ಉಡುಪಿ: ಕಳೆದ ಜುಲೈ ೧೨ರಂದು ಉಡುಪಿ ಜಿಲ್ಲೆಯ ಗಡಿ ಭಾಗವಾದ ಶಿರೂರು ಬಳಿಯ ಹೇನಬೇರು ಎಂಬಲ್ಲಿ ಭಯಾನಕವಾದ ಘಟನೆಯೊಂದು ನಡೆದಿತ್ತು. ಕಾರೊಂದು ಧಗಧಗನೆ ಉರಿದು ಭಸ್ಮವಾಗಿತ್ತು. ಅದರಲ್ಲೊಬ್ಬ ವ್ಯಕ್ತಿ ಸುಟ್ಟು ಕರಕಲಾಗಿದ್ದ. ಕಾರಿನ ನಂಬರ್ ಗಮನಿಸಿ ಸತ್ತು ಹೋಗಿರುವವನು ಸದಾನಂದ ಸೇರಿಗಾರ್ ಎಂಬಾತ ಎಂದು ಅಂದಾಜಿಸಲಾಗಿತ್ತು. ಆದರೆ, ಬಳಿಕ ತನಿಖೆ ನಡೆಸಿದಾಗ ಗೊತ್ತಾಗಿದ್ದು ಬೇರೆಯೇ ಕಥೆ. ಸದಾನಂದ ಶೇರಿಗಾರ್ ತಾನೇ ಸತ್ತಿದ್ದಂತೆ ಬಿಂಬಿಸಲು ತನ್ನದೇ ಕಾರಿಗೆ ಬೆಂಕಿ ಕೊಟ್ಟಿದ್ದ. ಆದರೆ, ಕೊಂದಿದ್ದು ಮಾತ್ರ ಬೇರೊಬ್ಬನನ್ನು! ಒಬ್ಬ ಅಮಾಯಕನಿಗೆ ಚೆನ್ನಾಗಿ ಮದ್ಯ ಕುಡಿಸಿ ಅವನನ್ನು ಕಾರಿನೊಳಗೆ ಬಿಟ್ಟು ಬೆಂಕಿ ಹಚ್ಚಿ ತಾನು ಪರಾರಿಯಾಗಿದ್ದ!
ಮುಂದೆ ಎರಡೇ ದಿನದಲ್ಲಿ ಸದಾನಂದ್ ಶೇರಿಗಾರ್‌ನನ್ನು ಆತನ ಪ್ರೇಯಸಿ ಮತ್ತು ಇನ್ನೊಬ್ಬನ ಜತೆ ಬಂಧಿಸಲಾಗಿತ್ತು. ಹಾಗೆ ಬಂಧನಕ್ಕೆ ಒಳಗಾದ ಸದಾನಂದ ಶೇರಿಗಾರ್ ಉಡುಪಿ ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಜೀವನ ಕಳೆಯುತ್ತಿದ್ದ. ಭಾನುವಾರ ಮುಂಜಾನೆ ಐದು ಗಂಟೆಯ ಹೊತ್ತಿಗೆ ಆತ ತನ್ನದೇ ಪಂಚೆಯನ್ನು ನೇಣಾಗಿಸಿಕೊಂಡು ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾನೆ. ಸುಮಾರು ೨೦ ಮಂದಿ ಕೈದಿಗಳಿರುವ ಕೊಠಡಿಯಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸಹ ಕೈದಿಗಳಿಗೆ ವಿಷಯ ತಿಳಿಯುತ್ತಿದ್ದಂತೆಯೇ ಅವರು ಕುಣಿಕೆಯಿಂದ ಬಿಡಿಸಿದರು. ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲಿ ಸದಾನಂದ ಸಾವು ಕಂಡಿದ್ದಾನೆ.
ಕಾರ್ಕಳ ಮೂಲದ ಸದಾನಂದ ಶೇರಿಗಾರ್ ಮೂಲತಃ ಒಬ್ಬ ಸರ್ವೇಯರ್ ಆಗಿದ್ದ. ಒಂದು ಫೋರ್ಜರಿ ಪ್ರಕರಣದಲ್ಲಿ ಪೊಲೀಸರು ಆತನನ್ನು ಹುಡುಕುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆವತ್ತು ಆತ ಒಂದು ದುಬಾರಿ ಕಾರ್ಯಾಚರಣೆಗೆ ಇಳಿದು ಅಮಾಯಕನ ಪ್ರಾಣವನ್ನು ತೆಗೆದಿದ್ದ. ಇದು ಕುರುಪ್ ಎಂಬ ಸಿನಿಮಾ ಮಾದರಿಯಲ್ಲಿ ನಡೆದ ಕೊಲೆ ಎಂದು ಭಾರಿ ಸುದ್ದಿಯಾಗಿತ್ತು.
ಹಾಗಿದ್ದರೆ ಆವತ್ತು ಆಗಿದ್ದೇನು? ಕೊಲೆಯಾದವನು ಯಾರು?
