ವಿಜಯಪುರ: ಗಂಡ-ಹೆಂಡತಿ ಜಗಳ ಮಾಡುತ್ತಿರುವಾಗ ಮೂರನೇಯವರು ಮಧ್ಯ ಪ್ರವೇಶಿಸದೆ ಇದ್ದರೆ ಒಳಿತು ಎನ್ನುವ ನಾಣ್ಣುಡಿಯೇ ಇದೆ. ಜಗಳವಾಡುವ ಗಂಡ-ಹೆಂಡತಿ ನಾಳೆ ಒಂದಾಗಬಹುದು. ಹಾಗಿರುವಾಗ ಮಧ್ಯ ಪ್ರವೇಶಿಸಿದ ವ್ಯಕ್ತಿಯೇ ಅನ್ಯಾಯವಾಗಿ ದೂಷಣೆಗೆ ಒಳಗಾಗಬಹುದು ಎನ್ನುವುದು ಈ ನಾಣ್ಣುಡಿಯ ತಾತ್ಪರ್ಯ. ಆದರೆ, ವಿಜಾಪುರದಲ್ಲಿ ನಡೆದಿರುವ ಈ ಘಟನೆ ಗಂಡ-ಹೆಂಡತಿ ಜಗಳವನ್ನು ತಡೆಯಲು ಹೋದರೆ ಪ್ರಾಣವೇ ಹೋದೀತು ಎಂಬ ಎಚ್ಚರಿಕೆಯನ್ನು ನೀಡಿದೆ.
ವಿಜಯಪುರ ನಗರದ ಗುರುಪಾದೇಶ್ವರ ನಗರದಲ್ಲಿ ಗಂಡ-ಹೆಂಡತಿಯ ಜಗಳ ಬಿಡಿಸಲು ಹೋದ ಪರಶುರಾಮ ಅಬಟೇರಿ ಎಂಬ ೩೦ ವರ್ಷದ ಯುವಕನೇ ಕೊಲೆಯಾಗಿ ಹೋಗಿದ್ದಾನೆ.
ಏನಾಯಿತು?
ಪರಶುರಾಮ ಅಬಟೇರಿ ಮೂಲತಃ ಬಾಗಲಕೋಟೆ ಜಿಲ್ಲೆಯ ಅಚನೂರ ಗ್ರಾಮದ ನಿವಾಸಿ. ವಿಜಯಪುರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ವಿಜಯಪುರ ನಗರದ ಗುರುಪಾದೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಕೆಇಬಿಯ ನಿವೃತ್ತ ನೌಕರ ಇಜೇರಿ ಈ ಮನೆಯ ಮಾಲೀಕರು.
ಶುಕ್ರವಾರ ಮನೆಯ ಮಾಲೀಕನ ಮಗ ಮತ್ತು ಅವನ ಹೆಂಡತಿ ನಡುವೆ ಜಗಳ ತಾರಕಕ್ಕೇರಿತ್ತು. ಆಕೆಯ ಮನೆಯವರು ಕೂಡಾ ಬಂದಿದ್ದರು. ಜಗಳ ತಾರಕಕ್ಕೇರುತ್ತಿರುವುದನ್ನು ಗಮನಿಸಿದ ಪರಶುರಾಮ ಸಮಾಧಾನ ಹೇಳಿ ಪರಿಸ್ಥಿತಿ ನಿಯಂತ್ರಣ ಮಾಡೋಣ, ಬುದ್ಧಿ ಹೇಳೋಣ ಎಂದು ಅಲ್ಲಿಗೆ ಹೋಗಿದ್ದರು. ಆದರೆ, ಗಂಡ-ಹೆಂಡತಿ ಜಗಳ ಬಿಡಿಸಲು ಬಂದ ಪರಶುರಾಮನ ಮೇಲೆಯೇ ತಿರುಗಿಬಿತ್ತು. ಈ ಮಾತಿಗೆ ಮಾತು ವಿಕೋಪಕ್ಕೆ ಹೋಗಿ ಜಗಳ ಬಿಡಿಸಲು ಬಂದ ಪರಶುರಾಮನ ಮೇಲೆಯೇ ಮಾಲೀಕನ ಮಗನ ಹೆಂಡತಿ ಕಡೆಯವರು ಚಾಕುವಿನಿಂದ ಇರಿದರು.
ಜಗಳದ ಮೂಲ ಕಾರಣ ಏನು? ಅದು ಪರಶುರಾಮನ ಮೇಲೆ ತಿರುಗಿದ್ದು ಹೇಗೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಜಲನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ ಕಳ್ಳನ ಕೊಲೆ| ಕಳ್ಳತನ ಮಾಡಲು ಬಂದವನನ್ನು ಕಾದು ನಿಂತು ಹೊಡೆದರು, ಅವನು ಸತ್ತೇಹೋದ!