಷಿಯಾಗುತ್ತದೆ ಎನ್ನುತ್ತಾರೆ ನಾರಾಯಣ ಯಾಜಿ. ಸಂತೋಷ್‌ ಅವರು ಇದುವರೆಗೆ ಕರ್ನಾಟಕ ಬಿಡಿ, ಭಾರತಕ್ಕೇ ಬಂದಿಲ್ಲವಂತೆ. ಒಮ್ಮೆ ಬನ್ನಿ ಅಂತ ಪ್ರೀತಿಯಿಂದ ಕರೆದಿದ್ದಾರೆ ನಾರಾಯಣ ಯಾಜಿಯವರು.

ಇದನ್ನೂ ಓದಿ | Vistara News Launch | ವಿದೇಶದಲ್ಲಿ ಕನ್ನಡ ಘಮ ಹಂಚಿದ ಉದ್ಯಮಿ ಎಚ್.ಎಸ್. ಶೆಟ್ಟಿ; ವಿಸ್ತಾರದ ಕಾಯಕ ಯೋಗಿ

Exit mobile version