Site icon Vistara News

ಪೆಟ್ರೋಲ್‌ ಸುರಿದು ಯುವಕನ ಕೊಲೆ: ಠಾಣೆಗೆ ಬಂದು ಹೇಳಿದ್ದ ಹಂತಕ! ಹತ್ಯೆಯ ಹಿಂದೆ ಸಲಿಂಗ ಕಾಮದ ನೆರಳು

murder

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಿಲಕ್ಷಣ ಮತ್ತು ಭಯಾನಕವಾದ ಕೊಲೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತಾನು ಕೊಲೆ ಮಾಡಿದ್ದಾಗಿ ತಾನೇ ಠಾಣೆಗೆ ಬಂದು ಹೇಳಿದ್ದಾನೆ. ಆದರೆ, ಪೊಲೀಸರಿಗೆ ನಂಬಿಕೆ ಬರಲಿಲ್ಲ. ಈ ನಡುವೆ, ಯುವಕನೊಬ್ಬ ನಾಪತ್ತೆಯಾಗಿದ್ದು, ಹುಡುಕಿದಾಗ ಅವನ ಹೆಣ ಸಿಕ್ಕಿದೆ. ಅದೂ ಸುಟ್ಟು ಕರಕಲಾದ ಸ್ಥಿತಿಯಲ್ಲಿ. ಈ ಭಯಾನಕ ಕೊಲೆಯ ಹಿಂದೆ ಸಲಿಂಗ ಕಾಮದ ನೆರಳೂ ಕಾಣಿಸಿಕೊಂಡಿದೆ.

ಏನಿದು ಭಯಾನಕ ಕೊಲೆ?
ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಅದ್ರಾಮ ಎಂಬಾತ ಬಂಟ್ವಾಳ ಠಾಣೆಗೆ ಬಂದು ತಾನೊಂದು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದ. ಆದರೆ, ಪೊಲೀಸರು ಆತನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾಕೆಂದರೆ ಅವನು ಹೇಳಿದ ರೀತಿ ಮತ್ತು ಆತನ ನಡವಳಿಕೆಗಳು ಹಾಗಿದ್ದವು. ಭಾನುವಾರ ಇರಾ ಗ್ರಾಮದಲ್ಲಿ ತಾನು ಕೊಲೆ ಮಾಡಿದ್ದೆ ಎಂದೇ ಆತ ತಿಳಿಸಿದ್ದ!

ಇದೇ ಸಮಯದಲ್ಲಿ ಬೋಳಂತೂರು ಗ್ರಾಮದ ೧೯ ವರ್ಷದ ಯುವಕ ಸಮದ್ ಎಂಬಾತ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಯಿತು. ಕೂಡಲೇ ವಿಟ್ಲ ಪೊಲೀಸರು ಕೊಣಾಜೆ ಮತ್ತು ಬಂಟ್ವಾಳ ಠಾಣೆಗೆ ಮಾಹಿತಿ ನೀಡಿದರು.

ಆಗ ಬಂಟ್ವಾಳ ಪೊಲೀಸರಿಗೆ ಈ ಅದ್ರಾಮ ಬಂದು ಹೇಳಿದ್ದು ನಿಜವಿರಬಹುದು ಎಂಬ ಸಂಶಯ ಬಂತು. ಕೂಡಲೇ ಆತನನ್ನು ಕರೆದುಕೊಂಡು ಆತ ಹೇಳಿದ ಸ್ಥಳಕ್ಕೆ ತೆರಳಿದರು. ಆತ ಹೇಳಿದಂತೆ ಇರಾದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಯಿತು!

ಈ ಕೊಲೆಯ ಹಿಂದೆ ಸಲಿಂಗ ಕಾಮದ ನೆರಳಿದೆ ಎಂದು ಹೇಳಲಾಗುತ್ತಿದೆ. ಆದರೆ, ಯುವಕ ಅದ್ರಾಮನನ್ನು ಪೀಡಿಸುತ್ತಿದ್ದನೋ, ಅದ್ರಾಮನೇ ಯುವಕನನ್ನು ಪೀಡಿಸುತ್ತಿದ್ದು, ಆತ ಒಪ್ಪದೆ ಇದ್ದಾಗ ಕೊಲೆ ಮಾಡಿದನೇ ಎನ್ನುವುದು ತನಿಖೆಯಿಂದ ತಿಳಿದುಬರಬೇಕಾಗಿದೆ. ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Murder Case | ಶಿವಮೊಗ್ಗದಲ್ಲಿ ಮಹಿಳೆ ಕೊಲೆ: ಅಮ್ಮನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದ ಮಗಳು

Exit mobile version