Site icon Vistara News

Cruel husband| ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಸಂಶಯ ಪಿಶಾಚಿ ಗಂಡ

Shivananada Shobha

ಉಳ್ಳಾಲ: ಸಂಶಯಪಿಶಾಚಿ ಗಂಡನೊಬ್ಬ ತನ್ನ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಪಿಲಾರು ಎಂಬಲ್ಲಿ ಗುರುವಾರ ಮಧ್ಯಾಹ್ನದ ಹೊತ್ತು ಘಟನೆ ನಡೆದಿದೆ.

ಪಿಲಾರು ನಿವಾಸಿ ಶೋಭಾ ಪೂಜಾರಿ(೪೫) ಮೃತದೇಹ ಮನೆಯ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ಪತಿ ಶಿವಾನಂದ ಪೂಜಾರಿ (೫೫) ಮೃತದೇಹ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಫೋನೆತ್ತದೆ ಇದ್ದಾಗ ಬೆಳಕಿಗೆ ಬಂತು
ಶಿವಾನಂದ ಮತ್ತು ಶೋಭಾ ದಂಪತಿಗೆ ಇಬ್ಬರು ಮಕ್ಕಳು. ಮಗಳಿಗೆ ಮದುವೆಯಾಗಿದ್ದರೆ, ಮಗ ಕಾರ್ತಿಕ್‌ ಕೆಲಸಕ್ಕೆ ಹೋಗುತ್ತಿದ್ದಾನೆ. ಗುರುವಾರ ಮಧ್ಯಾಹ್ನದ ಹೊತ್ತು ಕಾರ್ತಿಕ್‌ ತನ್ನ ತಾಯಿಗೆ ಕರೆ ಮಾಡಿದ್ದಾನೆ. ಆದರೆ, ಫೋನ್‌ ಎತ್ತದೆ ಇದ್ದಾಗ ಪಕ್ಕದ ಮನೆಯ ಮಹಿಳೆಯೊಬ್ಬರಿಗೆ ಕರೆ ಮಾಡಿದ್ದಾರೆ.

ಶೋಭಾ ಅವರು ಬೆಳಗ್ಗೆ ೧೦ ಗಂಟೆಯ ಹೊತ್ತಿಗೆ ಈ ಮನೆಗೆ ಬಂದು ಗೊಬ್ಬರ ತೆಗೆದುಕೊಂಡಿದ್ದರು. ಸ್ವಲ್ಪ ಹೊತ್ತಿನಲ್ಲೇ ಕರೆ ಬಂದಿದೆ. ಆಗ ಪಕ್ಕದ ಮನೆಯ ಮಹಿಳೆ ಶೋಭಾ ಅವರ ಹೆಸರು ಕರೆಯುತ್ತಾ ಹೋಗಿದ್ದಾರೆ. ಆದರೆ, ಅವರ ಕರೆಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ಮನೆಗೇ ಹೋಗಿ ನೋಡಿದರೆ ಟಿವಿ ಆನ್‌ ಆಗಿತ್ತು. ಇನ್ನೂ ಒಳಗೆ ಹೋಗಿ ನೋಡಿದರೆ ಮಂಚದಲ್ಲಿ ಶೋಭಾ ಅವರು ಸತ್ತು ಬಿದ್ದಿದ್ದರು.

ಆಗ ಪಕ್ಕದ ಮನೆ ಮಹಿಳೆ ಓಡಿಕೊಂಡು ಹೋಗಿ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದರು. ಈ ನಡುವೆ, ಯಾರೋ ತೋಟದ ಭಾಗದಲ್ಲಿ ಬರುತ್ತಿದ್ದಾಗ ಅಲ್ಲಿ ಶಿವಾನಂದ ಪೂಜಾರಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ನೋಡಿದಾಗಲೇ ಶಿವಾನಂದ ಪೂಜಾರಿ ತನ್ನ ಪತ್ನಿಯ ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಫಾರೆನ್ಸಿಕ್‌ ತಂಡ ಭೇಟಿ ನೀಡಿ ಎರಡು ಮೃತದೇಹಗಳನ್ನು ಪರಿಶೀಲಿಸುತ್ತಿದ್ದಾರೆ. ಎಸಿಪಿ ದಿನಕರ್‌ ಶೆಟ್ಟಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್‌ ಠಾಣೆಯ ತಂಡ ತನಿಖೆ ಕೈಗೆತ್ತಿಕೊಂಡಿದೆ.

ಸಂಶಯ ಪಿಶಾಚಿ ಶಿವಾನಂದ
ಶಿವಾನಂದ ಮತ್ತು ಶೋಭಾ ಮದುವೆಯಾಗಿ ೨೫ ವರ್ಷಗಳೇ ಕಳೆದಿವೆ. ಶಿವಾನಂದ ಪೈಂಟರ್‌ ಕೆಲಸ ಮಾಡುತ್ತಿದ್ದರೆ ಶೋಭಾ ಮನೆಯಲ್ಲೇ ಇದ್ದು ತೋಟ ಮತ್ತಿತರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಮದುವೆಯಾಗಿ ಇಷ್ಟು ವರ್ಷವಾದರೂ ಶಿವಾನಂದನಿಗೆ ತನ್ನ ಹೆಂಡತಿಯ ಮೇಲೆ ಸದಾ ಸಂಶಯ ಎಂದು ಆಸುಪಾಸಿನ ಮನೆಯವರು ಹೇಳುತ್ತಾರೆ.
ಯಾರದೇ ಫೋನ್‌ ಬಂದರೂ ಮೊಬೈಲ್‌ ಚೆಕ್‌ ಮಾಡುವುದು, ಅವನ ಫೋನಾ, ಇವನ ಫೋನಾ ಎಂದು ಹಂಗಿಸುವುದು, ಇದೇ ವಿಚಾರದಲ್ಲಿ ಪ್ರತಿದಿನವೂ ಕಿರಿಕಿರಿ ಮಾಡುವುದು, ಹಲ್ಲೆ ಮಾಡುವುದು ಬಹುಕಾಲದಿಂದ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಅದರಲ್ಲೂ ಮುಖ್ಯವಾಗಿ ನಿರ್ದಿಷ್ಟ ಯುವಕನೊಬ್ಬನ ಬಗ್ಗೆ ವಿಪರೀತ ಅಪಪ್ರಚಾರ ಮಾಡುತ್ತಿದ್ದ ಎಂದು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ತಿಳಿಸಿದ್ದಾರೆ. ಆದರೆ, ಆ ಯುವಕನಿಗೆ ಇಂಥ ಯಾವುದೇ ದುರುದ್ದೇಶಗಳು ಇರಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಗುರುವಾರವೂ ಇದೇ ವಿಚಾರಕ್ಕೆ ಸಂಬಂಧಿಸಿ ಗಂಡ-ಹೆಂಡತಿ ಮಧ್ಯೆ ಜಗಳ ನಡೆದು ಕೊಲೆ ಮಾಡಿರಬಹುದು ಎಂದು ಸಂಶಯಿಸಲಾಗಿದೆ.

ಇದನ್ನೂ ಓದಿ | Murder Case | ರೌಡಿಶೀಟರ್ ದಿವಾಕರ್ @ ಡಿಚ್ಚಿ ದಿವಾ ಭೀಕರ ಕೊಲೆ; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದರು!

Exit mobile version