Site icon Vistara News

Mandya Bandh | ಕಬ್ಬು, ಭತ್ತ, ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಗಾಗಿ ಒತ್ತಾಯಿಸಿ ಮಂಡ್ಯ ಬಂದ್‌ ಯಶಸ್ವಿ; ರೈತರ ಅರೆಬೆತ್ತಲೆ ಪ್ರತಿಭಟನೆ

mandya protest bandh ಮಂಡ್ಯ ಬಂದ್‌ ರೈತರ ಪ್ರತಿಭಟನೆ ಕಬ್ಬು, ಭತ್ತ, ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ

ಮಂಡ್ಯ: ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆ ಹಾಗೂ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಮಂಡ್ಯದಲ್ಲಿ ಕಳೆದ 4೩ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರೈತರು ಸೋಮವಾರ ಬಂದ್‌ (Mandya Bandh) ಮಾಡಿ ಆಕ್ರೋಶ ಹೊರಹಾಕಿದರು. ಇದೇ ವೇಳೆ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಲಾಗಿದೆ. ಅಲ್ಲದೆ, ಕೆಲವು ರೈತರು ಅರೆಬೆತ್ತಲೆ ಪ್ರತಿಭಟನೆ ಮಾಡಿ ಅಸಮಾಧಾನವನ್ನು ಹೊರಹಾಕಿದ್ದಾರೆ.

ಮಂಡ್ಯ ನಗರ ಬಂದ್ ಹಿನ್ನೆಲೆಯಲ್ಲಿ ರಸ್ತೆಗಿಳಿದ ಅನ್ನದಾತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದರು. ಮಂಡ್ಯದ ಸಂಜಯ್ ವೃತ್ತದಲ್ಲಿ ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದ್ದು, ಮಾನವ ಸರಪಳಿಯನ್ನು ರಚಿಸುವ ಮೂಲಕ ವಾಹನಗಳಿಗೆ ನಿರ್ಬಂಧ ವಿಧಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಬ್ಬು ತುಂಬಿದ ಟ್ರ್ಯಾಕ್ಟರ್‌ನೊಂದಿಗೆ ರಸ್ತೆಗಿಳಿದ ರೈತರು, ಕಬ್ಬು ಬೆಳೆಗೆ 4500 ರೂಪಾಯಿ ಬೆಲೆ ನಿಗದಿ ಹಾಗೂ ಕರಾವಳಿ ಭಾಗದ ಭತ್ತ ಬೆಳೆಗಾರರಿಗೆ ನೀಡುತ್ತಿರುವ 500 ರೂಪಾಯಿ ಬೆಂಬಲ ಬೆಲೆಯನ್ನು ಎಲ್ಲ ರೈತರಿಗೂ ನೀಡಬೇಕು. ಹಾಲಿಗೆ ರೂ.40 ದರವನ್ನು ನಿಗದಿಪಡಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ | Mandya Bandh | ರೈತರ ಸಮಸ್ಯೆ ಬಗ್ಗೆ ಸದನದಲ್ಲಿ ಚರ್ಚೆ; ಮಂಡ್ಯ ಬಂದ್‌ಗೆ ದಿನೇಶ್ ಗೂಳಿಗೌಡ, ಮಧು ಮಾದೇಗೌಡ ಬೆಂಬಲ

ವಿದ್ಯಾರ್ಥಿ-ವಿದ್ಯಾರ್ಥಿನಿಯರು, ವಿವಿಧ ಸಂಘಟನೆಯವರು ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಸ್ಥಳದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಸಂಜಯ್ ವೃತ್ತದಲ್ಲೇ ಧರಣಿ ಕುಳಿತ ರೈತರು ಹಾಗೂ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆದಿದ್ದರಿಂದ ಸಾಕಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸಂಚಾರ ಮಾರ್ಗವನ್ನು ಬದಲಿಸಿದ್ದಾರೆ.

ರೈತರ ಅರೆಬೆತ್ತಲೆ ಪ್ರತಿಭಟನೆ
ಕಬ್ಬು ತುಂಬಿದ ಲಾರಿ ಹಾಗೂ ಟ್ರ್ಯಾಕ್ಟರ್‌ ಮೇಲೆ ಅರೆಬೆತ್ತಲೆಯಾಗಿ ನಿಂತ ಕೆಲವು ರೈತರು, ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದರು. ಕಬ್ಬು ಬೆಳೆಗೆ ಹಾಲಿ 2821 ರೂಪಾಯಿ ಬೆಲೆ ಇದ್ದು, ಇದನ್ನು 4500 ರೂಪಾಯಿಗೆ ನಿಗದಿ‌ ಮಾಡಬೇಕು. ಸದ್ಯ ಪ್ರತಿ ಲೀಟರ್‌ ಹಾಲಿಗೆ ೨೯ ರೂಪಾಯಿ ಇದ್ದು, ಅದನ್ನು ೪೦ ರೂಪಾಯಿಗೆ ಏರಿಕೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ಪ್ರತಿಭಟನೆ ಅಂತ್ಯ
ಸಂಜಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿಗೆ ತೆರಳಿದ ರೈತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದರು.

ಬೆಳಗ್ಗೆ ಬೈಕ್‌ ರ‍್ಯಾಲಿ
ಸೋಮವಾರ ಬೆಳಗ್ಗೆ ರೈತರು ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ಮಂಡ್ಯ ಬಂದ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿದ್ದು, ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದರು. ಮಧ್ಯಾಹ್ನದವರೆಗೆ ನಮಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದ್ದರು. ಬಂದ್‌ಗೆ ವರ್ತಕರು, ಹೋಟೆಲ್ ಮಾಲೀಕರು, ಆಟೋ, ಬಸ್ ಮಾಲೀಕರು, ಪ್ರಗತಿಪರರು, ದಲಿತ ಸಂಘಟನೆಗಳು, ಕನ್ನಡ ಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳವರು ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ | Border Dispute | ಎಂಇಎಸ್ ಮಹಾಮೇಳಾವ್‌‌ಗೆ ರಾಜ್ಯ ಸರ್ಕಾರ ಬ್ರೇಕ್; ನಿಪ್ಪಾಣಿ ಗಡಿಗೆ ಬಂದಿದ್ದ ಮಹಾ ನಾಯಕರ ಹಿಮ್ಮೆಟ್ಟಿದ ಪೊಲೀಸರು

Exit mobile version