ಮಂಡ್ಯ: ಅಮೆರಿಕ ಅಧ್ಯಕ್ಷರ ವೈದ್ಯಕೀಯ ಸಲಹೆಗಾರ ಡಾ. ವಿವೇಕ್ ಮೂರ್ತಿ ಅವರ ತಂದೆ, ಅನಿವಾಸಿ ಭಾರತೀಯರಾದ ಡಾ. ಲಕ್ಷ್ಮಿನರಸಿಂಹ ಮೂರ್ತಿ ಹಲ್ಲೇಗೆರೆ ಅವರ ಭೂತಾಯಿ ಟ್ರಸ್ಟ್, ಮಂಡ್ಯದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಮತ್ತು ಧ್ಯಾನ ಕೇಂದ್ರವನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಹೀಗಾಗಿ ಟ್ರಸ್ಟ್‌ಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತದೆ ಎಂದು ಎಂಎಲ್‌ಸಿ ದಿನೇಶ್ ಗೂಳಿಗೌಡ (Dinesh Gooligowda) ಘೋಷಿಸಿದರು.
ಮಂಡ್ಯದ ಕರ್ನಾಟಕ ಸಂಘ, ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ನಾಗರಿಕ ವೇದಿಕೆ ವತಿಯಿಂದ ಮಂಡ್ಯದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಡಾ. ಲಕ್ಷ್ಮಿನರಸಿಂಹ ಮೂರ್ತಿ ಹಲ್ಲೇಗೆರೆ ಅವರನ್ನು ಸನ್ಮಾನಿಸಿ ಮಾತನಾಡಿದರು.
ಇದನ್ನೂ ಓದಿ | Indira Canteen: ಇಂದಿರಾ ಕ್ಯಾಂಟೀನ್ ಊಟದ ದರದಲ್ಲಿ ಹೆಚ್ಚಳ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಡಾ. ಲಕ್ಷ್ಮಿನರಸಿಂಹ ಮೂರ್ತಿ ಹಲ್ಲೇಗೆರೆ ಅವರು ಭೂತಾಯಿ ಟ್ರಸ್ಟ್ ಮೂಲಕ ಮಹತ್ತರ ಸಾಮಾಜಿಕ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ. ಅವರು ಮಂಡ್ಯದಲ್ಲಿ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ 12 ಎಕರೆ ಪ್ರದೇಶದಲ್ಲಿ ಯೋಗ ಮತ್ತು ಧ್ಯಾನ ಕೇಂದ್ರ ಸ್ಥಾಪನೆ ಮಾಡಲು ಮುಂದಾಗಿರುವುದು ಅತ್ಯಂತ ಶ್ಲಾಘನೀಯ. ಅದಕ್ಕೆ ಮಂಡ್ಯ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದಿಂದ ಎಲ್ಲ ಸಹಕಾರವನ್ನು ನೀಡಲು ನಾನು ಬದ್ಧವಾಗಿದ್ದೇನೆ ಭರವಸೆ ನೀಡಿದರು.
ಯೋಗ ಮತ್ತು ಧ್ಯಾನ ಕೇಂದ್ರವನ್ನು ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ. ಎಲ್.ಎನ್.ಮೂರ್ತಿ ಅವರು ಮಂಡ್ಯದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಯೋಜನೆಯ ಶಂಕುಸ್ಥಾಪನೆಯು ಡಿಸೆಂಬರ್‌ನಲ್ಲಿ ನಡೆಯಲಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ಹಾಗೂ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇಂತಹ ಒಂದು ಅಂತಾರಾಷ್ಟ್ರಿಯ ಮಟ್ಟದ ಕೇಂದ್ರವು ನಮ್ಮ ಜಿಲ್ಲೆಯಲ್ಲಿ ಆಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇದಕ್ಕೆ ನಮ್ಮ ಜಿಲ್ಲೆಯ ಜನರು ಸಹ ನೆರವು ಹಾಗೂ ಸಹಕಾರವನ್ನು ಕೊಡಬೇಕು ಎಂದು ಮನವಿ ಮಾಡಿದರು.
ಸಮಾಜ ಸೇವೆ ಮಾಡಲು ಎಲ್ಲರೂ ಮುಂದೆ ಬರುವುದಿಲ್ಲ. ಹಣವಿದ್ದರೂ ಸಹ ಸಮಾಜಕ್ಕೆ ಒಳಿತಾಗುವ ಇಂತಹ ಕಾರ್ಯಕ್ರಮಗಳನ್ನು ಮಾಡಲಾರರು. ತಾಯಿ ಹೃದಯ ಇದ್ದವರು ಮಾತ್ರ ಇಂತಹ ಕಾರ್ಯವನ್ನು ಮಾಡಲು ಸಾಧ್ಯ. ಹುಟ್ಟು ಆಕಸ್ಮಿಕವಾಗಿದ್ದು, ಸಾವು ಎಂಬುವುದು ನಿಶ್ಚಿತವಾಗಿ ಇರುತ್ತದೆ. ಆದರೆ, ಅದು ಯಾವಾಗ? ಹೇಗೆ ಬರುತ್ತದೆ ಎಂದು ಹೇಳುವುದು ಕಷ್ಟ. ಈ ಮಧ್ಯೆ ಸಮಾಜದಲ್ಲಿ ಸಾರ್ಥಕ ಬದುಕನ್ನು ಕಂಡುಕೊಳ್ಳಬೇಕು. ಅಂತಹ ಸಾರ್ಥಕ ಬದುಕು ಡಾ. ಲಕ್ಷ್ಮಿನರಸಿಂಹ ಮೂರ್ತಿ ಅವರ ಕುಟುಂಬದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ | Power point with HPK : ಗ್ಯಾರಂಟಿಗಳಿಂದ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ; ಕೆ.ಜೆ. ಜಾರ್ಜ್ ಪ್ರತಿಪಾದನೆ
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ವೈದ್ಯಕೀಯ ಸಲಹೆಗಾರರಾಗಿ ಡಾ. ಲಕ್ಷ್ಮಿನರಸಿಂಹ ಮೂರ್ತಿ ಹಲ್ಲೇಗೆರೆ ಅವರ ಪುತ್ರ ಡಾ. ವಿವೇಕ್ ಮೂರ್ತಿ ಅವರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಮಟ್ಟಕ್ಕೆ ಇವರ ಪುತ್ರ ಹೋಗಬೇಕೆಂದರೆ ಅವರಿಗೆ ಉತ್ತಮ ಜ್ಞಾನ, ಶಿಕ್ಷಣ, ಚಿಂತನೆ ಸಂಸ್ಕಾರವನ್ನು ಕೊಡಬೇಕಾಗುತ್ತದೆ. ಇಂತಹ ಒಂದು ಕೆಲಸವನ್ನು ಡಾ. ಎಲ್.ಎನ್. ಮೂರ್ತಿಯವರು ಮಾಡಿದ್ದಾರೆ. ಹೀಗಾಗಿ ತಮ್ಮ ಕಣ್ಣ ಮುಂದೆಯೇ ಪುತ್ರ ಅಮೆರಿಕದ ವೈಟ್ ಹೌಸ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನೋಡುತ್ತಿದ್ದಾರೆ. ಇದು ತಂದೆ-ತಾಯಿಯರ ಪುಣ್ಯದ ಫಲವೇ ಸರಿ ಎಂದು ದಿನೇಶ್ ಗೂಳಿಗೌಡ ಹೇಳಿದರು.