ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಮಂಡಳಿಯು (Cauvery water regulation Committee) ಇನ್ನೂ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಆದೇಶ ಮಾಡಿದ್ದರೂ ರಾಜ್ಯ ಸರ್ಕಾರ (State Government) ಇನ್ನೂ ಅದನ್ನು ಪ್ರತಿಭಟಿಸುವ ಧೈರ್ಯ ಮಾಡಿಲ್ಲ. ಕೆಆರ್‌ಎಸ್ ಅಣೆಕಟ್ಟಿನಲ್ಲಿ (KRS Dam) ನೀರೇ ಇಲ್ಲ ಎಂಬ ವಾಸ್ತವ ಕಣ್ಣ ಮುಂದಿದ್ದರೂ (Cauvery Dispute) ಅದನ್ನು ನಿಯಂತ್ರಣ ಸಮಿತಿಯ ಮುಂದೆ ಗಟ್ಟಿ ಧ್ವನಿಯಲ್ಲಿ ಹೇಳದೆ ಇರುವುದೇ ರಾಜ್ಯಕ್ಕೆ ಆಗಿರುವ ಹಿನ್ನಡೆಗೆ ಕಾರಣ ಎಂಬ ಅಭಿಪ್ರಾಯ ಬಲವಾಗಿದೆ. ಮಂಡ್ಯ ಭಾಗದ ರೈತರು ಇದೇ ಮಾತನ್ನು ಹೇಳುತ್ತಿದ್ದಾರೆ. ಈ ನಡುವೆ ನಿಯಂತ್ರಣ ಸಮಿತಿ ತೀರ್ಪಿನ ಬಗ್ಗೆ ಜಲಸಂಪನ್ಮೂಲ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ನೀರಸ ಪ್ರತಿಕ್ರಿಯೆ ನೀಡಿದ್ದಾರೆ.
ಕಾವೇರಿ ಕೊಳ್ಳದಲ್ಲಿ ಪ್ರತಿಭಟನೆ ಆರಂಭ
ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶದ ವಿರುದ್ಧ ಕಾವೇರಿ ಕೊಳ್ಳದಲ್ಲಿ ಆಗಲೇ ಪ್ರತಿಭಟನೆ ಆರಂಭಗೊಂಡಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರಸ್ತೆ ತಡೆ ನಡೆಸಿದ ರೈತರು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ಖಂಡಿಸಿದರು. ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಅವರು, ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಯಾವ ಕಾರಣಕ್ಕೂ ನೀರು ಬಿಡಬಾರದು ಎಂದು ಸರ್ಕಾರಕ್ಕೂ ಎಚ್ಚರಿಕೆ ನೀಡಿದರು.
ಈ ನಡುವೆ, ಈ ಪರಿಸ್ಥಿತಿಯಲ್ಲಿ ಮತ್ತೆ ನೀರು ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುವುದಾಗಿ ದರ್ಶನ್ ಪುಟ್ಟಣಯ್ಯ ನೇತೃತ್ವದ ಸಮಿತಿ, ಕಾವೇರಿ ಕೊಳ್ಳದ ರೈತರ ಸಂಘಟನೆಗಳು ಆಗಲೇ ಎಚ್ಚರಿಕೆ ನೀಡಿವೆ.
ಬಿಡಲು ನೀರು ಎಲ್ಲಿದೆ ಎಂದು ಕೇಳಿದ ಡಿ.ಕೆ.ಶಿವಕುಮಾರ್
ಈ ನಡುವೆ, ನಿಯಂತ್ರಣ ಸಮಿತಿಯ ತೀರ್ಮಾನವನ್ನು ಖಂಡಿಸುವ ಉತ್ಸುಕತೆಯನ್ನು ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ. ಶಿವಕುಮಾರ್ ತೋರಿಸಿಲ್ಲ.
ʻʻನೀರು ಬಿಡೋಕೆ ಸದ್ಯಕ್ಕೆ ನಮ್ಮತ್ರ ನೀರು ಇಲ್ಲ. ನಾಳೆ ಮತ್ತೊಂದು ಮೇಲ್ಮಟ್ಟದ ಸಭೆ ಇದೆ. ಅಲ್ಲಿ ನಮ್ಮ ಅಧಿಕಾರಿಗಳು ಮೆಂಬರ್ ಇದ್ದಾರೆ. ನಾನು ಮತ್ತು ಸಿಎಂ ಯಾವುದೇ ಕಾರಣಕ್ಕೂ ನೀರು ಬಿಡಲು ಆಗಲ್ಲ ಅಂತ ಅಧಿಕಾರಿಗಳಿಗೆ ತಿಳಿಸಿದ್ದೇವೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ʻʻನಿಯಂತ್ರಣ ಸಮಿತಿ 5000 ಕ್ಯೂಸೆಲ್ ನೀರು ಬಿಡಬೇಕು ಎಂದು ಹೇಳಿದೆ. ನೀರು ಬಿಡೋಕೆ ಸದ್ಯಕ್ಕೆ ನಮ್ಮಲ್ಲಿ ನೀರಿಲ್ಲ. ಈ ಸಂಬಂಧ ದೆಹಲಿ ಕಾನೂನು ತಜ್ಞರ ಜೊತೆ ಮಾತನಾಡುತ್ತಿದ್ದೇವೆ. ರೈತರ ಬೆಳೆಗಿಂತ ನಾವು ಕುಡಿಯುವ ನೀರಿಗೆ ಸೇವ್ ಮಾಡಬೇಕಿದೆʼʼ ಎಂದರು.
