Site icon Vistara News

Honey bee attack : ಹೆಜ್ಜೇನು ದಾಳಿ ವೇಳೆ ಬಾವಿಗೆ ಹಾರಿ ಜೀವ ಉಳಿಸಿಕೊಂಡ 79ರ ವೃದ್ಧ; ಕಡಿತಕ್ಕೆ ಇಬ್ಬರು ಗಂಭೀರ

Honey bee

#image_title

ಉಳ್ಳಾಲ (ಮಂಗಳೂರು): ತಾಲೂಕಿನ ನರಿಂಗಾನ ಗ್ರಾಮದಲ್ಲಿ ವೃದ್ಧರೊಬ್ಬರ ಮೇಲೆ ಹೆಜ್ಜೇನು (Honey bee attack) ದಾಳಿ ನಡೆಸಿದೆ. ಈ ವೇಳೆ ಅವರು ಸಮಯಪ್ರಜ್ಞೆ ಬಳಸಿ ಬಾವಿಗೆ ಹಾರಿ ಹೆಜ್ಜೇನು ದಾಳಿಯಿಂದ ಬಚಾವಾಗಿದ್ದಾರೆ. ಅದರೆ, ಅವರ ರಕ್ಷಣೆಗೆ ಬಂದ ಮೂವರಿಗೆ ಹೆಜ್ಜೇನುಗಳು ದಾಳಿ ಮಾಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಉಳ್ಳಾಲ ತಾಲೂಕಿನ ನರಿಂಗಾನ‌ ಗ್ರಾಮದ ಬೋಳ ನಿವಾಸಿ ರಾಬರ್ಟ್ ಕುಟಿನ್ಹೋ (79) ಬಾವಿಗೆ ಹಾರಿ ಪಾರಾದರೆ, ಅವರ ಪುತ್ರ ರಾಯಲ್ ಕುಟಿನ್ಹೋ (39) ಹೆಜ್ಜೇನು ದಾಳಿಗೆ ತುತ್ತಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಇದೇ ಸಂದರ್ಭ ಅಣ್ಣನ ಕೂಗು ಕೇಳಿ ಧಾವಿಸಿದ ರಾಬರ್ಟ್ ಕುಟಿನ್ಹೋ ಅವರ ಸಹೋದರ ಜೋಸೆಫ್ ಕುಟಿನ್ಹೋ ಅವರಿಗೂ ಗಾಯಗಳಾಗಿದ್ದು ಸದ್ಯ ಚೇತರಿಸಿಕೊಂಡಿದ್ದಾರೆ. ಜೋಸೆಫ್ ಕುಟಿನ್ಹೋ ಅವರ ಪುತ್ರ ಅಖಿಲ್ ಅವರಿಗೂ ಹೆಜ್ಜೇನು ಕಡಿದಿದೆ.

ಮನೆ ಮಹಡಿ ಹತ್ತುವಾಗ ನಡೆಯಿತು ದಾಳಿ

ರಾಬರ್ಟ್ ಕುಟಿನ್ಹೋ ಅವರು ಬೆಳಗ್ಗೆ ಒಣಗಿದ ಬಟ್ಟೆ ತೆಗೆಯಲೆಂದು ಮನೆಯ ಮಹಡಿ ಹತ್ತುವಾಗ ಹೆಜ್ಜೇನುಗಳು ದಾಳಿ ನಡೆಸಿವೆ. ದಾಳಿಯನ್ನು ತಡೆಯಲಾರದೆ ಕೂಗಿಕೊಂಡಾಗ ರಕ್ಷಣೆಗೆಂದು ಪುತ್ರ ರಾಯಲ್ ಧಾವಿಸಿದರು. ಹೆಜ್ಜೇನುಗಳು ಅವರಿಗೂ ಕಡಿದಿವೆ.

ಆದರೆ, ರಾಬರ್ಟ್‌ ಅವರು ಮಗನ‌ ಸಹಾಯದಿಂದ ಮಹಡಿಯಿಂದ ಪವಾಡಸದೃಶವಾಗಿ ಇಳಿದರು. ತಂದೆ ಮಗನ ಕೂಗು ಕೇಳಿದ ಜೋಸೆಫ್ ಕುಟಿನ್ಹೋ ಹಾಗೂ ಅಖಿಲ್ ರಕ್ಷಣೆಗೆ ಧಾವಿಸಿದಾಗ ಅವರಿಗೂ ನೊಣಗಳು ಕಡಿದಿವೆ.

ಈ ನಡುವೆ, ಜೇನು ನೊಣಗಳ ದಾಳಿಯಿಂದ ಹೇಗೆ ತಪ್ಪಿಸುವುದು ಎಂದು ಯೋಚಿಸಿದ ರಾಬರ್ಟ್‌ ಅವರಿಗೆ ನೀರಿನಲ್ಲಿ ಮುಳುಗಿದರೆ ತಪ್ಪಿಸಿಕೊಳ್ಳಬಹುದು ಎಂಬ ಪುರಾತನ ಉಪಾಯ ಹೊಳೆಯಿತು. ಆದರೆ, ಆಸುಪಾಸಿನಲ್ಲಿ ಕೆರೆ, ಹೊಳೆ ಯಾವುದೂ ಇರಲಿಲ್ಲ. ಕೂಡಲೇ ಅವರು ಧೈರ್ಯ ಮಾಡಿದರು.

ಮಹಡಿಯಿಂದ ಇಳಿದರೂ ಹೆಜ್ಜೇನು ಬೆಂಬಿಡದಾಗ ಬೇರೆ ದಾರಿ‌ಕಾಣದೆ ಕಟ್ಟಕಡೆಯದಾಗಿ ಅವರು ಸಮೀಪದ ಬಾವಿಗೆ ಇಳಿದು ನೀರಿನಲ್ಲಿ ಮುಳುಗಿದರು. ಸುಮಾರು ಹೊತ್ತಿನ ಬಳಿಕ ಮೇಲೆದ್ದು ಬಂದು ಜೀವ ಉಳಿಸಿಕೊಂಡಿದ್ದಾರೆ.

ರಾಬರ್ಟ್‌ ಕುಟಿನ್ಹೋ ಅವರಿಗೆ ಸುಮಾರು ನೂರೈವತ್ತು ಕಡೆ ಗಾಯಗಳಾಗಿವೆ. ಪುತ್ರ ರಾಯಲ್ ಗೂ ಸುಮಾರು ಇಪ್ಪತ್ತೆರಡು ಕಡೆ ಗಾಯಗಳಾಗಿದ್ದು ಮುಖ ನೋವಿನಿಂದ ಊದಿಕೊಂಡಿದೆ.

ಮನೆಯ ಸಿಟ್ ಔಟ್ ನಲ್ಲಿ ರಾಯಲ್ ಪತ್ನಿ ಹಾಗೂ ಮಗು ಕುಳಿತುಕೊಂಡಿದ್ದರು. ಮನೆ ಮಂದಿ ಎಚ್ಚರಿಸಿದ ಕಾರಣ ಅವರಿಬ್ಬರೂ ಮನೆಯ ಕೊಠಡಿಯೊಳಗೆ ರಕ್ಷಣೆ ಪಡೆದುದಲ್ಲದೆ ಕಿಟಕಿಗಳಿಗೆ ನೆಟ್ ಹಾಕಿದ್ದರಿಂದ ಅವರುಗಳು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ : Honey Bee attack: ಹೆಜ್ಜೇನು ದಾಳಿಯಿಂದ 50ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

Exit mobile version