ಕಲಬುರಗಿ: ʻʻನೀನು ಕಪ್ಪಗಿದ್ದೀಯಾ, ಎಷ್ಟು ಪೌಡರ್ ಹಾಕಿದರೂ ಬಿಳಿ ಆಗಲ್ಲʼʼ ಎಂದು ಆಗಾಗ ಅವಹೇಳನ ಮಾಡುತ್ತಿದ್ದ ಗಂಡನೊಬ್ಬ ಇದೀಗ ಆಕೆಯನ್ನು ಕೊಂದೇ (Murder case) ಹಾಕಿದ್ದಾನೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೆಲ್ಲೂರ್ ಗ್ರಾಮದಲ್ಲಿ ಘಟನೆ ನಡೆದಿದೆ. ಫರ್ಜಾನಾ ಬೇಗಂ (28) ಎಂಬಾಕೆಯೇ ತನ್ನ ಗಂಡ ಖಾಜಾ ಪಟೇಲ್ನಿಂದ ಕೊಲೆಯಾದ ದುರ್ದೈವಿ.
ಜೇವರ್ಗಿ ತಾಲ್ಲೂಕಿನ ಕೆಲ್ಲೂರ್ ಗ್ರಾಮದ ಖಾಜಾ ಪಟೇಲ್ ಮತ್ತು ಫರ್ಜಾನಾ ಬೇಗಂ ನಡುವೆ ಏಳು ವರ್ಷಗಳ ಹಿಂದೆ ಮದುವೆ ಆಗಿತ್ತು. ಮದುವೆಯಾದ ದಿನದಿಂದಲೇ ಫರ್ಜಾನಾ ಬೇಗಂಗೆ ನಾನಾ ಕಾರಣ ನೀಡಿ ನಿತ್ಯ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಖಾಜಾ ಪಟೇಲ್ ಮತ್ತು ಆತನ ಕುಟುಂಬಸ್ಥರು ನೀನು ಕಪ್ಪಗಿದ್ದೀಯಾ, ಎಷ್ಟು ಪೌಡರ್ ಹಾಕಿದರೂ ಬಿಳಿ ಆಗಲ್ಲ ಎಂದೆಲ್ಲ ಹೀಯಾಳಿಸುತ್ತಿದ್ದರು. ಜತೆಗೆ ವರದಕ್ಷಿಣೆ ತರುವಂತೆ ಗಂಡ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಈ ನಡುವೆ ಹಿಂಸೆ ವಿಪರೀತ ಮಟ್ಟಕ್ಕೇರಿದ್ದು, ಅಂತಿಮವಾಗಿ ಖಾಜಾ ಪಟೇಲ್ ಹೆಂಡತಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ಫರ್ಜಾನಾ ಮನೆಯವರು ಆಕೆ ಎದುರಿಸುತ್ತಿದ್ದ ಹಿಂಸೆಯನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಲೆ ಮಾಡಿದ ಬಳಿಕ ಖಾಜಾ ಪಟೇಲ್ ಮತ್ತು ಕುಟುಂಬ ಎಸ್ಕೇಪ್ ಆಗಿದೆ ಎಂದು ಹೇಳಲಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ : Murder Case: ಬಾರ್ ಕ್ಯಾಷಿಯರ್ನನ್ನು ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ; ಹಂತಕರನ್ನು ಬಂಧಿಸಿದ ಪೊಲೀಸರು