ದೇವನಹಳ್ಳಿ: ನಾಯಿಗಳು ಜನರನ್ನು ಪೀಡಿಸುವುದು ಒಂದು ಕಡೆಯಾದರೆ, ನಾಯಿಗಳನ್ನು ಜನರು ಪೀಡಿಸುವುದು ಇನ್ನೊಂದು ಕಡೆ. ಇಲ್ಲೊಬ್ಬ ನಾಯಿ ತನ್ನನ್ನು ನೋಡಿ ಬೊಗಳ್ತಿದೆ ಅಂತ ಅದನ್ನು ಗುಂಡು ಹಾರಿಸಿ ಕೊಂದೇ ಬಿಟ್ಟಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹರೀಶ್ ಎಂಬವರಿಗೆ ಸೇರಿದ ರಾಖಿ ಎಂಬ ನಾಯಿಯನ್ನು ಅದೇ ಗ್ರಾಮದ ಕೃಷ್ಣಪ್ಪ ಎಂಬಾತ ಕೊಂದು ಹಾಕಿದ್ದಾನೆ.
ನಾಯಿ ಯಾವಾಗಲೂ ನನ್ನನ್ನು ನೋಡಿ ಬೊಗಳ್ತಾ ಇದೆ, ಬೆನ್ನಟ್ಟಿಕೊಂಡು ಬರುತ್ತದೆ, ಕಚ್ಚುತ್ತದೆ ಎನ್ನುವುದು ಕೃಷ್ಣಪ್ಪ ಕೊಲೆಗೆ ಕೊಡುವ ಕಾರಣ. ಶನಿವಾರವೂ ಅಷ್ಟೆ. ನಾಯಿ ತನ್ನನ್ನು ನೋಡಿ ಬೊಗಳಿದೆ ಎಂಬ ಕಾರಣ ಇಟ್ಟುಕೊಂಡ ಕೃಷ್ಣಪ್ಪ ಬಂದೂಕು ತಂದು ಗುಂಡು ಹಾರಿಸಿಯೇ ಬಿಟ್ಟಿದ್ದಾನೆ. ಈತ ಬಂದೂಕು ಹಿಡಿದುಕೊಂಡು ಬಂದಿದ್ದನ್ನು ನೋಡಿ ನಾಯಿಯೇನೋ ಓಡಿದೆ. ಆದರೆ, ಕೃಷ್ಣಪ್ಪ ಅದನ್ನು ಅಟ್ಟಾಡಿಸಿ ಕೊಂದು ಹಾಕಿದ್ದಾನೆ ಎನ್ನಲಾಗಿದೆ.
ನಾಯಿ ಮಾಲೀಕ ಹರೀಶ್ ಅವರು ಕೃಷ್ಣಪ್ಪನ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಎಷ್ಟು ಗಂಭೀರವಾಗಿದೆ ಎಂದರೆ ಕೇಸು ದಾಖಲಿಸಿಕೊಂಡ ಪೊಲೀಸರು ಹೊಲಕ್ಕೇ ಹೋಗಿದ್ದಾರೆ. ನಾಯಿಗೆ ಎಲ್ಲೆಲ್ಲ ಗಾಯವಾಗಿದೆ ಎನ್ನುವುದನ್ನು ಗಮನಿಸಿದ್ದಾರೆ. ಜತೆಗೆ ನಾಯಿಯನ್ನು ಮಣ್ಣು ಮಾಡಿದ ಜಾಗಕ್ಕೂ ಹೋಗಿದ್ದಾರೆ. ನಾಯಿಗೆ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ.
ಈ ನಡುವೆ, ಪೊಲೀಸರು ಏರ್ ಗನ್‌ನಿಂದ ಗುಂಡು ಹಾರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಅದರೆ, ಸಾಮಾನ್ಯವಾಗಿ ಏರ್‌ಗನ್‌ನಿಂದ ಹೊಡೆದರೆ ಸಾವು ಸಂಭವಿಸುವುದಿಲ್ಲ. ಹಾಗಿದ್ದರೆ, ನಾಡ ಕೋವಿಯಿಂದ ಗುಂಡು ಹಾರಿಸಲಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ | ನಾಯಿ ವಿಚಾರಕ್ಕೆ ಅತ್ತೆ ಮಾವನ ಜೊತೆ ಜಗಳ, ತಾಯಿ-ಮಗಳ ಆತ್ಮಹತ್ಯೆ