Site icon Vistara News

Murder mystery | ಸೊಸೆಯ ಮೇಲೇ ಕಣ್ಣು ಹಾಕಿದ್ದ ಧೂರ್ತ ಮಾವನ ಸುಪಾರಿ ಮರ್ಡರ್‌: ಕೊಲ್ಲಿಸಿದ್ದು ಯಾರು?

thamme gowda

ಹಾಸನ: ಮಗಳಂತೆ ನೋಡಿಕೊಳ್ಳಬೇಕಾಗಿದ್ದ ಸೊಸೆಯನ್ನು ಕಾಮದ ಕಣ್ಣಿನಿಂದ ನೋಡುತ್ತಿದ್ದ, ಆಕೆಗೆ ಕಿರುಕುಳ ನೀಡುತ್ತಿದ್ದ ಧೂರ್ತ ಮಾವನೊಬ್ಬ ಕೊಲೆಯಾಗಿ ಹೋಗಿದ್ದಾನೆ. ಅಸಹಾಯಕ ಪರಿಸ್ಥಿತಿಯಲ್ಲಿದ್ದ ಆ ಹೆಣ್ಣಿನ ತವರು ಮನೆಯವರೇ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾರೆ (Murder mystery) ಈ ಘಟನೆ ನಡೆದಿರುವುದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ. ಇಲ್ಲಿನ ತಮ್ಮೇ ಗೌಡ(೫೫) ಎಂಬಾತನೇ ಕೊಲೆಯಾದವನು.

ಶವವಾಗಿ ಪತ್ತೆಯಾದ ತಮ್ಮೇಗೌಡ
ತಮ್ಮೇ ಗೌಡ ಎಂಬಾತನ ಕೊಲೆಯಾಗಿದ್ದು ನವೆಂಬರ್‌ ೧೨ರಂದು. ನ. 13ರಂದು ರಾಗಿಕಾವಲು ಗ್ರಾಮದ ಹೊಸಕೆರೆಯ ಕೆರೆಯಲ್ಲಿ ಆತ ಶವವಾಗಿ ಪತ್ತೆಯಾಗಿದ್ದ. ಮುಖವನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಶವವನ್ನು ಕೆರೆಗೆ ಎಸೆಯಲಾಗಿತ್ತು. ಆವತ್ತೇ ಇದೊಂದು ಕೊಲೆ ಎನ್ನುವ ಬಗ್ಗೆ ಅನುಮಾನಗಳಿದ್ದವು. ಆದರೆ, ಕೊಲೆ ಮಾಡಿದ್ಯಾರು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ತಮ್ಮೇ ಗೌಡನ ಮೂನೇ ಮಗ ಕುಮಾರ್‌ ನೀಡಿದ ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಭಾರಿ ಭಯಾನಕ ಸಂಗತಿಗಳೇ ಬೆಳಕಿಗೆ ಬಂದವು. ನಿಧಾನಕ್ಕೆ ಕೊಲೆ ರಹಸ್ಯ ಬಯಲಾಯಿತು.

ದೂರು ಕೊಟ್ಟ ಮಗನ ಹೆಂಡತಿಯೇ ಮೇಲೇ ಕಣ್ಣು ಹಾಕಿದ್ದ!
ಈ ಕೊಲೆಯ ಬಗ್ಗೆ ದೂರು ನೀಡಿದ್ದ ತಮ್ಮೇಗೌಡನ ಮೂರನೇ ಮಗ. ಆದರೆ, ಈ ಕೊಲೆಯ ಹಿಂದಿರುವ ಕಾರಣವೂ ಇದೇ ಕುಮಾರನ ಪತ್ನಿ ಎಂದರೆ ಅಚ್ಚರಿಯಾದೀತು. ಕುಮಾರನಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ, ಮಕ್ಕಳಾಗಿರಲಿಲ್ಲ. ಈ ನಡುವೆ, ತಮ್ಮೇ ಗೌಡ ತನ್ನ ಸೊಸೆಯಾದ ನಾಗರತ್ನಳ ಮೇಲೆಯೇ ಕಣ್ಣು ಹಾಕಿದ್ದ. ಅದಕ್ಕೆ ಅವನು ಕೊಟ್ಟ ಕಾರಣವೂ ವಿಶೇಷವಾಗಿತ್ತು.

