Site icon Vistara News

Cauvery Water Dispute : ರಾಜ್ಯಕ್ಕೆ ಕೈಕೊಟ್ಟ ಕಾವೇರಿ ಪ್ರಾಧಿಕಾರ; ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್‌ ನೀರು ಬಿಡಲು ಸೂಚನೆ

Cauvery Water Dispute and vidhana soudha

ನವದೆಹಲಿ: ಕಾವೇರಿ ಜಲ ವಿವಾದದಲ್ಲಿ (Cauvery Water Dispute) ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ನೀಡಿರುವ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority – CWMA) ಎತ್ತಿ ಹಿಡಿದಿದೆ. ಹೀಗಾಗಿ ಮುಂದಿನ 15 ದಿನ ತಮಿಳುನಾಡಿಗೆ ನೀರು ಬಿಡುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಆದರೆ, ರಾಜ್ಯ ಸರ್ಕಾರ ಈಗ ಯಾವ ತೀರ್ಮಾನವನ್ನು ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಅಕ್ಟೋಬರ್ 16ರಿಂದ 15 ದಿನಗಳ ಕಾಲ ನೀರು ಬಿಡುವಂತೆ ಸೂಚನೆ ನೀಡಿದ್ದು, ಪ್ರತಿ ದಿನ 3000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಶಿಫಾರಸಿನಲ್ಲಿ ತಿಳಿಸಿತ್ತು. ಕರ್ನಾಟಕ ಸರ್ಕಾರವು ಇದನ್ನು ಪ್ರಶ್ನೆ ಮಾಡಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಮುಂದೆ ಹೋಗಿತ್ತು. ಈಗ ಅಲ್ಲಿಯೂ ಸಹ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಸಿಡಬ್ಲ್ಯುಆರ್‌ಸಿ ಆದೇಶವನ್ನೇ ಎತ್ತಿಹಿಡಿದಿದೆ.

ಸಿಡಬ್ಲ್ಯುಆರ್‌ಸಿ ಮುಂದೆ ಕರ್ನಾಟಕದ ವಾದ ಏನಿತ್ತು?

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority) ಜತೆ ಅಕ್ಟೋಬರ್‌ 11ರಂದು ನಡೆದಿದ್ದ ಸಭೆಯಲ್ಲಿ ಕರ್ನಾಟಕವು, ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿತ್ತು. ಯಾವುದೇ ಕಾರಣಕ್ಕೂ ನೀರು ಬಿಡಲು ಆಗುವುದಿಲ್ಲ. ದಿನಾಂಕ 10.10.2023ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇಕಡಾ 50.891 ರಷ್ಟು ಇದೆ. ಹೀಗಾಗಿ ನೀಡು ಬಿಡುವುದು ಕಷ್ಟ ಎಂದು ಕರ್ನಾಟಕ ವಾದ ಮಂಡಿಸಿತ್ತು.

ಸಂಕಷ್ಟದ ಹರಿವುಗಳು ಸೇರಿದಂತೆ ಈಗ ಆಗುತ್ತಿರುವ ಜಲ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಗಮನಿಸಿದರೆ ಕರ್ನಾಟಕ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಳ ಆಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳುವುದು ಹಾಗೂ ಆ ಅಂದಾಜಿನ ಭರವಸೆ ಮೇಲೆ ನೀರು ಬಿಡುವುದು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಅನಿಯಂತ್ರಿತ ಜಲಾನಯನದಿಂದ ಉಂಟಾಗುವ ಕೊಡುಗೆಯನ್ನು ಹೊರತುಪಡಿಸಿ ಬಿಳಿಗುಂಡ್ಲುವಿಗೆ ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಾದವನ್ನು ಮಂಡಿಸಿತ್ತು.

ಆಕ್ಷೇಪ ಮಾಡಿದ್ದ ತಮಿಳುನಾಡು

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು, ಮುಂದಿನ 15 ದಿನಗಳವರೆಗೆ ಕರ್ನಾಟಕವು 16,000 ಕ್ಯೂಸೆಕ್ (20.75 ಟಿಎಂಸಿ) ಅನ್ನು ಬಿಡುಗಡೆ ಮಾಡಬೇಕೆಂದು ಆದೇಶಿಸಿತು.

ಇದನ್ನೂ ಓದಿ: Load Shedding : ವಿದ್ಯುತ್‌ ಬೇಡಿಕೆ ಹೆಚ್ಚಿದೆ, ಖರೀದಿ ಬಗ್ಗೆ ಇಂದು ಸಭೆ; ಕರೆಂಟ್ ಉತ್ಪಾದಕರು ರಾಜ್ಯಕ್ಕೇ ಮಾರಬೇಕು: ಸಿಎಂ

ಪ್ರಾಧಿಕಾರ ಯಾವತ್ತೂ ರಾಜ್ಯದ ಪರ ಇಲ್ಲ

ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸಹ ರಾಜ್ಯದ ಪರವಾಗಿ ಯಾವತ್ತೂ ಇಲ್ಲ. ಹೀಗಾಗಿ ಈ ಆದೇಶವನ್ನು ಮತ್ತೆ ಪ್ರಾಧಿಕಾರಕ್ಕೆ ಪ್ರಶ್ನೆ ಮಾಡಿದರೂ ಪ್ರಯೋಜನ ಇಲ್ಲದಂತೆ ಆಗುತ್ತದೆ. ಕಳೆದ ಬಾರಿ ಪ್ರಾಧಿಕಾರದ ಕದ ತಟ್ಟಿದಾಗಲೂ ಕರ್ನಾಟಕದ ಕೈ ಹಿಡಿದಿರಲಿಲ್ಲ. ಮೊದಲು ಆಗಸ್ಟ್‌ 26ರಂದು 5000 ಕ್ಯೂಸೆಕ್‌, ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ಮಾಡಿತ್ತು. ಬಳಿಕ ಸೆಪ್ಟೆಂಬರ್‌ 29ರಂದು ಸಹ ನೀರು ಬಿಡಲು ಆದೇಶಿಸಿತ್ತು. ಎಲ್ಲ ಬಾರಿ ಮನವಿ ಮಾಡಿದಾಗಲೂ CWRC ಹೇಳಿದ್ದೇ ಸರಿ ಎಂದು ಹೇಳಿತ್ತು. ಈಗ ಪುನಃ ಸಿಡಬ್ಲ್ಯುಆರ್‌ಸಿ ಶಿಫಾರಸನ್ನೇ ಎತ್ತಿ ಹಿಡಿಯುವ ಮೂಲಕ ರಾಜ್ಯದ ಸಂಕಷ್ಟಕ್ಕೆ ಧನಿಯಾಗಲೇ ಇಲ್ಲ.

Exit mobile version