Site icon Vistara News

Cauvery Dispute : ಕಾವೇರಿ ಹೋರಾಟಕ್ಕೆ ಧುಮುಕಿದ ಆದಿಚುಂಚನಗಿರಿ ಶ್ರೀ; ರೈತ ಪರ ನಿರ್ಧಾರ ತೆಗೆದುಕೊಳ್ಳಲು ಹಕ್ಕೊತ್ತಾಯ

Nirmalanandanatha swameeji in Cauvery agitation

ಮಂಡ್ಯ: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನವೂ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು(Cauvery Dispute) ಎಂಬ ಸುಪ್ರೀಂಕೋರ್ಟ್‌ ಆದೇಶ (Supreme court order) ಮತ್ತು ಅದರ ಸೂಚನೆಯಂತೆ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ (State Government) ವಿರುದ್ಧ ಕಾವೇರಿ ಕೊಳ್ಳದಲ್ಲಿ ನಡೆಯುತ್ತಿರುವ ಹೋರಾಟದ ಕಣಕ್ಕೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ (Adichunchanagiri matt) ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು (Shri Nirmalanandanath Swameeji) ಧುಮುಕಿದ್ದಾರೆ.

ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಳಗ್ಗಿನಿಂದಲೇ ಪ್ರತಿಭಟನೆ ನಡೆಯುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಸೇರಿದ ರೈತರು ಪ್ರಾಧಿಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಳಗ್ಗೆ ಸುಮಾರು 12 ಗಂಟೆಯ ಹೊತ್ತಿಗೆ ಆದಿಚುಂಚನಗಿರಿ ಶ್ರಿಗಳು ಇತರ ಕೆಲವು ಸ್ವಾಮೀಜಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ತಾವೂ ಪ್ರತಿಭಟನೆಯಲ್ಲಿ ಭಾಗಿಯಾದರು. ಅವರೇ ಸ್ವತಃ ಸ್ವಯಂ ಪ್ರೇರಣೆಯಿಂದ ಬಂದು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿರುವ ರೈತರ ಜತೆ ತಾನು ಸದಾ ಇರುವುದಾಗಿ ಹೇಳಿದ ಸ್ವಾಮೀಜಿ, ರಾಜ್ಯ ಸರ್ಕಾರ ರೈತರ ಪರವಾದ ತೀರ್ಮಾನ ಕೈಗೊಳ್ಳಬೇಕು, ನೀರಿನ ಸಮಸ್ಯೆಯನ್ನು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಮೂಲಕ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಪ್ರಾಧಿಕಾರ ರಚನೆಯಾದಾಗಿನಿಂದಲೂ ತಾರತಮ್ಯ ಎಂದ ಶ್ರೀಗಳು

ʻʻಇದು ಹಲವು ವರ್ಷಗಳಿಂದ ಇರುವ ಸಮಸ್ಯೆಯಾಗಿದೆ. ಹಾಗೆ ನೋಡಿದ್ರೆ ಲಭ್ಯತೆಯ ಆಧಾರದ ಮೇಲೆ ನೀರಿನ ಹಂಚಿಕೆಯಾಗಬೇಕಿದೆ. ಪ್ರಾಧಿಕಾರ ರಚನೆಯಾದಾಗಿನಿಂದಲೂ ನಮಗೆ ತಾರತಮ್ಯವಾಗುತ್ತಲೇ ಬಂದಿದೆ.
ಮಳೆ ಕಡಿಮೆಯಾಗಿ ಡ್ಯಾಂಗಳಲ್ಲಿ ನೀರು ಕಡಿಮೆಯಾದ ಸಂದರ್ಭದಲ್ಲಿ ವ್ಯವಸಾಯಕ್ಕಿಂತಲೂ ಮುಖ್ಯವಾಗಿ ಕುಡಿಯುವ ನೀರಿಗೆ ಸಮಸ್ಯೆ ತಲೆ ದೋರಲಿದೆʼʼ ಎಂದು ಸ್ವಾಮೀಜಿ ಹೇಳಿದರು.

ಕೋರ್ಟ್‌ ನಮ್ಮ ಸಮಸ್ಯೆ ಆಲಿಸಿ ತೀರ್ಪು ಕೊಡಬೇಕಾಗಿತ್ತು

ʻʻನಾವು ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕಿದೆ. ಆದರೆ ಸುಪ್ರೀಂಕೋರ್ಟ್‌ ಕೂಡಾ ನಮ್ಮ ಸಮಸ್ಯೆ ಆಲಿಸಿ ನಂತರ ತೀರ್ಪು ಕೊಡಬೇಕಿತ್ತುʼʼ ಎಂದು ಶ್ರೀಗಳು ಹೇಳಿದರು.