ತಮ್ಮೇ ಗೌಡನ ಮೂರನೇ ಮಗ ಕುಮಾರ ಸ್ವಲ್ಪ ಬುದ್ಧಿಮಾಂದ್ಯ. ಇದನ್ನೆಲ್ಲ ಮುಚ್ಚಿಟ್ಟು ಮದುವೆ ಮಾಡಲಾಗಿತ್ತು. ಆದರೆ, ಸೊಸೆ ನಾಗರತ್ನ ಇದನ್ನೆಲ್ಲ ತೂಗಿಸಿಕೊಂಡು ಬದುಕುತ್ತಿದ್ದಳು. ಅಷ್ಟು ಹೊತ್ತಿಗೆ ನೀಚ ಮಾವನ ನೌಟಂಕಿ ಆಟ ಶುರುವಾಗಿತ್ತು. ಕುಮಾರ ಒಂದು ರೀತಿ ಬುದ್ಧಿ ಕಡಿಮೆಯವನಾಗಿರುವುದರಿಂದ ಅವನಿಂದ ನಿನಗೆ ಮಕ್ಕಳು ಆಗುವ ಸಾಧ್ಯತೆಗಳಿಲ್ಲ. ಅಷ್ಟೇ ಅಲ್ಲ, ಅವನಿಂದ ಪಡೆದ ಮಕ್ಕಳೂ ಅದೇ ರೀತಿ ಬುದ್ಧಿ ಇಲ್ಲದವರಾದರೆ ಕಷ್ಟ. ಹೀಗಾಗಿ ನಾನು ನಿನಗೆ ಮಕ್ಕಳನ್ನು ಕರುಣಿಸುತ್ತೇನೆ ಎಂದು ನೇರವಾಗಿಯೇ ನಾಗರತ್ನನಿಗೆ ಹೇಳಿ ಪುಸಲಾಯಿಸುತ್ತಿದ್ದ.

ನಾಗರತ್ನ ಇದನ್ನು ತೀವ್ರವಾಗಿ ಪ್ರತಿರೋಧಿಸುತ್ತಿದ್ದರೂ ತಮ್ಮೇ ಗೌಡ ಮಾತ್ರ ಬಿಡದೆ ಕಿರುಕುಳ ನೀಡಲು ಮುಂದಾಗುತ್ತಿದ್ದ. ಅಂತಿಮವಾಗಿ ಆಕೆ ಈ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಿದಳು. ಅವರು ತಮ್ಮೇ ಗೌಡನಿಗೆ ಬುದ್ದಿ ಕಲಿಸಲು ನಿರ್ಧರಿಸಿದರು.

ಮಗಳ ನೋವಿಗೆ ಸ್ಪಂದಿಸಿ ತಮ್ಮೇಗೌಡನ ಕೊಲೆಗೆ ಸುಪಾರಿ ಕೊಟ್ಟ ಮೈಲಾರಿ ಗೌಡ ಮತ್ತು ತಾಯಮ್ಮ, ಕೊಲೆ ಮಾಡಿದ ಚಂದ್ರೇ ಗೌಡ ಮತ್ತು ಯೋಗೇಶ್‌

ಕೊಲೆಗೆ ೫೦ ಸಾವಿರ ರೂಪಾಯಿ ಸುಪಾರಿ
ಮಗಳ ಕಷ್ಟವನ್ನು ಅರ್ಥ ಮಾಡಿಕೊಂಡ ನಾಗರತ್ನ ಅವರ ಹೆತ್ತವರಾದ ಮೈಲಾರಿಗೌಡ ಹಾಗೂ ತಾಯಮ್ಮ ಇದಕ್ಕೊಂದು ಅಂತ್ಯ ಕಾಣಿಸಬೇಕು ಎಂದು ತೀರ್ಮಾನಿಸಿದರು. ತಮ್ಮ ಬಂಧುಗಳಿಗೆ ವಿಷಯ ತಿಳಿಸಿ ಒಂದು ಕೊಲೆಗೆ ಸ್ಕೆಚ್‌ ಹಾಕಿದರು. ತಮ್ಮೇಗೌಡನಿಗೆ ಮನೆಯಲ್ಲಿ ಮದ್ಯಪಾನ ಮಾಡಿಸಿ ರಾಡ್‌ನಿಂದ ಹೊಡೆದು ಕುತ್ತಿಗೆ ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಕೆರೆಗೆ ಬಿಸಾಡಿ ಎಸ್ಕೇಪ್ ಆಗಿದ್ದರು.

ಪ್ರಕರಣವನ್ನು ಭೇದಿಸಿದ ಪೊಲೀಸರು ಈಗ ಮೈಲಾರಿ ಗೌಡ, ಆತನ ಪತ್ನಿ ತಾಯಮ್ಮ, ಯೋಗೇಶ್‌, ಚಂದ್ರೇಗೌಡನನ್ನು ಬಂಧಿಸಿದ್ದಾರೆ. ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಗಳಂಥ ಸೊಸೆಯ ಮೇಲೆ ಕಾಮದ ಕಣ್ಣು ಬೀರಿದವನಿಗೆ ಶಾಸ್ತಿಯಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Murder Case | ಬೈಕ್‌ನಿಂದ ಇಳಿಯುವಾಗ ಕಾಲು ತಗುಲಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಹತ್ಯೆ

Exit mobile version