ಮೈಸೂರು: ತನ್ನ ಲವ್ವರ್ಗೆ ಸಂದೇಶ ಕಳಿಸಿದ ಸ್ನೇಹಿತನಿಗೆ ಯುವಕನೊಬ್ಬ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಹುಡುಗನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೇಯಸ್ ಎಂಬಾತ ಆರೋಪಿ ಯುವಕನಾಗಿದ್ದು, ಈತನಿಂದ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ ಯುವಕ ಶಿವಕುಮಾರ್.
ಶ್ರೇಯಸ್ ಮತ್ತು ಶಿವಕುಮಾರ್ ಇಬ್ಬರೂ ಮೈಸೂರಿನ ಜನತಾನಗರದಲ್ಲಿ ಒಂದೇ ಬಾಡಿಗೆ ರೂಮ್ನಲ್ಲಿ ವಾಸವಾಗಿದ್ದರು. ಶ್ರೇಯಸ್ ಪ್ರೀತಿಸುತ್ತಿದ್ದ ಯುವತಿಗೆ ಶಿವಕುಮಾರ್ ಸಂದೇಶ ಕಳಿಸುತ್ತಿದ್ದ. ಆಕೆಯೂ ಪ್ರತಿಯಾಗಿ ಮೆಸೇಜ್ ಮಾಡುತ್ತಿದ್ದಳು. ಈ ವಿಚಾರ ಶ್ರೇಯಸ್ಗೆ ಗೊತ್ತಾಗಿ ಶಿವಕುಮಾರ್ ಜತೆ ಜಗಳ ಮಾಡಿದ್ದ. ತಾನು ಪ್ರೀತಿಸುತ್ತಿರುವ ಹುಡುಗಿಗೆ ನೀನ್ಯಾಕೆ ಮೆಸೇಜ್ ಮಾಡೋದು? ಅವಳೊಂದಿಗೆ ಚಾಟ್ ಮಾಡಬೇಡ ಎಂದು ಶಿವಕುಮಾರ್ಗೆ ತಾಕೀತು ಮಾಡಿದ್ದ. ಹಾಗಿದ್ದಾಗ್ಯೂ ಶಿವಕುಮಾರ್ ಮೆಸೇಜ್ ಮಾಡುವುದನ್ನ ಮುಂದುವರಿಸಿದ್ದ. ನಿನ್ನೆ ಕೂಡ ನಂಜನಗೂಡು ರಸ್ತೆ ಬಳಿ ಶ್ರೇಯಸ್ ಮತ್ತು ಶಿವಕುಮಾರ್ ಇದೇ ವಿಷಯಕ್ಕೆ ಜಗಳ ಮಾಡಿಕೊಂಡಿದ್ದರು. ಇದೇ ವೇಳೆ ಶಿವಕುಮಾರ್ಗೆ ಶ್ರೇಯಸ್ ಚಾಕುವಿನಿಂದ ಇರಿದಿದ್ದಾನೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಜೈಲಿಂದ ಹೊರಬರುತ್ತಿದ್ದಂತೆ ಹತ್ಯೆಯಾದ ರೌಡಿಶೀಟರ್; ಸಿಸಿಟಿವಿಯಲ್ಲಿ ದೃಶ್ಯ ಸೆರೆ, 8ಮಂದಿ ಶರಣು
ಕಲಬುರಗಿಯಲ್ಲಿ ತಮ್ಮನ ಹತ್ಯೆ ಮಾಡಿದ ಅಣ್ಣ
ಇನ್ನು ಕಲಬುರಗಿಯಲ್ಲಿ ಅಣ್ಣನೊಬ್ಬ ತನ್ನ ತಮ್ಮನನ್ನೇ ಕೊಂದು ಹಾಕಿದ್ದಾನೆ. ಪಾಳಾ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಅಣ್ಣ ಭೀಮಾಶಂಕರ್ ಮದ್ಯವ್ಯಸನಿಯಾಗಿದ್ದ. ಆದರೆ ಕೈಯಲ್ಲಿ ಹಣ ಇರುತ್ತಿರಲಿಲ್ಲ. ತಮ್ಮ ಕಲ್ಯಾಣಿ ಹೆಕ್ಕಿ ಬಳಿ ಹೋಗಿ ಕುಡಿಯಲು ಹಣ ಕೇಳಿದ್ದಾನೆ. ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾಂಪೌಂಡರ್ ಕೆಲಸ ಮಾಡುತ್ತಿದ್ದ ಕಲ್ಯಾಣಿ ಬಳಿ ಹಣ ಇರುತ್ತದೆ ಎಂದು ಅಣ್ಣ ಭೀಮಾಶಂಕರ್ಗೆ ಗೊತ್ತಿತ್ತು. ಆದರೆ ಕಲ್ಯಾಣಿ ಮದ್ಯಕ್ಕಾಗಿ ಹಣ ಕೊಡಲು ಹಿಂದೇಟು ಹಾಕಿದ್ದಾನೆ. ಇದೇ ಸಿಟ್ಟಿಗೆ ಭೀಮಾಶಂಕರ್ ಈ ಕೃತ್ಯ ಎಸಗಿದ್ದಾನೆ. ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.