ʻʻತೀರ್ಪು ಪಾಲನೆ ಮಾಡಿದ್ದೇ ಆದ್ರೆ ಸುಮಾರು 7 ಟಿಎಂಸಿ ನೀರು ಹರಿದು ಹೋಗಲಿದೆ. ನೀರು ಬಿಟ್ಟರೆ ಬೆಳೆಗಳಷ್ಟೇ ಅಲ್ಲ ಮನುಷ್ಯರೇ ಒಣಗುವಂತಹ ಸ್ಥಿತಿ ಎದುರಾಗುವ ಆತಂಕ ಇದೆ. ಈಗ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಆದೇಶ ಪಾಲನೆ ಮಾಡಿದ್ರೆ ಜನ ಒಣಗುತ್ತಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವು ಕಾನೂನು ಪಾಲನೆ ಮಾಡಬೇಕಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಜೊತೆಗೆ ನಾನು ಮಾತನಾಡುತ್ತೇನೆ. ಸಂಕಷ್ಟ ಸೂತ್ರ ಬೇಗನ ರಚಿಸಬೇಕಿದೆʼʼ ಎಂದು ಹೇಳಿದರು.

nirmalanandanatha Swameeji at Cauvery Agitation

ಮೇಕೆದಾಟು ಯೋಜನೆ ಜಾರಿ ಅಗತ್ಯ ಎಂದ ಸ್ವಾಮೀಜಿ

ಇದೇ ವೇಳೆ ಮೇಕೆದಾಟು ಯೋಜನೆ ಶೀಘ್ರದಲ್ಲೇ ಜಾರಿಗೆ ತರಬೇಕು ಎಂಬ ಅಭಿಪ್ರಾಯವನ್ನು ಸ್ವಾಮೀಜಿ ವ್ಯಕ್ತಪಡಿಸಿದರು. ʻʻರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಕೈಗೊಂಡು ಸಂಕಷ್ಟದ ಸಮಯದಲ್ಲಿ ಅಲ್ಲಿ ಸಂಗ್ರಹಿಸಿದ ನೀರನ್ನು ಬಳಕೆ ಮಾಡಿಕೊಳ್ಳಬೇಕು. ಇದರಲ್ಲಿ ಸುಮಾರು 50 ಟಿಎಂಸಿ ನೀರು ಸಂಗ್ರಹಿಸಬಹುದಾಗಿದ್ದು, ಸಂಕಷ್ಟ ಕಾಲದಲ್ಲಿ ಬಳಕೆ ಅನುಕೂಲವಾಗುತ್ತದೆ ಎಂದರು.

ಶುಕ್ರವಾರ (ಸೆ. 22) ಸಂಜೆ ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದೆ. ಇದರಲ್ಲಿ ರಾಜ್ಯ ಸರ್ಕಾರ ರೈತರ ಪರವಾದ ನಿರ್ಧಾರ ಕೈಗೊಳ್ಳಲಿ ಎಂದು ಆಗ್ರಹಿಸುತ್ತೇನೆ. ರಾಜ್ಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಮೇಲ್ಮನವಿ ಸಲ್ಲಿಸಬೇಕು, ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಆದೇಶಗಳನ್ನು ಮರುಪರಿಶೀಲಿಸುವಂತೆ ಮನವಿ ಮಾಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Cauvery Dispute : ಕಾವೇರಿ ವಾಸ್ತವ ತಿಳಿಯಲು ಅನ್ಯ ರಾಜ್ಯದ ಅಧಿಕಾರಿಗಳ ತಂಡ ಕಳುಹಿಸಿ; ದೇವೇಗೌಡರ ಸಲಹೆ

ನೀವು ಕರೆಯದಿದ್ದರೂ ನಾನು ಬಂದಿದ್ದೇನೆ ಎಂದ ಶ್ರೀಗಳು

ʻʻಶ್ರೀಮಠ ಯಾವತ್ತೂ ರೈತರ ಜೊತೆ ನಿಲ್ಲುತ್ತದೆ. ನಮ್ಮನ್ನ ನೀವು ಕರೆದಿಲ್ಲ. ಆದ್ರೂ ನಾವು ರೈತರ ಜೊತೆಗೆ ನಿಲ್ಲಲು ಬಂದಿದ್ದೀವಿ. ನೀವು ನಮ್ಮನ್ನು ಕರೆಯಬೇಕಾಗಿಲ್ಲ. ಇದು ನಮ್ಮ ಕರ್ತವ್ಯʼʼ ಎಂದು ಜನರ ಕರತಾಡನಗಳ ನಡುವೆ ಹೇಳಿದರು.

ಪ್ರತಿಭಟನಾ ನಿರತರಿಂದ ರಸ್ತೆ ತಡೆ: ಈ ನಡುವೆ, ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು ಮೈಸೂರು ರಸ್ತೆ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version