ಸದಾನಂದ ಶೇರಿಗಾರ್ ಕಾರ್ಕಳ ತಾಲೂಕಿನ ಮಾಳ ಮೂಲದವನು. ಆತ 2013 ರಿಂದ 2018ರ ತನಕ ಖಾಸಗಿ ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದ. ಕೆಲವು ವರ್ಷದ ಹಿಂದೆ ಫೋರ್ಜರಿ ಸರ್ವೇ ಮಾಡಿ ಸಿಕ್ಕಿಬಿದ್ದಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇನ್ನೇನು ಕೆಲವು ದಿನದಲ್ಲಿ ತೀರ್ಪು ಬರಬೇಕಿತ್ತು. ಆಗ ತಾನು ಬಂಧನಕ್ಕೆ ಒಳಗಾಗಬಹುದು ಎಂಬ ಭಯ ಅವನನ್ನು ಕಾಡಲಾರಂಭಿಸಿತು. ಜೈಲು ಶಿಕ್ಷೆಯಾದರೆ ಜೈಲಿನಲ್ಲೇ ಕಾಲ ಕಳೆಯಬೇಕಲ್ಲ ಎಂದು ಕಂಪಿಸಿ ಹೋದ.
ಆಗ ಅವನಿಗೆ ನೆನಪಾಗಿದ್ದೇ ತಾನು ಹಿಂದೆ ನೋಡಿದ್ದ ಮಲಯಾಳಂನ ಕುರುಪ್ ಎಂಬ ಸಿನಿಮಾ. ಆ ಸಿನಿಮಾದಲ್ಲಿ ತನ್ನ ಹೆಸರಿನಲ್ಲಿ ಬೇರೆಯವರನ್ನು ಸಾಯಿಸಿ, ಶಿಕ್ಷೆಯ ಭೀತಿಯಲ್ಲಿಯಲ್ಲಿದ್ದ ವ್ಯಕ್ತಿಯೊಬ್ಬ ತಲೆಮರೆಸಿಕೊಳ್ಳುವುದು ಮುಖ್ಯಾಂಶ.
ಒಂದು ಕಾರು ಬೆಂಕಿಯಲ್ಲಿ ಸುಟ್ಟುಹೋಗುವಂತೆ ಮಾಡುವುದು. ಅದರಲ್ಲಿ ತಾನೇ ಸತ್ತು ಹೋದಂತೆ ಮಾಡುವುದು. ಆದರೆ ತಾನು ಮಾತ್ರ ತಪ್ಪಿಸಿಕೊಂಡು ಹೋಗಿ ತಲೆಮರೆಸಿಕೊಂಡು ಬದುಕುವುದು ಅವನ ಪ್ಲ್ಯಾನ್ ಆಗಿತ್ತು. ಆದರೆ, ಕಾರಿನಲ್ಲಿ ಸತ್ತು ಹೋಗಲು ತನ್ನಂತೆಯೇ ಇರುವ ಒಬ್ಬ ಅಮಾಯಕ ಬೇಕಲ್ಲ! ಅವನನ್ನು ಹುಡುಕಿಕೊಟ್ಟಿದ್ದು ಇದೇ ಸದಾನಂದ ಶೇರಿಗಾರನ ಪ್ರೇಯಸಿ ಶಿಲ್ಪಾ!
ಕರಾವಳಿ ಕಂಡು ಕೇಳರಿಯದ ಒಂದು ಭಯಾನಕ ಘಟನೆ ಆವತ್ತು ನಡೆದೇ ಹೋಯಿತು. ಜುಲೈ ೧೨ರಂದು ಬೈಂದೂರು ತಾಲೂಕಿನ ಒತ್ತಿನೆಣೆಯ ಹೇನಬೇರು ಎಂಬಲ್ಲಿ ಬೆಳ್ಳಂಬೆಳಗ್ಗೆ ಕಾರೊಂದು ಪ್ಲ್ಯಾನ್‌ನಂತೆ ಸುಟ್ಟು ಹೋಯಿತು. ಸುಟ್ಟು ಕರಕಲಾದ ಕಾರಿನಿಂದ ಬರುತ್ತಿದ್ದ ಹೊಗೆಗೆ ಒಬ್ಬ ವ್ಯಕ್ತಿ ಬಲಿಯಾದ. ವಾಹನದ ಸಂಖ್ಯೆ ಆಧಾರದಲ್ಲಿ ಎಲ್ಲರೂ ಸತ್ತವನು ಸದಾನಂದ ಶೇರಿಗಾರ್ ಅಂದುಕೊಂಡರು. ಆದರೆ, ಬಲಿಯಾದ ಅಮಾಯಕನ ಆನಂದ ದೇವಾಡಿಗ. ಅವನನ್ನು ಸೆಟ್ ಮಾಡಿದ್ದು ಶಿಲ್ಪಾ ಸಾಲ್ಯಾನ್.
