ಯಾದಗಿರಿ: ವ್ಯಕ್ತಿಯೊಬ್ಬ ಕುಡಿತದ ಮತ್ತಿನಲ್ಲಿ ತನ್ನ ಒಂಬತ್ತು ತಿಂಗಳ ಮಗುವನ್ನೇ ತಂದೆಯೊಬ್ಬ ಉಸಿರುಗಟ್ಟಿಸಿ ಕೊಲೆ (Child murder) ಮಾಡಿದ್ದಾನೆ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ.
ಮೊದಲೇ ಆತನಿಗೆ ಹೆಣ್ಣು ಮಗು ಎನ್ನುವ ಅಸಡ್ಡೆ ಇತ್ತು. ಅದರ ಜತೆಗೆ ಕುಡಿಯುವುದಕ್ಕೆ ಅಡ್ಡಿಪಡಿಸುತ್ತಿದೆ ಎಂಬ ಕಾರಣಕ್ಕೆ ಮತ್ತಿನಲ್ಲಿ ಇಂಥ ಕ್ರೌರ್ಯವನ್ನು ಮರೆದಿದ್ದಾನೆ ಈ ದುಷ್ಟ. ಮಗು ಅಳುತ್ತಿರುವುದು ತನ್ನ ಕುಡಿತದ ಮಜಾವನ್ನು ಹಾಳು ಮಾಡುತ್ತಿದೆ ಎಂದು ಬಗೆದ ಆತ ದಾರವೊಂದನ್ನು ತಂದು ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಬದ್ದೆಪಲ್ಲಿ ಗ್ರಾಮದ ರಾಮು ಎಂಬಾತನೇ ಈ ದುಷ್ಟ. ತನುಶ್ರೀ ಎಂಬ ೯ ತಿಂಗಳ ಹಸುಳೆಯೇ ಅಪ್ಪನ ಕ್ರೌರ್ಯಕ್ಕೆ ಬಲಿಯಾದ ಅಮಾಯಕ ಮಗು.
ರಾಮು ಮತ್ತು ಸಾವಿತ್ರಮ್ಮನ ಮದುವೆ ಕೆಲವು ವರ್ಷದ ಹಿಂದೆ ನಡೆದಿತ್ತು. ಅವರಿಗೆ ಒಂಬತ್ತು ತಿಂಗಳ ಹಿಂದೆ ಮಗು ಜನಿಸಿತ್ತು. ರಾಮುವಿಗೆ ಹಿಂದಿನಿಂದಲೂ ಕುಡಿತದ ಚಟ ಜಾಸ್ತಿ. ಕೆಲಸಕ್ಕೆ ಹೋಗುವುದು ಅಪರೂಪವಾಗಿತ್ತು.
ಬುಧವಾರ ಈತ ಹೆಂಡತಿ ಸಾವಿತ್ರಮ್ಮಳನ್ನು ಕೂಲಿ ಕೆಲಸಕ್ಕೆ ಕಳುಹಿಸಿದ್ದ. ʻʻನೀನು ಹತ್ತಿ ಬಿಡಿಲು ಹೋಗು. ನಾನು ಮಗುವನ್ನು ನೋಡಿಕೊಂಡು ಮನೆಯಲ್ಲಿರುತ್ತೇನೆʼʼ ಎಂದು ಹೇಳಿದ್ದ. ಆತನ ಮಾತನ್ನು ನಂಬಿದ ಸಾವಿತ್ರಮ್ಮ ಪುಟ್ಟ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದಾಳೆ.
ಈ ನಡುವೆ ಹೆಂಡತಿ ಕೆಲಸಕ್ಕೆ ಹೋದ ಕೂಡಲೇ ರಾಮು ಕುಡಿತ ಶುರುವಿಟ್ಟುಕೊಂಡಿದ್ದ. ಇವನ ಕುಡಿತದ ವೇಳೆ ಮಗು ಅಳುತ್ತಿತ್ತು. ಮಗು ತನ್ನ ಕುಡಿತಕ್ಕೆ ಅಡ್ಡಿ ಮಾಡುತ್ತಿದೆ ಎಂದು ಬಗೆದ ರಾಮು ಮಗಳ ಕುತ್ತಿಗೆಯಲ್ಲಿದ್ದ ದಾರವನ್ನು ಅಲ್ಲೇ ಗಟ್ಟಿಯಾಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಆತ ಪಕ್ಕದ ಮನೆಯ ವೃದ್ಧೆಯ ಬಳಿ ಹೋಗಿ ʻಮಗು ಸತ್ತಿದೆʼ ಎಂದು ಹೇಳಿದ್ದಾನೆ. ಮಗುವನ್ನು ಪಕ್ಕದ ಮನೆಯವರ ಕೈಗೆ ನೀಡಿದ ಆತ ಹೊಲಕ್ಕೆ ಹೋಗಿ ಹೆಂಡತಿ ಹತ್ತಿರ ವಿಷಯ ತಿಳಿಸಿದ್ದಾನೆ.
ಇದೀಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Unnatural sex and murder | 1 ವರ್ಷದ ಮಗುವಿನ ಮೇಲೆ ಸಲಿಂಗ ದೌರ್ಜನ್ಯ ನಡೆಸಿ ಕೊಂದ ಕಿರಾತಕನಿಗೆ ಮರಣದಂಡನೆ