ಮಂಡ್ಯ: ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಿಂದ ಮಹದೇಶ್ವರ ಬೆಟ್ಟಕ್ಕೆ ಬ್ರಹ್ಮಚಾರಿ ಯುವಕರು ಪಾದಯಾತ್ರೆ ಹೊರಟಿರುವ ಘಟನೆ ನಡೆದಿದೆ. ಅವಿವಾಹಿತ ಯುವಕರ ಪಾದಯಾತ್ರೆಗೆ ನಟ, ನಿರ್ಮಾಪಕ ಡಾಲಿ ಧನಂಜಯ್ (Dhananjay) ಚಾಲನೆ ನೀಡಿದ್ದು, ಸ್ವಲ್ಪ ದೂರು ಪಾದಯಾತ್ರಿಗಳೊಂದಿಗೆ ಹೆಜ್ಜೆ ಹಾಕಿದರು. 30 ವರ್ಷ ದಾಟಿದರೂ ಮದುವೆ ಆಗದ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿದ್ದಾರೆ ಬ್ರಹ್ಮಚಾರಿ ಯುವಕರು.
ಫೆ.23ರರಿಂದ ಮೂರು ದಿನ ನಡೆಯಲಿರುವ ಪಾದಯಾತ್ರೆಗೆ ಉತ್ತಮ ರೆಸ್ಪಾನ್ಸ್ ದೊರೆತಿದೆ. ಕೇರಳ, ಆಂಧ್ರಪ್ರದೇಶದಿಂದಲೂ ಪಾದಯಾತ್ರೆಗೆ ಇಬ್ಬರು ಅವಿವಾಹಿತರು ಬಂದಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಬಹುತೇಕರು ಯುವ ರೈತರು. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲವೆಂದು ಬೇಸರದಲ್ಲೇ ದೇವರ ಮೊರೆ ಹೋಗಿದ್ದಾರೆ.
ರೈತರ ಮಕ್ಕಳಿಗೂ ದೇವರು ಹೆಣ್ಣು ಕೊಡುವ ಬುದ್ಧಿ ಕೊಡಲಿ ಎಂದು ಪಾರ್ಥನೆ ಸಲ್ಲಿಸಿದ್ದಾರೆ. ಮೂರು ಷರತ್ತು ಹಾಕಿ ಕೆ.ಎಂ.ದೊಡ್ಡಿ ಗ್ರಾಮದ ಅವಿವಾಹಿತರ ತಂಡ ಪಾದಯಾತ್ರೆ ಆಯೋಜಿಸಿದೆ. ಅದರಲ್ಲಿ ʻʻಕಡ್ಡಾಯವಾಗಿ 30 ವರ್ಷ ದಾಟಿರಬೇಕು. ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶ ಇಲ್ಲ. ನಿಶ್ಚಿತಾರ್ಥ ಆದವರೂ ಪಾದಯಾತ್ರೆಗೆ ಬರುವಂತಿಲ್ಲʼʼ.
ಅವಿವಾಹಿತರನ್ನು ಸಂಘಟಿಸಿ ಆತ್ಮಸ್ಥೈರ್ಯ ತುಂಬುವ ಉದ್ದೇಶ
ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಊಟ, ಪಾನೀಯ, ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟ ತಲುಪಲಿದ್ದಾರೆ ಯುವಕರು.
ನಟ ಡಾಲಿ ಧನಂಜಯ್ ಮಾತನಾಡಿ ʻಮದುವೆ ಆಗಿಲ್ಲ ಎಂದು ಪಾದಯಾತ್ರೆ ನಡೆಸುತ್ತಿರುವುದನ್ನು ಕೇಳಿದ್ದು ನಾನು ಮೊದಲ ಬಾರಿ. ಸ್ನೇಹಿತರ ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಪಾದಯಾತ್ರೆ ವಿಚಾರ ನೋಡಿದಾಗ ತಮಾಷೆ ಅನ್ನಿಸಿತು. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದಾಗ ನಿಜಕ್ಕೂ ಗಂಭೀರವಾದ ವಿಚಾರ ಎಂದೆನಿಸಿತು. ನಾನು ಹಳ್ಳಿಯಿಂದಲೇ ಬಂದಿರುವುದು. ಹಳ್ಳಿಗಳಿಗೆ ಹೋದಾಗಲೆಲ್ಲ ಯುವಕರನ್ನು ಮಾತನಾಡಿಸಿದಾಗ ಹೆಣ್ಣು ಸಿಗುತ್ತಿಲ್ಲ ಎಂದು ಹೇಳುತ್ತಾರೆ.
ಇದು ಕೇವಲ ಪಾದಯಾತ್ರೆ ಮಾತ್ರ ಅಲ್ಲ ಜಾಗೃತಿ ಕಾರ್ಯಕ್ರಮ. ಪಾದಯಾತ್ರೆ ಹೊರಟಿರುವವರು ಮುಂದಿನ ವರ್ಷ ಮದುವೆಯಾಗಿ ಬೆಟ್ಟಕ್ಕೆ ಹೋಗಲಿ ಅಂತ ಶುಭ ಹಾರೈಸುತ್ತೇನೆʼʼಎಂದರು.