Site icon Vistara News

Koragajja Daiva : ಕೊರಗಜ್ಜನಿಗೇ ಕಾಡಿದ ಜಮೀನು ವಿವಾದ ; ಸಿಟ್ಟಿನಲ್ಲಿ ಗುಡಿಗೇ ಬೆಂಕಿ!

Koragajja gudi set on fire

ಮಂಗಳೂರು: ಎಲ್ಲರ ಸಮಸ್ಯೆಗಳನ್ನು ಪರಿಹರಿಸುವ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ (Koragajja Daiva) ಗುಡಿಯ ವಿಚಾರದಲ್ಲೇ ಎರಡು ತಂಡಗಳು ಜಗಳ ಮಾಡಿಕೊಂಡು ಅಂತಿಮವಾಗಿ ಒಬ್ಬ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ (Man sets fire into Koragajjana gudi) ಇಟ್ಟಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆ (South Kanara News) ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಬಾಡಾರು ಎಂಬಲ್ಲಿ ಈ ಘಟನೆ ನಡೆದಿದೆ.

ಬಾಡಾರಿನ ಕೊರಗಕಲ್ಲು ಎಂಬಲ್ಲಿ ಭೂ ವಿಚಾರಕ್ಕೆ ಗಲಾಟೆ ನಡೆದಿದ್ದು, ಅಂತಿಮವಾಗಿ ಭೂಮಿಯ ಮಾಲೀಕ ಕೊರಗಜ್ಜನ ಗುಡಿಗೆ ಬೆಂಕಿ ಹಚ್ಚಿದ್ದಾನೆ.

ಬಾಡಾರಿನ ಈ ಜಾಗದಲ್ಲಿ ಸಾರ್ವಜನಿಕರು ಸಮಿತಿಯೊಂದನ್ನು ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಾ ಬರುತ್ತಿದ್ದಾರೆ. ಈ ಬಾರಿ ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು, ಹೀಗಾಗಿ ಸಾರ್ವಜನಿಕರು ಹಸ್ತಕ್ಷೇಪ ಮಾಡಬಾರದು ಎಂದು ತಗಾದೆ ಎತ್ತಿದ್ದರು.

ಕಳೆದ ಕೆಲವು ವರ್ಷಗಳಿಂದಲೇ ಕೊರಗಜ್ಜ ಆರಾಧನಾ ಸಮಿತಿ ಮತ್ತು ಈ ಖಾಸಗಿ ವ್ಯಕ್ತಿ ನಡುವೆ ಜಾಗದ ವಿಚಾರಕ್ಕೆ ತಗಾದೆ ಕಂಡುಬರುತ್ತಿತ್ತು. ಆದರೆ, ಕೊನೆಗೆ ಅವಕಾಶ ದೊರೆಯುತ್ತಿತ್ತು. ಈ ಬಾರಿ ಮಾತ್ರ ಯಾವ ಕಾರಣಕ್ಕೂ ಆರಾಧನೆಗೆ ಅವಕಾಶ ಕೊಡುವುದಿಲ್ಲ ಎಂದು ಆರಂಭದಲ್ಲೇ ಸ್ಪಷ್ಟಪಡಿಸಿದ್ದರು.

ಇದೀಗ ಕೊರಗಜ್ಜನ ಆರಾಧನೆಗೆ ಸಿದ್ಧತೆಗಳು ಆರಂಭವಾದ ನಡುವೆಯೇ ಭೂಮಿಯ ಮಾಲೀಕನೂ ಆಗಿರುವ ಈ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ ಇಟ್ಟಿದ್ದಾನೆ. ಇದೊಂದು ಸಣ್ಣ ಗುಡಿಯಾಗಿದ್ದು, ಅದರ ಮೇಲೆ ಮಡಲು ಹಾಕಲಾಗಿತ್ತು. ಆ ಮಡಲಿಗೆ ಬೆಂಕಿ ಹಚ್ಚಲಾಗಿದೆ. ಸಾರ್ವಜನಿಕರು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದಾರೆ. ಗುಡಿಗೆ ಹೆಚ್ಚಿನ ಹಾನಿಯೇನೂ ಸಂಭವಿಸಿಲ್ಲ.

ಆದರೆ, ಕೊರಗಜ್ಜನ ಗುಡಿಗೆ ಬೆಂಕಿ ಹಚ್ಚುವಷ್ಟು ದಾರ್ಷ್ಯ ತೋರಿಸಿರುವುದು ತೀವ್ರ ಪ್ರತಿರೋಧಕ್ಕೆ ಕಾರಣವಾಗಿದೆ. ಆತನ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸ್ವಾಮಿ ಕೊರಗಜ್ಜ ಸಮಿತಿ ಬೆಂಕಿ ಹಚ್ಚಿದವನ ವಿರುದ್ಧ ಕ್ರಮ ಕೈಗೊಳ್ಳಬೇಕು, ಅದೇ ಜಾಗದಲ್ಲಿ ಆರಾಧನೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದೆ.

ಕೊರಗಜ್ಜ ದೈವ ತುಳುನಾಡಿನಲ್ಲಿ ಭಾರಿ ಜನಪ್ರಿಯ ಕಾರಣಿಕ ದೈವವಾಗಿದ್ದು, ಲಕ್ಷಾಂತರ ಭಕ್ತರು ನಂಬುತ್ತಾರೆ. ಕೆಲವು ವರ್ಷಗಳ ಹಿಂದಿನವರೆಗೆ ಕರಾವಳಿಗೆ ಸೀಮಿತವಾಗಿದ್ದ ಈ ದೈವದ ಕಾರಣಿಕ ಈಗ ರಾಜ್ಯ ಮಾತ್ರವಲ್ಲ, ರಾಷ್ಟ್ರಾದ್ಯಂತ ಹರಡಿದೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು, ಉದ್ಯಮಿಗಳು, ಸಿನಿಮಾ ತಾರೆಯರು ಕೊರಗಜ್ಜನ ಗುಡಿಗೆ ಬರುತ್ತಿದ್ದಾರೆ. ಆದರೆ, ಕೆಲವರು ಸಣ್ಣ ಬುದ್ಧಿಗಳ ಮೂಲಕ ಕೊರಗಜ್ಜನ ಗುಡಿಯ ವಿಚಾರದಲ್ಲಿ ಜಗಳವಾಡುತ್ತಾರೆ ಎಂದು ಸ್ಥಳೀಯರೊಬ್ಬರು ಹೇಳಿದರು.

ಇದನ್ನೂ ಓದಿ: Rachita Ram: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ; ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ

Exit mobile version