ಬೆಂಗಳೂರು: ತಮಿಳುನಾಡಿಗೆ ಮತ್ತೆ 18 ದಿನಗಳ ಕಾಲ 3000 ಕ್ಯೂಸೆಕ್ (Daily 3000 Cusec) ನೀರು ಬಿಡುಗಡೆ ಮಾಡಬೇಕು ಎಂಬ ಆದೇಶ ನೀಡಿದ ಕಾವೇರಿ ನೀರು ನಿರ್ವಹಣಾ ಸಮಿತಿ (Cauvery water regulation Committee) ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ (Farmers up in arms in Mandya) ಭುಗಿಲೆದ್ದಿದೆ. ಯಾವ ಕಾರಣಕ್ಕೂ ಮೂರು ಸಾವಿರ ಕ್ಯೂಸೆಕ್ ಅಲ್ಲ ಒಂದು ಹನಿ ನೀರೂ ಬಿಡಬಾರದು (Cauvery Dispute) ಎಂದು ಸರ್ಕಾರವನ್ನು ರೈತರು ಆಗ್ರಹಿಸಿದ್ದಾರೆ.
ಸಿಡಬ್ಲ್ಯುಆರ್‌ಸಿ ಆದೇಶ ಪ್ರಕಟವಾಗುತ್ತಿದ್ದಂತೆಯೇ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ತೀವ್ರಗೊಂಡಿತು. ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರೊ ಪ್ರತಿಮೆ ಎದುರು ನಿಂತ ಸಮಿತಿಯ ಸದಸ್ಯರು ಸಮಿತಿಯ ಆದೇಶದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಪ್ರತಿಭಟನಾಕಾರರು ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಪ್ರತಿಯನ್ನು ಸುಟ್ಟು ಹಾಕಿದರು. ವಿಶ್ವೇಶ್ವರಯ್ಯ ಪ್ರತಿಮೆಯ ಮುಂಭಾಗದಿಂದ ಹೆದ್ದಾರಿಗೆ ಆಗಮಿಸಿದ ಅವರು ಅಲ್ಲೇ ಪ್ರತಿಭಟನೆ ನಡೆಸಿದರು.
ಬಳಿಕ ಸ್ವಲ್ಪ ಹೊತ್ತು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ʻʻCWRC ಮತ್ತೆ ಅವೈಜ್ಞಾನಿಕ ತೀರ್ಪು ನೀಡಿದೆ. ನಮ್ಮ ಡ್ಯಾಂ ಬರಿದಾಗುತ್ತಿದೆ. ಇಂತಹ ಸಂದರ್ಭದಲ್ಲಿ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆದೇಶ ಸರಿಯಲ್ಲʼʼ ಎಂದು ಹೇಳಿದರ ಅವರು ಹೆದ್ದಾರಿಯಲ್ಲೇ ಕುರ್ಚಿ ಹಾಕಿ ಕುಳಿತರು.
ಇದನ್ನೂ ಓದಿ: Cauvery Dispute : CWRC ಹೊಸ ಆದೇಶ ರಾಜ್ಯಕ್ಕೆ ಮರಣ ಶಾಸನ, ಸರಕಾರದ ವೈಫಲ್ಯದ ಫಲ; ಎಚ್‌ಡಿಕೆ ವಾಗ್ದಾಳಿ
ಕೆಆರ್‌ಎಸ್ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಸೆರೆ
ಈ ನಡುವೆ, ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಕೆ ಆರ್ ಎಸ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಕೆ ಆರ್ ಎಸ್ ಮುಖ್ಯ ದ್ವಾರದ ಬಳಿ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಈ ವೇಳೆ ಪೊಲೀಸ್ ವ್ಯಾನ್ ಮುಂದೆ ಕುಳಿತು ಕಾರ್ಯಕರ್ತರು ಧಿಕ್ಕಾರ ಕೂಗಿದರು. ಪೊಲೀಸರು ಪ್ರತಿಭಟನಾ ನಿರತರನ್ನು ಬಲವಂತವಾಗಿ ಎಳೆದೊಯ್ದರು ವಾಹನಕ್ಕೆ ತುಂಬಿದರು.
ಜಿಲ್ಲೆಯಾದ್ಯಂತ ಪ್ರತಿಭಟನೆ
ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮಂಗಳವಾರ ಮಂಡ್ಯ ಮಾತ್ರವಲ್ಲ, ಮಳವಳ್ಳಿ, ಕೆಆರ್ ಪೇಟೆಯಲ್ಲೂ ಪ್ರತಿಭಟನೆ ನಡೆಯಿತು. ಹಲವು ಕಡೆ ಬಂದ್ ಆಚರಿಸಲಾಯಿತು. ಬೆಂಗಳೂರು ಬಂದ್‌ಗೆ ಪೂರಕವಾಗಿ ಕಾವೇರಿ ಕೊಳ್ಳದ ಹಲವೆಡೆ ಬಂದ್ ನಡೆಸಲಾಯಿತು. ಇಷ್ಟರ ನಡುವೆಯೇ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ನೀರು ಬಿಡುಗಡೆ ಮುಂದುವರಿಸುವಂತೆ ಸೂಚನೆ ನೀಡಿದ್ದು ಆಕ್ರೋಶ ಹೆಚ್ಚುವಂತೆ ಮಾಡಿದೆ.
ಕಳೆದ ಸೆ. 13ರ ಆದೇಶದಲ್ಲಿ 15 ದಿನಗಳ ಅವಧಿಗೆ ದಿನವೂ 5000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚಿಸಿದ್ದ ಸಮಿತಿಯ ನಿರ್ಧಾರವನ್ನು ಬಳಿಕ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ಗಳೆರಡೂ ಅನುಮೋದಿಸಿದ್ದವು. ಈಗ ಸಮಿತಿಯು ಸೆ. 28ರಿಂದ ಜಾರಿಗೆ ಬರುವಂತೆ ಅಕ್ಟೋಬರ್ 15ರವರೆಗೆ 15 ದಿನಗಳ ಕಾಲ ಮತ್ತೆ 18 ದಿನ ನೀರು ಬಿಡುಗಡೆ ಮಾಡುವಂತೆ ಸೂಚಿಸಿದೆ. ರೈತರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.