ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಪ್ರತಿಭಟಿಸಿ (Cauvery protest) ರಾಜ್ಯ ಸರ್ಕಾರದ ವಿರುದ್ಧ ನಡೆದ ಮಂಡ್ಯ ಬಂದ್ (Mandya bandh), ಸೆ. 26ಕ್ಕೆ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore Bandh) ಸಂಬಂಧಿಸಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಣ್ಣಗಿನ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಪ್ರತಿಭಟನೆ ಬಂದ್ ಮೂಲಕ ಬೆಂಗಳೂರಿನ ಗೌರವಕ್ಕೆ ಮಸಿ ಬಳಿಯಬೇಡಿ, ಬಂದ್ ಬೇಡ ಎಂದು ಹೇಳಿದರೆ ಸಿದ್ದರಾಮಯ್ಯ ಅವರಂತೂ ಪ್ರತಿಭಟನೆಯ ಹಕ್ಕು ಎಲ್ಲರಿಗೂ ಇದೆ, ಅದನ್ನು ನಾವು ತಡೆಯುವುದಿಲ್ಲ ಎಂದಿದ್ದಾರೆ.
ರಾಜ್ಯದ ಹಿತ ಕಾಪಾಡಲು ನಾವೇ ಇದ್ದೇವೆ, ಬಂದ್ ಯಾಕೆ?
ʻʻಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಅವರವರ ಹೋರಾಟ ಅವರು ಮಾಡ್ತಾರೆ. ಆದರೆ, ಈ ಹೋರಾಟ ಯಾಕಾಗಿ, ಯಾರ ವಿರುದ್ಧ? ಸರ್ಕಾರವೇ ರೈತರ ಪರವಾಗಿ ನಿಂತಿದೆ. ನಾವೇ ಹೋರಾಡುತ್ತಿದ್ದೇವೆʼʼ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ʻʻಬೆಂಗಳೂರು ಬಂದ್ ಮಾಡೋದು ಬೇಡ. ಯಾವ ಲಾಭಕ್ಕಾಗಿ ಬಂದ್ ಮಾಡ್ತಾರೆ? ಸರ್ಕಾರವೇ ಹೋರಾಟಕ್ಕೆ ನಿಂತಿದೆ. ಬಂದ್ ಮಾಡೋದ್ರಿಂದ ಯಾವುದೇ ಅನುಕೂಲ ಇಲ್ಲ. ಬೆಂಗಳೂರು ಮರ್ಯಾದೆಯನ್ನ ಹಾಳುಗೆಡವಬೇಡಿ. ಬೆಂಗಳೂರಿನ ಮರ್ಯಾದೆ ಹಾಳು ಮಾಡಿದರೆ ನೀವೇ ಹೃದಯಕ್ಕೆ ಚುಚ್ಚಿಕೊಂಡ ಹಾಗೆ. ಬೆಂಗಳೂರಿನಲ್ಲಿ ಎಲ್ಲಾ ಭಾಷೆ, ಬೇರೆ ಬೇರೆ ರಾಜ್ಯದ ಜನ ವಾಸವಾಗಿದ್ದಾರೆʼʼ ಎಂದು ಹೇಳಿದರು.
ಕಾವೇರಿ ಕುರಿತು ಪ್ರತಿಪಕ್ಷಗಳು ರಾಜಕಾರಣ ನಡೆಸುತ್ತಿವೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್, ʻʻಒಳಗಡೆ ಬಂದಾಗ ರಾಜ್ಯದ ಹಿತ, ಹೊರಗಡೆ ಹೋದಾಗ ರಾಜಕಾರಣ ನಡೆಯುತ್ತದೆ. ಹೊಸ ಹುರುಪು ಪ್ರತಿಭಟನೆ ಮಾಡ್ತಾ ಇದ್ದಾರೆ ಮಾಡಲಿʼʼ ಎಂದು ಎಚ್.ಡಿ ಕುಮಾರಸ್ವಾಮಿ ಅವರ ಹೆಸರು ಹೇಳದೆಯೇ ಹೇಳಿದರು.
ʻʻನೀರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಅಂಕಿ ಅಂಶ ಹೇಳಿದರೆ ರಾಜ್ಯದ ಹಿತಕ್ಕೆ ಧಕ್ಕೆ ಆಗುತ್ತದೆ. ದೇವೇಗೌಡರು ಹಿರಿಯ ಮುಖಂಡರು. ಅವರು ಹಿಂದೆ ಕೊಟ್ಟ ಒಂದು ಇಂಟರ್ ವ್ಯೂ ತೆಗೆದು ನೋಡಲಿ ಗೊತ್ತಾಗುತ್ತದೆʼʼ ಎಂದು ಹೇಳಿದ ಶಿವಕುಮಾರ್, ʻʻಕುಮಾರಸ್ವಾಮಿ ಅವರೇನೋ ಮಾತಾಡಿದ್ದಾರೆ ಅಮಿತ್ ಷಾ ಜೊತೆ ಅಂದ್ರಲ್ವಾ? ಸೂಕ್ಷ್ಮ ವಾಗಿ ಮಾತಾಡಿದ್ದೇವೆ ಅಂತ ಹೇಳಿದ್ದಾರಲ್ವಾ? ಅದೇನೇನು ನುಡಿಮುತ್ತು ಆಡಿದಾರೆ ಏನು ಅಂತ ಹೇಳಲಿ. ನಾವು ಮೂರ್ಖರೇʼʼ ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಲಿ ಅಂತ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಟಿ ರವಿಯವರಿಗೆ ಸದ್ಯಕ್ಕೆ ಎಲ್ಲೂ ಜಾಗವಿಲ್ಲ ಹಾಗಾಗಿ ಮಂಡ್ಯಕ್ಕೆ ಹೋಗಿದ್ದಾರೆ ಎಂದು ಹೇಳಿದರು. ದೇವೇಗೌಡರೇ ಪ್ರಧಾನಿ ಮಧ್ಯಪ್ರವೇಶ ಮಾಡಲಿ ಎಂದು ಹೇಳಿದ್ದಾರೆ ಎಂದು ನೆನಪಿಸಿದರು.
ಇದನ್ನೂ ಓದಿ: Cauvery protest : ಸೆ. 26ರ ಬೆಂಗಳೂರು ಬಂದ್‌ಗೆ ಭಾರಿ ಬೆಂಬಲ; ಏನಿರುತ್ತೆ? ಏನಿರಲ್ಲ?; ಕರ್ನಾಟಕ ಬಂದ್‌ಗೂ ಪ್ಲ್ಯಾನಿಂಗ್
ಚಳುವಳಿಯನ್ನು ನಿಲ್ಲಿಸುವುದಿಲ್ಲ ಎಂದ ಸಿದ್ದರಾಮಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯತ್ತಿರುವುದನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಚಳುವಳಿ ಮಾಡಲು ಅವಕಾಶ ಇದೆ. ನಾವು ಅದನ್ನ ನಿಲ್ಲಿಸುವುದಿಲ್ಲ ಎಂದರು. ಮಂಗಳವಾರ ಬೆಂಗಳೂರು ಬಂದ್ ಬಗ್ಗೆ ಸಿಎಂ ಈ ಪ್ರತಿಕ್ರಿಯೆ ನೀಡಿದರು.
ಉಚ್ಚ ನ್ಯಾಯಾಲಯದ ಆದೇಶ ಬರುವ ಮುನ್ನವೇ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಪಕ್ಷ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನ್ಯಾಯಾಲಯದಲ್ಲಿ ಸುಳ್ಳು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.