ʻʻಸುಪ್ರೀಂಕೋರ್ಟ್ ಕೂಡ ನಾವು ನಿರ್ಧಾರ ಮಾಡಕ್ಕಾಗಲ್ಲ ಅಂತ ಕೈ ಚೆಲ್ಲಿದೆ. ಆದರೆ ನಾವು ನೀರು ಬಿಡುವುದು ಬಹಳ ಕಷ್ಟ. ಈ ಬಗ್ಗೆ ಜನ ನಮಗೆ ಸಹಕಾರ ಕೊಡಬೇಕು, ವಿಪಕ್ಷಗಳು ರಾಜ್ಯದ ಹಿತಕ್ಕೆ ಸಹಕಾರ ನೀಡಬೇಕು. ನಾನು ವಿಪಕ್ಷಗಳಂತೆ ಕಮಿಟಿ ರಾಜಕೀಯ ಮಾಡ್ತಿದೆ ಅಂತ ಹೇಳಲ್ಲʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್.
ನೀರು ಬಿಡಲ್ಲ ಎಂದು ಗಟ್ಟಿಯಾಗಿ ನಿಂತರೆ ನಮ್ಮ ಬೆಂಬಲ ಎಂದ ಬೊಮ್ಮಾಯಿ
ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುವುದಿಲ್ಲ ಎಂದು ಗಟ್ಟಿಯಾಗಿ ನಿಂತರೆ ನಾವೂ ಸರ್ಕಾರದ ಜೊತೆಗೆ ನಿಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಡಬ್ಲುಆರ್ ಸಿ ಪ್ರತಿ ದಿನ 5000 ಕ್ಯೂಸೆಕ್ಸ್ ನಂತೆ ತಮಿಳುನಾಡಿಗೆ ಮತ್ತೆ 15 ದಿನ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಸ್ತು ಸ್ಥಿತಿ ನೋಡಿದರೆ, ಕಾವೇರಿಯಲ್ಲಿ ಕುಡಿಯಲಿಕ್ಕೂ ನೀರಿಲ್ಲ. ಮತ್ತೆ 7 ಟಿಎಂಸಿ ನೀರು ಬಿಡಲು ಹೇಳಿದ್ದಾರೆ. ಮಂಡ್ಯ ಜಿಲ್ಲೆ ಒಂದಕ್ಕೆ 32 ಟಿಎಂಸಿ ನೀರು ಬೇಕು. ಇದುವರೆಗೂ ಬಿಟ್ಟಿರುವುದು ಕೇವಲ 7 ಟಿಎಂಸಿ ಮಾತ್ರ. ಭತ್ತ ಕಬ್ಬು, ಮೆಕ್ಕೆಜೋಳ ಎಲ್ಲವೂ ಒಣಗುತ್ತಿದೆ.
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲಿನಿಂದಲೂ ಎಡವುತ್ತಿದೆ. ನಾಳೆ ಸಿಡಬ್ಕುಎಂಎ ಸಭೆ ಇದೆ. ಅಲ್ಲಿ ರಾಜ್ಯ ಸರ್ಕಾರ ವಾಸ್ತವ ಹೇಳಬೇಕು. ಸಭೆಯಿಂದ ಹೊರಬರುತ್ತಾರೋ ಏನು ಮಾಡುತ್ತಾರೊ ಅವರಿಗೆ ಬಿಟ್ಟಿದ್ದು, ಮುಂದಿನ ವಾರ ಸುಪ್ರೀಂ ಕೊರ್ಟ್ ನಲ್ಲಿ ವಿಚಾರಣೆ ಇದೆ. ಅಲ್ಲಿಯೂ ಸರ್ಕಾರ ಬಲವಾಗಿ ವಾದ ಮಾಡಲಿ, ನಮ್ಮ ಕಾವೇರಿ ಮಕ್ಕಳ ಹಿತ ಬಲಿ ಕೊಟ್ಟು ನೀರು ಬಿಡಬೇಡಿ. ಕಾನೂನು ತಂಡ ಮರು ಚಿಂತನೆ ಮಾಡಬೇಕು. ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಇವರು ಗಟ್ಟಿಯಾಗಿ ನಿಲ್ಲಬೇಕು. ಅಂದರೆ ನಾವು ಸರ್ಕಾರದ ಜೊತೆ ನಿಲ್ಲುತ್ತೇವೆ. ಇವರು ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಹೇಳುತ್ತಾರೆ. ಅದನ್ನು ಬಿಟ್ಟು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಮನವೊಲಿಕೆ ಮಾಡಬೇಕು ಎಂದು ಹೇಳಿದರು.