Site icon Vistara News

Mandya Ramesh: ಮಂಡ್ಯ ರಮೇಶ್‌ ಮೈಸೂರು ಸ್ವಚ್ಛತಾ ರಾಯಭಾರಿ; ನಂ. 1 ಸ್ಥಾನಕ್ಕೆ ಕೈ ಜೋಡಿಸಿ ಎಂದು ಮನವಿ!

Mandya Ramesh

ಬೆಂಗಳೂರು: 2023ನೇ ಸಾಲಿನʻಸ್ವಚ್ಛ ಸರ್ವೇಕ್ಷಣಾ ಅಭಿಯಾನಕ್ಕೆʼ (Swachh Survekshan 2023) ರಾಯಭಾರಿಯಾಗಿ ರಂಗಕರ್ಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ (Mandya Ramesh) ನಿಯೋಜನೆಗೊಂಡಿದ್ದಾರೆ. ಸತತ ಎರಡು ಬಾರಿ ದೇಶದ ನಂಬರ್ 1 ಸ್ವಚ್ಛತಾ ನಗರಿ ಎನ್ನುವ ಹಿರಿಮೆ ಮೈಸೂರಿಗೆ ಸಿಕ್ಕಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಸ್ಥಾನ ಮೈಸೂರಿಗೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಟ ಮಂಡ್ಯ ರಮೇಶ್ ಅವರನ್ನು ಸ್ವಚ್ಛತಾ ರಾಯಭಾರಿ ಆಗಲು ಆಹ್ವಾನ ನೀಡಲಾಗಿತ್ತು. ಪಾಲಿಕೆಯ ಆಹ್ವಾನವನ್ನು ಮಂಡ್ಯ ರಮೇಶ್ ಖುಷಿಯಿಂದ ಒಪ್ಪಿಕೊಂಡಿದ್ದು, ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಅಷ್ಟೇ ಅಲ್ಲದೇ ಮೈಸೂರಿನ ಮತ್ತಷ್ಟು ಅಭಿವೃದ್ಧಿಗೆ ನೆರವಾಗಿ ಎಂದು ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ.

ಮೈಸೂರು ನಗರ 2015, 2016ರಲ್ಲಿ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ, ನಂತರದ ವರ್ಷಗಳಲ್ಲಿ ಮೈಸೂರಿಗೆ ಮೊದಲ ಸ್ಥಾನ ಸಿಕ್ಕಿಲ್ಲ. 2021ನೇ ಸಾಲಿನ ಸ್ವಚ್ಛ ನಗರಗಳ ವಿಭಾಗದಲ್ಲಿ 11ನೇ ಸ್ಥಾನಕ್ಕೆ ಜಾರಿತ್ತು. 2022ರಲ್ಲಿ ಸ್ವಚ್ಛ ನಗರ ಸ್ಥಾನದಲ್ಲಿ 8ನೇ ಸ್ಥಾನ ಸಿಕ್ಕಿತ್ತು. ಈಗ ಮತ್ತೆ ನಂಬರ್ 1 ಸ್ಥಾನ ಪಡೆಯಲು ಮೈಸೂರು ಪಾಲಿಕೆ ಪ್ರಯತ್ನ ನಡೆಸುತ್ತಿದೆ.

ಇದನ್ನೂ ಓದಿ: Mysore Dasara : ನಾದಬ್ರಹ್ಮ ಹಂಸಲೇಖ ಈ ಬಾರಿಯ ಮೈಸೂರು ದಸರಾ ಉದ್ಘಾಟಕ; ಸಿಎಂ ಸಿದ್ದರಾಮಯ್ಯ ಘೋಷಣೆ

ಮಂಡ್ಯ ರಮೇಶ್‌ ಪೋಸ್ಟ್‌

ಈ ಬಗ್ಗೆ ಮಂಡ್ಯ ರಮೇಶ್‌ ಮಾತನಾಡಿ ʻʻಮೈಸೂರು ಎಂದರೆ ಎಲ್ಲರಿಗೂ ಇಷ್ಟ. ಏಕೆಂದರೆ ಮೈಸೂರಿಗೆ ಇರುವಂತಹ ಪರಂಪರೆ, ಅದಕ್ಕಿರುವಂತಹ ಸ್ವಚ್ಛ ಸುಂದರ ಆಕರ್ಷಕ ಕಲಾತ್ಮಕವಾದಂತಹ ಗುಣದಿಂದಾಗಿ, ಅಲ್ಲಿರುವಂತಹ ಆಕರ್ಷಕ ಗುಣ ಎಲ್ಲರಿಗೂ ಇಷ್ಟ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮೈಸೂರಿನ ಹೆಸರು ಹೇಳಿದರೆ ಒಮ್ಮೆ ಹುಬ್ಬೇರಿಸುತ್ತಾರೆ. ಎಲ್ಲರೂ ಮೈಸೂರು ನಗರಕ್ಕೆ ಸ್ವಚ್ಛ ನಗರ ಎಂಬ ಮತ ನೀಡಿ. ಮತ್ತೆ ಮೈಸೂರನ್ನು ಮೊದಲ ಸಾಲಿನಲ್ಲಿ ನಿಲ್ಲಿಸಲು ನಾಗರಿಕ ಪ್ರತಿಕ್ರಿಯೆಯ ಪ್ರಕ್ರಿಯೆ ಭಾಗವಾಗಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಉತ್ತರಿಸಿ, ಅಭಿಪ್ರಾಯ ಸಲ್ಲಿಸಿ. ಮೈಸೂರಿನ ಮತ್ತಷ್ಟು ಅಭಿವೃದ್ಧಿಗೆ ನೆರವಾಗಿʼʼಎಂದು ಕೇಳಿಕೊಂಡಿದ್ದಾರೆ.

ಮಂಡ್ಯ ರಮೇಶ್‌ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಟಿವಿ ಶೋಗಳಲ್ಲಿ ಪ್ರಖ್ಯಾತಿ ಜತೆಗೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತಮ್ಮದೇ ನಟನಾ ಶಾಲೆಯನ್ನು ಕೂಡ ಅವರು ಮುನ್ನಡೆಸುತ್ತಿದ್ದಾರೆ. ಸಾವಿರಾರು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರನ್ನು ತಯಾರು ಮಾಡಿ, ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.

Exit mobile version