ಶಿಲ್ಪಾ ಸಾಲ್ಯಾನ್ ಮತ್ತು ಸದಾನಂದ ಶೇರಿಗಾರ್‌ನಿಗೆ ಹಿಂದಿನಿಂದಲೂ ಪರಿಚಯ ಮತ್ತು ಪ್ರೇಮ. ಸದಾನಂದ ತನ್ನ ಖತರ್ನಾಕ್ ಐಡಿಯಾವನ್ನು ಪ್ರೇಯಸಿ ಮುಂದೆ ಹೇಳಿಕೊಂಡ. ಆಕೆ ಅವನಿಗಿಂತಲೂ ಭಯಾನಕ ಕ್ರಿಮಿನಲ್. ಆಕೆ ತನ್ನ ಪರಿಚಯದ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಆನಂದ ದೇವಾಡಿಗ ಎಂಬಾತನನ್ನು ಸೆಟ್ ಮಾಡೇಬಿಟ್ಟಿದ್ದಳು.
ಜುಲೈ 1೧ರಂದು ಈಕೆ ಆನಂದ ದೇವಾಡಿಗನನ್ನು ಮನೆಗೆ ಕರೆಸಿ ನಿದ್ರೆ ಮಾತ್ರೆ ಬೆರೆಸಿದ ಮದ್ಯ ಕುಡಿಸಿದಳು. ಆತ ಪ್ರಜ್ಞೆ ಕಳೆದುಕೊಂಡ ಬಳಿಕ ಹಳೆ ಮಾಡೆಲ್ ಫೋರ್ಡ್ ಐಕಾನ್ ಕಾರಿನಲ್ಲಿ ಕುಳ್ಳಿರಿಸಿಕೊಂಡು ರಾತ್ರಿ ೧೧.೩೦ರ ಹೊತ್ತಿಗೆ ಹೇನಬೇರುವಿನ ನಿರ್ಜನ ಜಾಗ ತಲುಪಿದರು. ರಾತ್ರಿ 1.15ರ ಹೊತ್ತಿಗೆ ಮತ್ತೆ ಮದ್ಯ ಕುಡಿಸಿದರು. ಬಳಿಕ ಮೇಸ್ತ್ರಿ ಆನಂದ ದೇವಾಡಿಗನನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕುಳ್ಳಿರಿಸಿ ಕಾರಿಗೆ ಬೆಂಕಿ ಹಚ್ಚಿ ಎಸ್ಕೇಪ್ ಆದರು.
ಬೆಳಗ್ಗೆ ಹೊರಜಗತ್ತಿಗೆ ಈ ಘಟನೆ ಗೊತ್ತಾಯಿತು. ಸುಟ್ಟು ಹೋದ ಕಾರಿನ ಚಾಸ್ಸಿ ನಂಬರ್ ಅನ್ನು ಫೊರೆನ್ಸಿಕ್ ತಜ್ಞರ ಸಹಾಯದಿಂದ ಸ್ವಚ್ಛಗೊಳಿಸಿ ಚಾಸ್ಸಿ ನಂಬರ್ ಮೂಲಕ ಮಾಲೀಕನನ್ನು ಪತ್ತೆ ಹಚ್ಚಿದಾಗ, ಕಾರು ಸದಾನಂದ ಶೇರೆಗಾರ್‌ಗೆ ಸೇರಿದ್ದು ಎಂದು ಗೊತ್ತಾಗಿದೆ. ಆತನೇ ಸತ್ತಿದ್ದಾನೆ ಎಂದೇ ಎಲ್ಲರೂ ಭಾವಿಸಿದರು. ಆದರೆ, ಈ ಕಾರು ಉಡುಪಿ ಕಡೆಯಿಂದ ಬಂದಿದ್ದು, ಉಡುಪಿ ತಾಲೂಕಿನ ಸಾಸ್ತಾನ ಟೋಲ್‌ಗೇಟ್‌ನಲ್ಲಿ ಮಹಿಳೆಯೊಬ್ಬರು ಟೋಲ್ ಹಣ ಕಟ್ಟಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ, ಇದರ ಹಿಂದೆ ಒಂದು ಸಂಚಿರುವುದನ್ನು ಪೊಲೀಸರು ಸಂಶಯಿಸಿದ್ದರು.
ಈ ನಡುವೆ, ಭೀಕರ ಕೃತ್ಯ ಎಸಗಿದ ಸದಾನಂದ ಹಾಗೂ ಶಿಲ್ಪಾ ತಲೆಮರೆಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಸ್‌ನಲ್ಲಿ ಹೊರಟಿದ್ದ. ಜುಲೈ ೧೪ರಂದು ಪೊಲೀಸರು ಆ ಬಸ್ಸನ್ನು ತಡೆದು ಹಿಡಿದೇ ಬಿಟ್ಟರು. ಇವರಿಗೆ ಸಹಾಯ ಮಾಡಿದ ಇನ್ನೂ ಇಬ್ಬರು ಜೈಲು ಸೇರಿದರು. ಈಗ ಸದಾನಂದ ಶೇರಿಗಾರ್ ಸಾವಿಗೆ ಶರಣಾಗಿದ್ದಾನೆ.
ಇದನ್ನೂ ಓದಿ | Murder Case | ಅಳಿಯನ ಜತೆಗೆ ಅಕ್ರಮ ಸಂಬಂಧ; ಗಂಡನನ್ನೇ ಹತ್ಯೆ ಮಾಡಿಸಿದಳು!