Site icon Vistara News

Cauvery Protest : ಮಂಡ್ಯದಲ್ಲಿ ಬೆಳಗ್ಗಿನಿಂದಲೇ ಜಲಾಕ್ರೋಶ; ತಮಿಳುನಾಡಿಗಷ್ಟೇ ಅಲ್ಲ ಬೆಂಗಳೂರಿಗೂ ನೀರು ಬಿಡಬೇಡಿ!

Cauvery protest at Mandya

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸಬೇಕು (Cauvery dispute) ಎಂಬ ಸುಪ್ರೀಂಕೋರ್ಟ್‌ ಆದೇಶವನ್ನು (Supreme court order) ಪಾಲನೆ ಮಾಡಬಾರದು ಎಂದು ಆಗ್ರಹಿಸಿ ಮಂಡ್ಯ ಜಿಲ್ಲೆಯ ಹಲವೆಡೆ ಪ್ರತಿಭಟನೆ (Protest at Mandya) ಭುಗಿಲೆದ್ದಿದೆ. ಮಂಡ್ಯದ ಕನ್ನಡ ಪರ ಹೋರಾಟಗಾರರಂತೂ (Kannada activists) ತಮಿಳುನಾಡಿಗೆ ಮಾತ್ರವಲ್ಲ ಬೆಂಗಳೂರಿಗೂ ನೀರು ಕೊಡಬೇಡಿ (Dont release water to Bangalore also) ಎಂದು ಆಗ್ರಹಿಸಿದರು.

ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯಿಂದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರಧಾನ ಪ್ರತಿಭಟನೆ (Cauvery protest) ನಡೆಯುತಿದ್ದು, ಸರ್ಕಾರದ ವಿರುದ್ದ ಧಿಕ್ಕಾರ ಕೂಗಲಾಗುತ್ತಿದೆ. ಇನ್ನೊಂದು ಕಡೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ತೊರೆಕಾಡನಹಳ್ಳಿಯಲ್ಲಿರುವ ಬೆಂಗಳೂರು ಜಲಮಂಡಳಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಬೆಂಗಳೂರಿಗೆ ನೀರು ಬಿಡಬೇಡಿ ಎಂದು ಆಗ್ರಹಿಸಿದರು.

ತೊರೆಕಾಡನಹಳ್ಳಿಯಲ್ಲಿ ಕನ್ನಡ ಪರ ಸಂಘಟನೆಗಳ ಹೋರಾಟ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರಿಗೆ ನೀರು ಸರಬರಾಜು ಆಗುವ ಬೆಂಗಳೂರು ಜಲಮಂಡಳಿಯ ಕೇಂದ್ರವಿದೆ. ಇಲ್ಲಿಗೆ ಕನ್ನಡಪರ ಸಂಘಟನೆ ಮುತ್ತಿಗೆ ಹಾಕಿದೆ.

ತೊರೆಕಾಡನಹಳ್ಳಿಯಲ್ಲಿರುವ ಬೆಂಗಳೂರು ಜಲಮಂಡಳಿ ಕೇಂದ್ರಕ್ಕೆ ಮುತ್ತಿಗೆ

ತಮಿಳುನಾಡಿಗೆ ನೀರು ಬಿಟ್ಟಿರುವುದನ್ನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಬೆಂಗಳೂರಿನ ಜನರು ಕಾವೇರಿ ನೀರಿನ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ. ಕುಡಿಯಲು ನೀರು ಕೊಡದಿದ್ದರೆ ಅವರು ಬೀದಿಗೆ ಬಂದು ಹೋರಾಟ ಮಾಡ್ತಾರೆ. ಕಾವೇರಿ ನೀರಿನ ಅವಶ್ಯಕತೆ ಎಲ್ಲರಿಗೂ ಇದೆ ಎಲ್ಲರು ಹೋರಾಟಕ್ಕೆ ಬಂದು ರೈತರಿಗೆ ಬೆಂಬಲ ನೀಡಿ ಎಂದು ಆಗ್ರಹಿಸಿದರು. ತಮಿಳುನಾಡಿಗೆ ಹೊಗುತ್ತಿರುವ ನೀರನ್ನು ತಕ್ಷಣವೇ ರಾಜ್ಯ ಸರ್ಕಾರ ನಿಲ್ಲಿಸಬೇಕು. ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾವೇರಿ ಹೋರಾಟಕ್ಕೆ ಆದಿಚುಂಚನಗಿರಿ ಶ್ರಿಗಳ ಆಗಮನ ನಿರೀಕ್ಷೆ

ಈ ನಡುವೆ, ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯಿಂದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರಾಧಿಕಾರ, ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗುತ್ತಿದೆ.

ಕಾವೇರಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಷಿ ಅವರು, ಭಾಷೆ ನೆಲ ನೀರಿನ ಹೋರಾಟದ ವಿಷಯ ಬಂದಾಗ ಎಲ್ಲರೂ ಹೋರಾಟಗಾರರಾಗ್ತೇವೆ. ಬರಿದಾಗಿರೊ ಕಾವೇರಿಗೆ ನಿನ್ನೆ ನೀಡಿರೊ ಸುಪ್ರಿಂ ತೀರ್ಪು ಮರಣ ಶಾಸನವಾಗಿದೆ ಎಂದರು. ಇಂತಹ ದುಸ್ಥಿತಿಯಲ್ಲಿ ನಡೆ ಮುಂದೆ ನಡೆ ಮುಂದೆ ಎಂಬಂತೆ ಮಾಜಿ ಸಂಸದರಾದ ದಿವಂಗತ ಜಿ‌ ಮಾದೇಗೌಡ, ಕೆ ಎಸ್ ಪುಟ್ಟಣಯ್ಯ ಸೇರಿದಂತೆ ಅನೇಕ ಹೋರಾಟಗಾರರ ಸ್ಪೂರ್ತಿಯಿಂದ ಹೋರಾಟ ಮುಂದುವರೆಯುತ್ತಿದೆ ಎಂದರು.

ಇದೇವೇಳೆ, ಮಂಡ್ಯದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಇದರ ನಡುವೆಯೇ ರೈತ ಹಿತರಕ್ಷಣಾ ಸಮಿತಿ ಕರೆ ಕೊಟ್ಟಿರುವ ಸೆ. 23ರ ಮಂಡ್ಯ ಬಂದ್‌ಗೂ ಸಿದ್ಧತೆಗಳು ನಡೆಯುತ್ತಿವೆ. ಬೆಳಗ್ಗೆ ಆರರಿಂದ ಬಂದ್‌ ಆರಂಭವಾಗಲಿದೆ.

Exit mobile version