ಬೆಂಗಳೂರು: ೧೬ ವರ್ಷದ ಬಾಲಕಿಯೊಬ್ಬಳನ್ನು ದಾರಿಯಲ್ಲಿ ಅಡ್ಡಗಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ ೭೩ ವರ್ಷದ ವೃದ್ಧನನ್ನು ಘಟನೆ ನಡೆದ ಕೆಲವೇ ಗಂಟೆಯಲ್ಲಿ ಸಂತ್ರಸ್ತೆಯ ಕುಟುಂಬಿಕರು ಹೊಡೆದು (Rapist murder) ಸಾಯಿಸಿದ್ದಾರೆ.
ಭಾನುವಾರ ತಡರಾತ್ರಿ ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ ಘಟನೆ ನಡೆದಿದ್ದು, ಕುಪ್ಪಣ್ಣ ಎಂಬಾತನೇ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಯಾದವನು. ಇಲ್ಲಿನ ೧೬ ವರ್ಷದ ಬಾಲಕಿಯೊಬ್ಬಳನ್ನು ಕುಪ್ಪಣ್ಣ ಎಂಬಾತ ದಾರಿಯಲ್ಲಿ ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದ. ಮನೆಗೆ ಬಂದ ಬಾಲಕಿ ಕಣ್ಣೀರು ಹಾಕುತ್ತಾ ವಿಷಯವನ್ನು ಮನೆಯವರಿಗೆ ತಿಳಿಸಿದ್ದಳು.
ವಿಷಯ ತಿಳಿಯುತ್ತಿದ್ದಂತೆಯೇ ಮನೆ ಮಂದಿ ತಕ್ಷಣವೇ ಆರೋಪಿಯನ್ನು ಹುಡುಕಾಡಲು ಶುರು ಮಾಡಿದ್ದರು. ಆರೋಪಿ ಕುಪ್ಪಣ್ಣ ಬಾಬುಸಾಪಾಳ್ಯದ ತನ್ನ ಮನೆಯಲ್ಲಿ ಇರುವುದನ್ನು ತಿಳಿದ ಬಾಲಕಿ ಮನೆಯವರು ಅಲ್ಲಿಗೆ ನುಗ್ಗಿದರು. ಮನೆಯಲ್ಲೇ ಕುಪ್ಪಣ್ಣನನ್ನು ಹೊಡೆದು ಸಾಯಿಸಿದರು.
ಸಮವಸ್ತ್ರ ತರಲು ಹೋಗಿದ್ದ ಬಾಲಕಿ
ಹೆಣ್ಣೂರು ಬಾಬೂಸಾ ಪಾಳ್ಯ ಪ್ರದೇಶದ ನಿವಾಸಿಯಾಗಿರುವ ಬಾಲಕಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ. ಸಂಜೆ ಕತ್ತಲಾಗುತ್ತಿದ್ದಾಗ ಆಕೆ ಹೊಲಿಯಲು ಕೊಟ್ಟಿದ್ದ ತನ್ನ ಸಮವಸ್ತ್ರವನ್ನು ತರಲು ಹೋಗಿದ್ದಳು. ಈ ಅಂಗಡಿಗೂ ಮನೆಗೂ ಕೇವಲ ೫೦ ಮೀಟರ್ ದೂರವಿದೆ. ಇಷ್ಟರ ಮಧ್ಯೆಯೇ ಮರಳಿಬರುವಾಗ ಕುಪ್ಪಣ್ಣ ಎದುರಾಗಿದ್ದ. ಬಾಲಕಿಗೆ ಆಮಿಷ ಒಡ್ಡಿದ ಆತ ಯಾವುದೋ ನಶೆಯ ಪದಾರ್ಥ ನೀಡಿ ಅತ್ಯಾಚಾರಕ್ಕೆ ಮಾಡಲು ಮುಂದಾಗಿದ್ದ. ಆದರೆ ಬಾಲಕಿ ಕಿರುಚಿಕೊಂಡು ಹೋಗಿ ಮನೆಯಲ್ಲಿ ವಿಷಯ ತಿಳಿಸಿದ್ದಾಳೆ.
ಮನೆಯವರು ಕೂಡಲೇ ಆತನ ಮನೆಗೆ ಹೋಗಿದ್ದು, ಚೆನ್ನಾಗಿ ಥಳಿಸಿದ್ದಾರೆ ಮತ್ತು ಬಳಿಕ ಪೊಲೀಸ್ ಠಾಣೆಗೆ ಬಂದು ಅತ್ಯಾಚಾರ ಯತ್ನದ ದೂರು ನೀಡಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಕುಪ್ಪಣ್ಣ ಹೆಣವಾಗಿದ್ದ. ತಮಿಳುನಾಡು ಮೂಲದ ಕುಪ್ಪಣ್ಣ ಇಲ್ಲಿ ಒಂಟಿಯಾಗಿ ವಾಸವಾಗಿದ್ದ ಎನ್ನಲಾಗಿದೆ. ಈತನಿಗೆ ತಮಿಳುನಾಡಿನಲ್ಲಿ ಸಹೋದರಿಯೊಬ್ಬಳು ಇದ್ದಾಳೆ ಎನ್ನಲಾಗಿದೆ.
ಎರಡು ಪ್ರಕರಣ ದಾಖಲು
ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳೆರಡರ ವಿಚಾರಣೆಯೂ ಹೆಣ್ಣೂರು ಠಾಣೆಯಲ್ಲಿ ನಡೆಯುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಧು, ಸಹಬಾಸ್ ಸೇರಿದಂತೆ ಬಾಲಕಿಯ ಮೂವರು ಸಂಬಂಧಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕುಪ್ಪಣ್ಣ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ | Murder Case | ನಡುರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ, ಹರಿತವಾದ ಆಯುಧದಿಂದ ಕತ್ತರಿಸಿ ಕೊಂದರು!